ಮಡಿಕೇರಿ, ಮೇ ೨೩: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮಪಂಚಾಯಿತಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಧಿಕಾರ ದುರುಪಯೋಗಪಡಿಸಿ ಕೊಂಡು ಸರಕಾರಕ್ಕೆ ವಂಚನೆ ಮಾಡಿರುವುದಾಗಿ ಕೂಡಿಗೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷೆ ಮಂಗಳ ಪ್ರಕಾಶ್ ಅವರು, ತಾನು ಪಂಚಾಯಿತಿ ಅಧ್ಯಕ್ಷೆಯಾಗಿ ೨ ವರ್ಷಗಳಿಂದ ಅಧಿಕಾರದಲ್ಲಿದ್ದು, ತನಗೆ ವಿದ್ಯಾಭ್ಯಾಸ ಹಾಗೂ ಸಾಮಾನ್ಯ ವಿಚಾರದ ಬಗ್ಗೆ ಕೊರತೆ ಇರುವುದರಿಂದ ಅದನ್ನೇ ಅಸ್ತçವನ್ನಾಗಿ ಬಳಸಿಕೊಂಡ ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿದ್ದ ಆಯೆಷಾ ಹಾಗೂ ಕಂಪ್ಯೂಟರ್ ವಿಭಾಗದ ಸಿಬ್ಬಂದಿ ಜ್ಯೋತಿ ಎಂಬವರುಗಳು ಸಾಕಷ್ಟು ದುರುಪಯೋಗಪಡಿಸಿಕೊಂಡಿದ್ದಾರೆ. ಪಂಚಾಯಿತಿಯಲ್ಲಿ ತನ್ನ ಗಮನಕ್ಕೆ ಬಾರದೆ ನರೇಗಾ ಯೋಜನೆ ಹಾಗೂ ಸಣ್ಣ ನೀರಾವರಿ ನಿಗಮದ ಯೋಜನೆ ಹಣವನ್ನು ದುರುಪಯೋಗಪಡಿಸಿ ಕೊಂಡಿರುವ ಬಗ್ಗೆ ಪ್ರಶ್ನಿಸಿ ತನಿಖೆಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರಿಂದ ಈ ಬಗ್ಗೆ ತನಿಖೆ ನಡೆದು ದುರುಪಯೋಗಪಡಿಸಿಕೊಂಡ ಅಧಿಕಾರಿಗಳಿಗೆ ದಂಡ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಮೇಲೆ ವಿನಾ ಕಾರಣ ಆರೋಪ, ದ್ವೇಷ ಸಾಧನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ ತನ್ನ ಗಮನಕ್ಕೆ ಬಾರದೆ ಅಭಿವೃದ್ಧಿ ಅಧಿಕಾರಿ ಕ್ರಿಯಾಯೋಜನೆ ತಯಾರಿಸಿದ್ದು, ಇದರಲ್ಲೂ ಅವ್ಯವಹಾರ ಆಗಿದೆ. ಇದು ಗಮನಕ್ಕೆ ಬಂದ ನಂತರ ತಾನು ಸಹಿ ಮಾಡಿಲ್ಲ. ಬದಲಿಗೆ ತನಿಖೆ ನಡೆಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿ ಕಾರಿ ಜಯಣ್ಣ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಕಾಶ್ ಅವರಿಗೂ ದೂರು ನೀಡಲಾಗಿದೆ. ಅವರುಗಳು ಸ್ಪಂದಿಸದ ಕಾರಣ ಸರಕಾರದ ಪ್ರಬಾರ ಮುಖ್ಯ ಕಾರ್ಯದರ್ಶಿಗಳಿಗೆ ದಾಖಲೆಗಳೊಂದಿಗೆ ದೂರು ನೀಡಿದ್ದೇನೆ. ಲೋಕಾಯುಕ್ತರಿಗೂ ದೂರು ಸಲ್ಲಿಸಿದ್ದು, ತನಿಖೆ ನಡೆಯುತ್ತಿರುವುದರಿಂದ ಕ್ರಿಯಾ ಯೋಜನೆಗೆ ಸಹಿ ಮಾಡಿರುವುದಿಲ್ಲ. ಆದರೆ, ಕೆಲವು ಸದಸ್ಯರು ಸಹಿ ಮಾಡದಿರುವುದನ್ನೇ ನೆಪವಾಗಿರಿಸಿ ಸಭೆಗಳಿಗೆ ಗೈರಾಗುವುದಲ್ಲದೆ, ತನ್ನ ಮೇಲೆ ಅನವಶ್ಯಕ ಆರೋಪ ಮಾಡುತ್ತಿದ್ದಾರೆ. ಮಾಧ್ಯಮಗಳಿಗೂ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ಹೇಳಿದರು.
