ಸೋಮವಾರಪೇಟೆ, ಮೇ ೨೩ : ಇಲ್ಲಿನ ತಾಲೂಕು ಕಚೇರಿಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಳವಡಿಸಿರುವ ಕಾವೇರಿ-೨ ತಂತ್ರಾAಶದಿAದ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಿಂದಿನ ಸಾಲಿನ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ನೋಂದಣಾಧಿಕಾರಿಯವರ ಕಚೇರಿಯಲ್ಲಿ ಯಾವುದೇ ದಾಖಲೆಗಳನ್ನು ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಯಾವುದೇ ದಾಖಲೆಯು ಅರ್ಧ ಗಂಟೆಯಲ್ಲಿ ನೋಂದಣಿ ಆಗುತ್ತಿತ್ತು. ಏಪ್ರಿಲ್ ತಿಂಗಳಿನಲ್ಲಿ ಆಗಿನ ಸರ್ಕಾರ ನೋಂದಣಿಗಾಗಿ ಕಾವೇರಿ-೨ ತಂತ್ರಾAಶ ಜಾರಿಗೊಳಿಸಿದ ನಂತರ ಸಮಸ್ಯೆ ಉದ್ಭವವಾಗಿದೆ ಎಂದು ಸೋಮವಾರಪೇಟೆಯ ನೋಟರಿ ಹೆಚ್.ಸಿ. ನಾಗೇಶ್ ಸೇರಿದಂತೆ ಇತರರು ಆರೋಪಿಸಿದ್ದಾರೆ.
ಪ್ರಸ್ತುತ ನೋಂದಣಿ ಮಾಡಬೇಕಾದ ದಾಖಲಾತಿಗಳನ್ನು ಆನ್ಲೈನ್ ನಲ್ಲಿ ದಾಖಲಿಸಬೇಕಾಗಿದೆ. ಆನ್ ಲೈನ್ನಲ್ಲಿ ಕಾವೇರಿ- ೨ ತಂತ್ರಾAಶ ಲಾಗಿನ್ ಆಗುತ್ತಿಲ್ಲ. ಇದರಿಂದಾಗಿ ಯಾವುದೇ ದಾಖಲಾತಿಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ದಾಖಲಾತಿಗಳನ್ನು ನೋಂದಣಿ ಕಛೇರಿಯಲ್ಲಿರುವ ತಂತ್ರಜ್ಞರ ಮೂಲಕ ದಾಖಲಿಸಬೇಕಾಗಿದ್ದು, ತಂತ್ರಜ್ಞರು ಸೋಮವಾರಪೇಟೆಗೆ ಆಗಮಿಸುವ ಸಂದರ್ಭ ಒಂದೆರಡು ದಾಖಲಾತಿಗಳನ್ನು ಮಾತ್ರ ದಾಖಲಿಸಿ ೨-೩ ದಿನಗಳು ಕಳೆದ ನಂತರ ನೋಂದಣಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದರೊಂದಿಗೆ ನೋಂದಣಿ ಶುಲ್ಕವನ್ನು ದುಪ್ಪಟ್ಟು ಮಾಡಲಾಗಿದೆ. ಕೃಷಿ ಜಮೀನುಗಳು ನೋಂದಣಿ ಆಗುತ್ತಿಲ್ಲ. ಕೃಷಿ ಸಾಲದ ಅರ್ಜಿ ನೋಂದಾಯಿಸಲು ವಾರಾನುಗಟ್ಟಲೆ ಕಾಯಬೇಕಾಗಿದೆ. ಯಾವುದೇ ಪೂರ್ವಭಾವಿ ತಯಾರಿ ಇಲ್ಲದೇ, ಸಿಬ್ಬಂದಿಗೆ ತರಬೇತಿ ನೀಡದೇ ಆನ್ ಲೈನ್ ಪದ್ಧತಿ ಜಾರಿ ಮಾಡಿರುವುದು ಸರಿಯಲ್ಲ. ಸರ್ಕಾರದ ನೀತಿಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ ಎಂದು ದೂರಿದ್ದಾರೆ.
ನೂತನ ನಿಯಮದಿಂದಾಗಿ ಜಾಗದ ಮೇಲಿನ ಸಾಲ, ಮಾರಾಟ, ಖರೀದಿ, ಭೋಗ್ಯ, ಜಮೀನು ಅಡಮಾನ, ಹಕ್ಕು ಬಿಡುಗಡೆ, ದಾನ ಪತ್ರ, ವಿಲ್ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗಿದೆ. ಈಗಿನ ಸರ್ಕಾರ ತಕ್ಷಣ ಈ ಬಗ್ಗೆ ಗಮನ ಹರಿಸಿ ಹಳೆ ಪದ್ಧತಿಯಂತೆಯೇ ನೋಂದಣಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.