ಶನಿವಾರಸಂತೆ, ಮೇ ೨೩: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚಿಕ್ಕ ಭಂಡಾರ ಗ್ರಾಮದಲ್ಲಿ ೧೮ ಹಳ್ಳಿಗಳ ಗ್ರಾಮ ದೇವತೆ ಶ್ರೀದಂಡಿನ ಮಾರಿಯಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
೨ ತಿಂಗಳಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು ಐವರು ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳ ರೀತ್ಯ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿ, ದಂಡಿನ ಮಾರಿಯಮ್ಮ ದೇವತೆಯ ಪ್ರತಿಷ್ಠಾಪನೆಯೊಂದಿಗೆ ಉದ್ಘಾಟಿಸಲಾಯಿತು.
ಈ ಸಂದರ್ಭ ದೇವಸ್ಥಾನ ಸಮಿತಿ ಕಾರ್ಯದರ್ಶಿಗಳಾದ ದೇವರಾಜೇಗೌಡ ಹಾಗೂ ಮೇಲಪ್ಪ ಮಾತನಾಡಿ, ಶತಮಾನಕ್ಕೂ ಹಳೆಯದಾದ ಶಿಥಿಲಾವಸ್ಥೆಯಲ್ಲಿದ್ದ ಪುರಾತನ ದೇವಸ್ಥಾನವನ್ನು ಸುತ್ತಮುತ್ತಲಿನ ೧೮ ಗ್ರಾಮಗಳ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಮಾಡಿ ಉದ್ಘಾಟಿಸಲಾಗಿದೆ. ೫ ವರ್ಷಕ್ಕೊಮ್ಮೆ ೧೮ ಹಳ್ಳಿಗಳ ಗ್ರಾಮದೇವತೆಯ ಜಾತ್ರಾ ಮಹೋತ್ಸವವೂ ನಡೆಯಲಿದ್ದು ಇದೇ ಮೇ ೩೧ ರಂದು ಜಾತ್ರೆಯನ್ನು ವಿಜೃಂಭಣೆಯಿAದ ನಡೆಸಲು ತೀರ್ಮಾನಿಸಿದ್ದು ಗ್ರಾಮಗಳ ಪ್ರಮುಖರೆಲ್ಲರು ಸೇರಿ ಸಮಿತಿ ರಚನೆ ಮಾಡಿಕೊಳ್ಳಲಾಗಿದೆ ಎಂದರು.
ಜಾತ್ರಾ ಸಮಿತಿ ಅಧ್ಯಕ್ಷ ಬಿ.ಬಿ.ಗಿರೀಶ್, ಉಪಾಧ್ಯಕ್ಷ ಮಂಜುನಾಥ ಗೌಡ, ಗೌರವ ಅಧ್ಯಕ್ಷ ಹೇಮಚಂದ್ರ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು. ೧೮ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.