ಗ್ರಾ.ಪಂ. ಸದಸ್ಯೆ ಜಯಶೀಲ ಮಾತನಾಡಿ, ೧ನೇ ಹಣಕಾಸು ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಅಭಿವೃದ್ಧಿ ಅಧಿಕಾರಿಗಳೇ ತಯಾರಿಸಿ ಸಹಿ ಮಾಡಿದ್ದಾರೆ. ಇದಕ್ಕೆ ಅಧ್ಯಕ್ಷರು ಸಹಿ ಮಾಡಿಲ್ಲ. ಕಳೆದ ೬ ತಿಂಗಳಿನಿAದ ಈ ಬೆಳವಣಿಗೆ ನಡೆಯುತ್ತಿದ್ದು, ಅಧ್ಯಕ್ಷರು ಇದುವರೆಗೆ ಸಭೆಗಳಿಗೆ, ಪಂಚಾಯಿತಿಗೆ ಗೈರಾಗಿಲ್ಲ. ಸರ್ವಾಧಿಕಾರತನ ತೋರಿಲ್ಲ. ಬದಲಿಗೆ ಅಭಿವೃದ್ಧಿ ಅಧಿಕಾರಿಗಳು ಸರ್ವಾಧಿಕಾರ ತೋರಿದ್ದಕ್ಕೆ ನಮ್ಮಲ್ಲಿ ದಾಖಲೆಗಳಿವೆ ಎಂದು ಹೇಳಿದರು.
ಕ್ರಿಯಾಯೋಜನೆಗೆ ಸಹಿ ಮಾಡದ್ದನ್ನು ಆಕ್ಷೇಪಿಸಿ ಗುತ್ತಿಗೆ ಪಡೆದುಕೊಂಡವರು ಅಧ್ಯಕ್ಷರನ್ನು ನಿಂದಿಸುತ್ತಿದ್ದಾರೆ. ಅಲ್ಲದೆ, ಅಧ್ಯಕ್ಷರ ಪತಿಯ ಮೇಲೆ ಹಲ್ಲೆ ಮಾಡಿ ಅವರ ಮೇಲೆಯೆ ಜಾತಿ ನಿಂದನೆ ಮೊಕದ್ದಮೆ ಹೂಡಲು ಪ್ರಯತ್ನ ಕೂಡ ಆಗಿದೆ. ಅವ್ಯವಹಾರದ ಬಗ್ಗೆ ಲೋಕಾ ಯುಕ್ತಕ್ಕೂ ದೂರು ನೀಡಲಾಗಿದೆ. ಆದರೂ, ಕೆಲವರು ಅನವಶ್ಯಕ ಆರೋಪಗಳನ್ನು ಮಾಡುತ್ತಿರುವುದ ರಿಂದ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಬಂದಿರುವುದಾಗಿ ಹೇಳಿದರು. ಇದೀಗ ಹಿಂದಿನ ಅಭಿವೃದ್ಧಿ ಅಧಿಕಾರಿ ಆಯೆಶಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಈಗಿನ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಆದರೆ, ಹಿಂದಿನ ಅವ್ಯವಹಾರಗಳ ಬಗ್ಗೆ ತನಿಖೆಯಾಗ ಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗ್ರಾಮಸ್ಥರಾದ ಸುಜಾತ, ಜಯಲಕ್ಷಿö್ಮ ಇದ್ದರು.