ಮಡಿಕೇರಿ, ಮೇ ೧೪: ರಾಜ್ಯದಲ್ಲಿ ಕೊಡಗು ಜಿಲ್ಲೆ ವಿಭಿನ್ನವಾಗಿದ್ದು, ಇಲ್ಲಿನ ಸಮಸ್ಯೆಗಳೂ ಕೂಡ ಬೇರೆಯದ್ದೇ ರೀತಿಯದ್ದು ಈ ಹಿನ್ನೆಲೆಯಲ್ಲಿ ಕೊಡಗಿನವರಿಗೇ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ಸಿಗಬೇಕೆಂಬದು ದಶಕಗಳ ಬೇಡಿಕೆ. ಆದರೆ ವಿಪರ್ಯಾಸವೆಂಬAತೆ ಅಥವಾ ಕೊಡಗಿನ ವ್ಯಕ್ತಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಹಲವಾರು ಸಮಯಗಳಿಂದ ದೊರೆತಿಲ್ಲ. ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ಎಸ್.ಎಂ. ಕೃಷ್ಣ ಅವಧಿಯಲ್ಲಿ ಮಡಿಕೇರಿ ಶಾಸಕರಾಗಿದ್ದ ದಿ. ಎಂ. ಎಂ. ನಾಣಯ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಇವರೊಂದಿಗೆ ರಾಜಕೀಯ ನೆಲೆಗಟ್ಟಿನ ಅವಕಾಶದೊಂದಿಗೆ ವೀರಾಜಪೇಟೆ ಮೀಸಲು ಕ್ಷೇತ್ರದಿಂದ ಶಾಸಕಿಯಾಗಿದ್ದ ಸುಮಾವಸಂತ್, ಜಿಲ್ಲೆಯಿಂದ ಎಂಎಲ್‌ಸಿ ಆಗಿದ್ದ ದಿ. ಟಿ. ಜಾನ್ ಅವರುಗಳೂ ಅವಕಾಶದ ಆಧಾರದಲ್ಲಿ ಎಂಬAತೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಮೂವರು ಸಚಿವರುಗಳನ್ನು ಕೊಡಗು ಒಟ್ಟಿಗೇ ಕಂಡಿದ್ದು, ಒಂದು ಇತಿಹಾಸ. ಆದರೆ, ನಂತರದಲ್ಲಿ ಕೊಡಗಿನವರೇ ಸಚಿವರಾಗಿದ್ದು ಇಲ್ಲ ಎನ್ನಬಹುದಾಗಿದೆ.

೨೦೦೮ರಲ್ಲಿ ಬಿಜೆಪಿ ಸರಕಾರ ಬಂದಾಗ ವೀರಾಜಪೇಟೆ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಆ ಅವಧಿಯಲ್ಲಿ ಉಪ ಸಭಾಧ್ಯಕ್ಷ ಬಳಿಕ ಸಭಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು ಹಾಗೂ ಇದೇ ಅವಧಿಯ ಕೊನೆಯ ಕೆಲವು ತಿಂಗಳು ಮಾತ್ರ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ರಾಜ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇದು ಹೊರತು ಪಡಿಸಿದರೆ, ನಂತರದಲ್ಲಿ ಹೊರಗಿನವರೇ ಕೊಡಗಿನ ಉಸ್ತುವಾರಿ ಸಚಿವರುಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸಲಿದ್ದು, ಕೊಡಗಿನಿಂದಲೂ ಕಾಂಗ್ರೆಸ್ ಶಾಸಕರುಗಳೇ ಆಗಿ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂಥರ್‌ಗೌಡ ಅವರುಗಳು ಚುನಾಯಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸರಕಾರದಲ್ಲಾಗಲೀ ಕೊಡಗಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಆಶಾಭಾವನೆ ಜನರಲ್ಲಿದೆ. ಕೇವಲ ನಿರೀಕ್ಷೆ ಮಾತ್ರವಲ್ಲದೆ ಬಹುತೇಕರ ಬೇಡಿಕೆಯೂ ಇದಾಗಿದೆ. - ಶಶಿ