ಕಣಿವೆ, ಮೇ ೧೪: ಕುಶಾಲನಗರದ ವಿವೇಕಾನಂದ ಕಾಲೇಜಿನಲ್ಲಿ ಭಾನುವಾರ ಅಮ್ಮನ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಹಾಗೂ ಬೋಧಕ ವೃಂದದವರೆಲ್ಲರೂ ತಮ್ಮ ತಮ್ಮ ತಾಯಂದಿರನ್ನು ಅಮ್ಮನ ದಿನೋತ್ಸವಕ್ಕೆ ಕರೆತಂದು ಗೌರವಿಸಿ ನಮಿಸಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕೇಶವ ಬಂಗೇರ ಮಾತನಾಡಿ, ಅಮ್ಮನ ಪ್ರೀತಿಗೆ ಗೌರವ ತೋರುವ ಈ ಸುದಿನದಲ್ಲಿ ಅಮ್ಮನ ಮಮತೆಯನ್ನು ಸ್ಮರಿಸಿ ಸದಾಕಾಲ ಆ ತಾಯಿಗೆ ಪ್ರೀತಿಯ ಗೌರವಗಳನ್ನು ತೋರುವ ಸಂಸ್ಕಾರ ಅತ್ಯಂತ ಅಗತ್ಯವಿದೆ. ಇಂದು ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಯುವ ಮೂಲಕ ಭಾರತೀಯ ಸನಾತನ ಪರಂಪರೆಯನ್ನು ಸಂರಕ್ಷಿಸಬೇಕಿದೆ ಎಂದರು. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂ. ನಾಗೇಶ್ ಮಾತನಾಡಿ, ಭಾರತೀಯ ಸನಾತನ ಪರಂಪರೆಯಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನವಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಮೇಳೈಸುತ್ತಿರುವ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮ ಸಂಸ್ಕಾರ ಅತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ ಎಂದು ವಿಷಾದಿಸಿದರು.

ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎನ್.ಎನ್. ಶಂಭುಲಿAಗಪ್ಪ ಅವರ ತಾಯಿ ಶಿವಮ್ಮ, ಕಾಲೇಜಿನ ಸಂಸ್ಥಾಪಕ ಎಂ.ಜಿ. ಪ್ರಭುದೇವ್ ಅವರ ತಾಯಿ ಸರೋಜಮ್ಮ, ಚಂದ್ರಕಲಾ ಬಡಿಗೇರ್ ಮತ್ತಿತರರ ತಾಯಂದಿರನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಸರಿಗಮಪ ಪ್ರಶಸ್ತಿ ವಿಜೇತೆ ಪ್ರಗತಿ ಬಡಿಗೇರ್ ಅವರು ಅಮ್ಮನ ಕುರಿತಾದ ಹಾಡು ಹಾಡಿ ನೆರೆದವರನ್ನು ರಂಜಿಸಿದರು. ಕಾಲೇಜಿನ ಟ್ರಸ್ಟಿ ಎನ್.ಎನ್. ನಂಜಪ್ಪ, ಮಹೇಶ್ ಅಮೀನ್ ಇದ್ದರು.

ಮಹಾತ್ಮ ಗಾಂಧಿ ಕಾಲೇಜಿನ ಪ್ರಾಂಶುಪಾಲೆ ಲಿಖಿತಾ ಸ್ವಾಗತಿಸಿದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು. ಉಪನ್ಯಾಸಕಿ ಹೇಮಾವತಿ ಅಮ್ಮನ ದಿನದ ಕುರಿತು ಮಾತನಾಡಿದರು. ವಿವೇಕಾನಂದ ಪಿ.ಯು. ಕಾಲೇಜು ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ವಂದಿಸಿದರು.