ನಾಪೋಕ್ಲು, ಮೇ ೧೭: ಭಾರಿ ಗಾಳಿ ಮಳೆಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಹಲವೆಡೆ ಮರಗಳು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪಟ್ಟಣವು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಬುಧವಾರ ಮಧ್ಯಾಹ್ನ ಬಿರುಸಿನ ಮಳೆಯಾಯಿತು. ಅಬ್ಬರದ ಗಾಳಿಯಿಂದಾಗಿ ಹಲವೆಡೆ ಮರಗಳು ಬಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಯಿತು.

ಸಮೀಪದ ಹಳೆ ತಾಲೂಕಿನ ನಿವಾಸಿ ಬೊಪ್ಪೆರ ಕಾವೇರಪ್ಪ ಅವರ ಮನೆ ಎದುರಿನ ತೆಂಗಿನ ಮರ ಒಂದು ಮುರಿದು ರಸ್ತೆಗಡ್ಡಲಾಗಿ ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಪಟ್ಟಣದ ನಾಡಕಚೇರಿಯ ಬಳಿಯಲ್ಲಿ ಬೃಹತ್ ಗಾತ್ರದ ಮರ ಒಂದು ರಸ್ತೆಗಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಸಂಪರ್ಕವು ಕಡಿತಗೊಂಡಿದೆ. ಗ್ರಾಮೀಣ ಭಾಗದಲ್ಲಿ ಹಲವೆಡೆ ಮರಗಳು ಮುರಿದುಬಿದ್ದಿವೆ. ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.