ಬೆಂಗಳೂರು, ಮೇ ೨೦: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಉಭಯ ನಾಯಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಡಿ.ಕೆ. ಶಿವಕುಮಾರ್ ಅವರು ಸ್ವಾಮಿ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇವರುಗಳೊಂದಿಗೆ ೮ ಮಂದಿ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.

ಡಾ. ಜಿ. ಪರಮೇಶ್ವರ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆ.ಜೆ. ಜಾರ್ಜ್ ಮತ್ತು ಎಂ.ಬಿ. ಪಾಟೀಲ್ ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ ಕೆ.ಹೆಚ್. ಮುನಿಯಪ್ಪ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ ಸತೀಶ್ ಜಾರಕಿಹೊಳಿ, ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಇಂಗ್ಲೀಷ್‌ನಲ್ಲಿ ಜಮೀರ್ ಅಹಮ್ಮದ್ ಖಾನ್ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.

ದ್ವೇಷ ಅಳಿಸಿಹೋಗಿ, ಪ್ರೀತಿ ಗೆದ್ದಿದೆ

ಪದಗ್ರಹಣ ಸಮಾರಂಭದಲ್ಲಿ ಭಾಷಣ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದ ಜನರಿಗೆ ನನ್ನ ಮನಃಪೂರ್ವಕವಾದ ಅಭಿನಂದನೆಗಳು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ ಬಳಿಕ, ಗೆಲುವಿಗೆ ನಾನಾ ರೀತಿಯ ಕಾರಣಗಳನ್ನು ಹೇಳಲಾಯಿತು. ಹಲವು ವಿಶ್ಲೇಷಣೆಗಳನ್ನು ಮಾಡಲಾಯಿತು. ಈ ಗೆಲುವಿಗೆ ನಿಜವಾದ ಕಾರಣ, ಬಡವರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಜೊತೆಗೆ ನಿಂತಿದ್ದಾಗಿದೆ. ಇದರಿಂದಾಗಿಯೇ ಕಾಂಗ್ರೆಸ್ ವಿಜಯ ಸಾಧಿಸಿದೆ. ನಾವು ಸತ್ಯವನ್ನು ನಂಬಿದ್ದೇವೆ. ಬಿಜೆಪಿ ಬಳಿ ಹಣ, ಪೊಲೀಸ್ ಹಾಗೂ ಎಲ್ಲಾ ರೀತಿಯ ಬಲವೂ ಇತ್ತು. ಆದರೆ, ಆ ಶಕ್ತಿಯನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆ ಎಂದು ಹೇಳಿದರು.

ಚುನಾವಣೆ ವೇಳೆ ನಾವು ನಿಮಗೆ ೫ ಭರವಸೆಗಳನ್ನು ನೀಡಿದ್ದೆವು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು. ಅವುಗಳನ್ನು ಈಡೇರಿಸುತ್ತೇವೆ. ಸುಳ್ಳು ಭರವಸೆಗಳನ್ನು ನಾವು ನೀಡಿಲ್ಲ. ನುಡಿದಂತೆ ನಡೆಯುತ್ತೇವೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಹಿಂದಿನ ಸರ್ಕಾರದಲ್ಲೂ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಈ ಬಾರಿಯೂ ನುಡಿದಂತೆ ನಾವು ನಡೆಯುತ್ತೇವೆ. ಈ ಹಿಂದೆ ಮೋದಿ ಜಪಾನ್‌ಗೆ ಹೋಗಿದ್ದಾಗ ನೋಟ್ ಬ್ಯಾನ್ ಆಗಿತ್ತು. ಈಗಲೂ ಮೋದಿ ಜಪಾನ್ ಪ್ರವಾಸ ವೇಳೆ ೨೦೦೦ ರೂಪಾಯಿ ನೋಟು ಬ್ಯಾನ್ ಆಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಸರ್ಕಾರ ಎಂದರು.

ಮಿತ್ರಕೂಟಗಳ ಒಗ್ಗಟ್ಟು ಪ್ರದರ್ಶನ

ಕಾಂಗ್ರೆಸ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಒಗ್ಗಟ್ಟು ಪ್ರದರ್ಶನವಾಯಿತು. ಪದಗ್ರಹಣ ಸಮಾರಂಭಕ್ಕೆ ಯುಪಿಎ ಮಿತ್ರಕೂಟದ ಹಲವು ಪಕ್ಷಗಳ ನಾಯಕರು ಹಾಜರಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ, ಸಿದ್ದರಾಮಯ್ಯ, ನಟ ಕಮಲ್ ಹಾಸನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಂದೇ ಬಸ್‌ನಲ್ಲಿ ಪದಗ್ರಹಣ ಸಮಾರಂಭಕ್ಕೆ ಆಗಮಿಸಿದರು.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಸಿಪಿಐನ ಡಿ ರಾಜಾ, ಪಿಡಿಪಿಯ ಮೆಹಬೂಬಾ ಮುಫ್ತಿ, ಎನ್‌ಸಿಪಿಯಿಂದ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು, ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ ಭಾಗವಹಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾö್ಯಲಿನ್ ಅವರು ಉಪ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ತಂಜಾವೂರ್ ಪೈಂಟಿAಗ್ ನೀಡಿ, ಶಾಲು ಹೊದಿಸಿದರು.

(ಮೊದಲ ಪುಟದಿಂದ) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತೆಲಂಗಾಣದ ಕೆ. ಚಂದ್ರಶೇಖರ್ ರಾವ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.