ಮಡಿಕೇರಿ, ಮೇ ೧೮ : ಪತ್ರಿಕೋದ್ಯಮದಲ್ಲಿ ಶೈಕ್ಷಣಿಕ ಮಾರ್ಗಕ್ಕಿಂತ ಭಾಷೆ, ಪದಗಳ ಬಳಕೆ ಹಾಗೂ ಪ್ರಮುಖವಾಗಿ ವಿಷಯ ಜ್ಞಾನ ಇರಬೇಕು. ವಿಷಯಗಳನ್ನು ಅರ್ಥೈಸಿ ವಿಶ್ಲೇಷಣೆ ಮಾಡುವ ತಾಕತ್ತು ಮೂಡಿಬರಬೇಕು. ಸನ್ನಿವೇಶದ ಗಾಂಭೀರ್ಯತೆಗೆ ತಕ್ಕಂತೆ ವಿವೇಚನೆಯಿಂದ ಸುದ್ದಿ ರೂಪಿಸಬೇಕು. ಯಾವುದೇ ವೈಯಕ್ತಿಕ ದೃಷ್ಟಿಕೋನದಿಂದ ಸುದ್ದಿ ಮಾಡಬಾರದು ಎಂದು ಕೊಡಗು ವಿಶ್ವವಿದ್ಯಾಲಯದ ನೂತನ ಉಪಕುಲಪತಿಗಳಾದ ಪ್ರೊ. ಅಶೋಕ್ ಸಂಗಪ್ಪ ಆಲೂರ್ ಅವರು ಅಭಿಪ್ರಾಯಪಟ್ಟರು.

ಕೊಡಗು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ, ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ರಚಿಸಿರುವ ‘ಸೊಡರು' ಕೃತಿಯನ್ನು ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರ ನೇತೃತ್ವದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿ ಮಾತನಾಡಿದ ಅವರು, ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪುಸ್ತಕದಲ್ಲಿನ ಅರ್ಥಪೂರ್ಣ ವಿಷಯಗಳನ್ನು ಆಧರಿಸಿ ಪತ್ರಿಕೋದ್ಯಮದ ಎಡರು - ತೊಡರುಗಳ ಬಗ್ಗೆ ವಿಶ್ಲೇಷಿಸಿದರು.

ಅನಂತಶಯನ ಅವರ ಪತ್ರಿಕೋದ್ಯಮದಲ್ಲಿನ ಎಲ್ಲ ಅನುಭವಗಳು ಪುಸ್ತಕದಲ್ಲಿವೆ. ಸೊಡರು ಎಂದರೆ ಜ್ಯೋತಿ. ಜ್ಞಾನದ ಜ್ಯೋತಿ ಮೂಲಕ ಅಜ್ಞಾನ ಒಡೆದು ಹಾಕುವ ಮಾರ್ಗ ಪುಸ್ತಕದಲ್ಲಿದೆ. ಸತ್ಯವನ್ನು ಮರೆ ಮಾಚದೆ ಸುದ್ದಿಗಳನ್ನು ರೂಪಿಸುವಂತೆ ಈ ಸಂದರ್ಭ ಕರೆ ನೀಡಿದರು. ಪತ್ರಿಕೆಗಳು ಸಮಾಜಕ್ಕೆ ಕೈ ಗನ್ನಡಿಯಾಗಿ ಸಮಾಜದ ಧ್ವನಿಯಾಗಿರಬೇಕೆಂದರು.

