ಮಡಿಕೇರಿ, ಮೇ ೨೩: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಟಿ೧೦ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯ ನಾಲ್ಕನೇ ದಿನದ ಮೊದಲ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕುಕ್ಕನೂರು ತಂಡ ನಿಗದಿತ ಹತ್ತು ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೭ ರನ್ ಗಳಿಸಿತು. ಐಕಾನ್ ಆಟಗಾರ ಬೈಲೆ ಡ್ಯೂಕ್ ಕಾವೇರಿ ೨೩(೧೭) ರನ್ ಗಳಿಸಿದರು. ಕಾಫಿ ಕ್ರಿಕೆಟರ್ಸ್ನ ವಿವಾನ್ ೨ ವಿಕೆಟ್ ಪಡೆದರು. ನಂತರ ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ ೮.೪ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೮೧ ರನ್ ಗಳಿಸಿ ಜಯ ಸಾಧಿಸಿತು.

ವಿವಾನ್ ಮತ್ತು ಕೇಚಪ್ಪನ ಕುಜಲ್ ಕಾರ್ಯಪ್ಪ ತಲಾ ೧೯ ರನ್ ಗಳಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.

ಈ ಪಂದ್ಯಾಟದಲ್ಲಿ ಕಾಫಿ ಕ್ರಿಕೆಟರ್ಸ್ ಪರವಾಗಿ ಹಿರಿಯ ಆಟಗಾರ ಯಾಲದಾಳು ಹರೀಶ್ ಆಡಿದರು. ಎದುರಾಳಿ ತಂಡದಲ್ಲಿ ಅವರ ಮಗ ಯಶಿನ್ ಯಾಲದಾಳು ಆಟವಾಡಿದರು. ವಿವಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು

ಎರಡನೇ ಪಂದ್ಯಾಟದಲ್ಲಿ ಕುಕ್ಕನೂರು ತಂಡ ಟಾಸ್ ಗೆದ್ದು ಕ್ಷೇತ್ರರಕ್ಷಣೆಯನ್ನು ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಜಿ.ಕೆ.ಎಸ್ ನಿಗದಿತ ೧೦ ಓವರ್‌ಗಳÀಲ್ಲಿ ೭ ವಿಕೆಟ್ ನಷ್ಟಕ್ಕೆ ೧೧೯ ರನ್ ಗಳಿಸಿತು. ಇದು ಇಲ್ಲಿಯವರೆಗಿನ ಜಿಪಿಎಲ್ ಟೂರ್ನಮೆಂಟಿನ ಗರಿಷ್ಠ ಮೊತ್ತವಾಗಿದೆ. ಆರಂಭಿಕ ಆಟಗಾರ ಕೀಜನ ಯತೀಶ್ ಮೊತ್ತ ಮೊದಲ ಅರ್ಧ ಶತಕ ಗಳಿಸಿದರು.೧೬ ಎಸೆತಗಳಿಗೆ ಭರ್ಜರಿ ೩ ಸಿಕ್ಸರ್, ೭ ಬೌಂಡರಿ ಒಳಗೊಂಡು ೫೨ ಗಳಿಸಿದರು. ಮೊದಲ ವಿಕೆಟ್‌ಗೆ ರಾಕೇಶ್ ಮತ್ತು ಯತೀಶ್ ೫೭ ರನ್ ಗಳನ್ನು ಕಲೆಹಾಕಿದರು. ಕುಕ್ಕನೂರು ತಂಡದ ಪರವಾಗಿ ಮೂಡಗದ್ದೆ ವಿನೋದ್ ೩ ವಿಕೆಟ್ ಪಡೆದರು. ಪಟ್ಟಡ ದೀಪಕ್ ೨ ವಿಕೆಟ್ ಪಡೆದರು.

ನಂತರ ಬ್ಯಾಟ್ ಮಾಡಿದ ಕುಕ್ಕನೂರು ತಂಡ ೬.೨ ಓವರ್ ಗಳಿಗೆ ೫ ವಿಕೆಟ್ ಕಳೆದುಕೊಂಡು ೩೬ ರನ್ ಗಳಿಸಿತು. ಈ ಸಂದರ್ಭ ಮಳೆ ಅಡ್ಡಿಪಡಿಸಿದ ಕಾರಣ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಜಿ.ಕೆ.ಎಸ್. ತಂಡ ವಿಜಯಿ ಎಂದು ನಿರ್ಧರಿಸಲಾಯಿತು. ಕೀಜನ ಯತೀಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದರು.