ಚೆಯ್ಯಂಡಾಣೆ, ಮೇ ೧೪: ಕಳೆದ ೧೦ ದಿನಗಳಿಂದ ಮರಗೋಡು ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಗೌಡ ಕುಟುಂಬಗಳ ನಡುವಿನ ೬ನೇ ವರ್ಷದ ಫುಟ್ಬಾಲ್ ಪಂದ್ಯಾಟದ ಚಾಂಪಿಯನ್ ಆಗಿ ಪೊಕ್ಕುಳಂಡ್ರ ಹೊರಹೊಮ್ಮಿತು. ಬಡುವಂಡ್ರ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಭಾನುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಡುವಂಡ್ರ ತಂಡ ಪೊನ್ನಚ್ಚನ ತಂಡವನ್ನು ಪೆನಾಲ್ಟಿ ಶೂಟೌಟ್ನಲ್ಲಿ ೪-೧ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ ಕಟ್ಟೆಮನೆ ತಂಡವನ್ನು ೧-೦ ಗೋಲಿನಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿತು.
ಫೈನಲ್ ಪಂದ್ಯಾಟದ ಮೊದಲಾರ್ಧದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಪೊಕ್ಕುಳಂಡ್ರ ತಂಡ ೩-೦ ಗೋಲು ಗಳಿಸಿತು. ತನು ೨ ಹಾಗೂ ವಿನೋದ್ ೧ ಗೋಲು ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು. ದ್ವಿತೀಯಾಧÀðದಲ್ಲಿ ಪೊಕ್ಕುಳಂಡ್ರ ಪ್ರವೀಣ್ ಒಂದು ಗೋಲು ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಸುಜಯ್ ಬಡುವಂಡ್ರ ತಂಡದ ಪರ ಏಕೈಕ ಗೋಲು ಬಾರಿಸಿ ೪-೧ ಗೋಲುಗಳ ಅಂತರದಲ್ಲಿ ಪೊಕ್ಕುಳಂಡ್ರ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯವನ್ನು ಏರ್ ಇಂಡಿಯಾ ಹಾಕಿ ತಂಡದ ಮಾಜಿ ಆಟಗಾರ್ತಿ ಬಾಕಿಲನ ವನಿತಾ ವಿಜಯ್ ಉದ್ಘಾಟಿಸಿದರು.
ವೈಯಕ್ತಿಕ ಬಹುಮಾನ
ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಪಡಿಕಲ್ ತಂಡದ ಮನೋಜ್, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಪೊನ್ನಚ್ಚನ ರೋಹಿತ್, ಬೆಸ್ಟ್ ಡಿಫೆಂಡರ್ ಆಗಿ ಪೊಕ್ಕುಳಂಡ್ರ ವಿನೋದ್, ಉತ್ತಮ ತಂಡ ದೇವಜನ, ಉದಯೋನ್ಮುಖ ಆಟಗಾರ ಪೊಕ್ಕುಳಂಡ್ರ ತನು, ಉತ್ತಮ ಆಟಗಾರ ಪ್ರಶಸ್ತಿಯನ್ನು ಬಡುವಂಡ್ರ ಸುಜಯ್ ಪಡೆದುಕೊಂಡರು.
ಸೆಮಿಫೈನಲ್ ತಲುಪಿದ ಪೊನ್ನಚನ ಹಾಗೂ ಕಟ್ಟೆಮನೆ ತಂಡಕ್ಕೆ ತಲಾ ರೂ. ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಚಾಂಪಿಯನ್ ಪೊಕ್ಕುಳಂಡ್ರ ತಂಡಕ್ಕೆ ರೂ. ೬೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಬಡುವಂಡ್ರ ತಂಡಕ್ಕೆ ರೂ. ೪೦ ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.
ಯೂನಿಟಿ ಕಪ್
ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಇದೇ ಸಂದರ್ಭ ಆಯೋಜಿಸಿದ್ದ ವಿವಿಧ ಸಮುದಾಯಗಳ ನಡುವಿನ ‘ಯೂನಿಟಿ ಕಪ್’ ಫೈನಲ್ ಪಂದ್ಯದಲ್ಲಿ ಅರೆಕಾಡು ಫ್ರ್ರೆಂಡ್ಸ್ ತಂಡ ಮಲ್ಲು ಬಾಯ್ಸ್ ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಚಾಂಪಿಯನ್ ಆಯಿತು. ಮಲ್ಲು ಬಾಯ್ಸ್ ತಂಡದ ಪ್ರಮೋದ್ ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿ ಪಡೆದರೆ, ಡಿಫೆಂಡರ್ ಆಗಿ ವಿನು, ಉತ್ತಮ ಆಟಗಾರನಾಗಿ ಅರೆಕಾಡು ತಂಡದ ಜುನೈದ್ ಪ್ರಶಸ್ತಿ ಪಡೆದುಕೊಂಡರು. ಯೂನಿಟಿ ಕಪ್ ಫೈನಲ್ ಪಂದ್ಯವನ್ನು ದೇಲಂಪಾಡಿ ಗಣೇಶ್ ಮರಗೋಡು ಹಾಗೂ ಕಟ್ಟೆಮನೆ ದಿನೇಶ್ ಕಟ್ಟೆಮಾಡು ಉದ್ಘಾಟಿಸಿದರು.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ದುಷ್ಯಂತ್ ರಮೇಶ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ದಾನಿ ಕಟ್ಟೆಮನೆ ಜನಾಧÀðನ, ಕಟ್ಟೆಮನೆ ಪ್ರೇಮ ಗಣೇಶ್, ಪ್ರಮುಖರಾದ ಅಂಬೆಕಲ್ ನವೀನ್, ದುಗ್ಗಳ ಕಪಿಲ್, ಬಾಡನ ಚಿತ್ರ ಪಾಲ್ಗೊಂಡು ಮಾತನಾಡಿದರು.
ಬಹುಮಾನ ದಾನಿಗಳಾದ ಬಡುವಂಡ್ರ ಲಕ್ಷ್ಮಿಪತಿ, ಉಳುವಾರನ ದಿಲೀಪ್, ಅಯ್ಯಂಡ್ರ ಬೋಪಣ್ಣ ರಾಮರಾಜ್, ಕಾನಡ್ಕ ದೇವಯ್ಯ, ಬೈಮನ ಶರ್ಮಿನ್, ಪೆಬ್ಬಾಯಿ ಪುಟ್ಟಸ್ವಾಮಿ, ಕೋಚನ ಅನೂಪ್ ಮತ್ತಿತರರು ಉಪಸ್ಥಿರಿದ್ದರು.
ಕಟ್ಟೆಮನೆ ಸೋನಾಜಿತ್ (ವಾಯ್ಸ್ ಆಫ್ ಮರಗೋಡು) ಪರಿಚನ ಲಕ್ಷ್ಮಣ (ನಾಟಿ ವೈದ್ಯರು)ಐಮಂಡ ರೂಪೇಶ್ ನಾಣಯ್ಯ (ಚಿತ್ರ ಕಲಾವಿದರು) ಚೆರಿಯಮನೆ ರತ್ನಕುಮಾರ್ (ಸಮಾಜ ಸೇವಕರು) ಅವರುಗಳನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. -ಅಶ್ರಫ್