(ಮೊದಲ ಪುಟದಿಂದ) ‘ಸೊಡರು' ಲೇಖಕ ಬಿ.ಜಿ ಅನಂತಶಯನ ಅವರು ಮಾತನಾಡಿ, ದೀಪಕ್ಕೂ ನಂದಾ ದೀಪಕ್ಕೂ ವ್ಯತ್ಯಾಸವಿದೆ. ನಂದಾ ದೀಪಗಳು ನಿತ್ಯ ಬೆಳಗಿರುತ್ತವೆ. ಶಿಕ್ಷಕರು ನಂದಾ ದೀಪವಿದ್ದಂತೆ. ಸದಾ ವಿದ್ಯಾರ್ಥಿಗಳಿಗೆ ಹರಸುತ್ತಿರುತ್ತಾರೆ. ಅವರುಗಳ ಜೀವನದಲ್ಲಿ ಬೆಳಕು ಚೆಲ್ಲುತ್ತಾರೆ. ನೀವು ಆ ಹಾರೈಕೆಯಿಂದ ಸಮಾಜವನ್ನು ಬೆಳಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಇತ್ತರು. ಸುದ್ದಿ, ಲೇಖನಗಳ ಬಗ್ಗೆ ವ್ಯತ್ಯಾಸ ವಿವರಿಸಿದರು. ಪುಸ್ತಕದಲ್ಲಿನ ಎಲ್ಲಾ ವಿಷಯಗಳು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತೆ. ಪ್ರಸ್ತುತ ತನಿಖಾ ವರದಿ, ಭ್ರಷ್ಟಾಚಾರ ಕುರಿತು ವರದಿ ಮಾಡುವುದು ಸಾಹಸಮಯಿ ಕಾರ್ಯವಾಗಿರುವುದಾಗಿ ಹೇಳಿದರು.

ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಮಾತನಾಡಿ, ‘ಸೊಡರು' ಪುಸ್ತಕದಲ್ಲಿ ಅನಂತಶಯನ ಅವರು ತಮ್ಮ ಅನುಭವಗಳನ್ನು ಕಿರು ಬರಹ ರೂಪದಲ್ಲಿ ಬರೆದಿದ್ದಾರೆ. ನೈಜ ಅನುಭವಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಹಕಾರಿ. ಪುಸ್ತಕವು ಒಂದು ರೀತಿ ಮಾರ್ಗದರ್ಶಿ ಕೈಪಿಡಿಯಾಗಿದೆ. ಸ್ಪರ್ಧಾತ್ಮಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕುತೂಹಲಕಾರಿ ಘಟನೆಗಳನ್ನು ಸುದ್ದಿ ಮಾಡುವಾಗ, ಲಾಠಿ ಏಟು, ನೂಕುನುಗ್ಗಲು ಸಹಿಸಿಕೊಂಡು ಸುದ್ದಿ ಮಾಡಬೇಕು. ಹೆಚ್ಚು ಭದ್ರತೆ ಇರುವ ರಾಜಕಾರಣಿಗಳು, ಚಿತ್ರನಟ ಹಾಗೂ ಇತರ ಪ್ರಮುಖರ ಸುದ್ದಿ ಮಾಡುವಾಗ ಈ ರೀತಿ ಅನುಭವಗಳು ಸಾಮಾನ್ಯ ಎಂದರು. ಬಳಿಕ ಉದಾಹರಣೆ ನೀಡಿ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳ ವ್ಯತ್ಯಾಸದ ಬಗ್ಗೆ ವಿವರಣೆ ನೀಡಿದರು. ಪತ್ರಿಕಾ ವರದಿ ಮಾಡುವಾಗ ಪತ್ರಿಕೋದ್ಯಮಿಗಳು ತಿಳಿದಿರಬೇಕಾದ ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿ ನೀಡಿದರು. ಪತ್ರಕರ್ತರು ಜನ ಹಾಗೂ ಆಡಳಿತ ಮಧ್ಯೆ ಸೇತುಬಂಧುವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೇಜರ್ ರಾಘವ ಬಿ. ಅವರು ಸ್ವಾಗತಿಸಿದರು. ಆಂಗ್ಲ ವಿಷಯದ ಸಹಾಯಕ ಪ್ರೊಫೆಸರ್ ಹಾಗೂ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ಡಾ.ನಯನ ಕಶ್ಯಪ್ ವಂದಿಸಿದರು. ನಿರೂಪಣೆ ಹಾಗೂ ಪ್ರಾರ್ಥನೆಯನ್ನು ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಎಲೆಯರಾಜ ಕೆ.ಎಸ್, ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಜರಿದ್ದರು.