ಮಡಿಕೇರಿ,ಮೇ ೧೯: ಪಿಎಂಜಿಎಸ್‌ವೈ, ಪಿಡಬ್ಲುö್ಯಡಿ, ನಿರ್ಮಿತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಅಪೂರ್ಣವಾಗಿವೆ. ಇದನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ಕಾಮಗಾರಿ ಪೂರ್ಣಕ್ಕೂ ಮುನ್ನವೆ ಬಿಲ್ ಬಿಡುಗಡೆಗೆ ರಾಜಕೀಯ ಶಕ್ತಿಗಳು ಒತ್ತಡ ಹೇರುತ್ತಿವೆ. ಯಾವುದೇ ಕಾರಣಕ್ಕೂ ಅಪೂರ್ಣ ಕಾಮಗಾರಿಗಳಿಗೆ ಬಿಲ್ ಮಾಡಕೂಡದು, ಮಾಡಿದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನ ಹೇಳಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವಿನೊಂದಿಗೆ ಸರ್ಕಾರ ರಚನೆಗೆ ಮುಂದಾಗಿರುವ ಹಂತದಲ್ಲೆ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಪೂರ್ಣ ಕಾಮಗಾರಿಗಳಿಗೆ ‘ಬಿಲ್’ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ಕೆ ಕೈ ಹಾಕುವ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಮುಂಗಾರಿನ ಆಗಸ್ಟ್ ಅಂತ್ಯದವರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಭವನದ ತಡೆಗೋಡೆ ಕೆಳಭಾಗದಲ್ಲಿರುವ ಮಡಿಕೇರಿ-ಮಂಗಳೂರು ರಸ್ತೆ ಸಂಚಾರವನ್ನು ಬಂದ್ ಮಾಡಬೇಕೆಂದು ಒತ್ತಾಯಿಸಿದರು.

ಕೊಡಗಿನ ಎರಡು ಕ್ಷೇತ್ರಗಳಲ್ಲಿ ಆಯ್ಕೆಯಾಗಿರುವ ಡಾ.ಮಂಥರ್ ಗೌಡ ಮತ್ತು ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು, ಅದಕ್ಕೆ ಇಲ್ಲಿನ ಶಾಸಕರು ಅರ್ಹರಾಗಿದ್ದಾರೆಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯ ಕೆ.ಯು. ಅಬ್ದುಲ್ ರಜಾಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷ ಜಿ.ಸಿ.ಜಗದೀಶ್, ಪಕ್ಷದ ಪ್ರಮುಖರಾದ ಸುದಯ್ ನಾಣಯ್ಯ, ಪ್ರಕಾಶ್ ಆಚಾರ್ಯ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಉಪಸ್ಥಿತರಿದ್ದರು.