ಸಿಎಂ ಆಯ್ಕೆ ಹೈಕಮಾಂಡ್ ಅಂಗಳಕ್ಕೆ

ಬೆAಗಳೂರು, ಮೇ ೧೪: ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಗರದ ಶಾಂಗ್ರೀಲಾ ಹೊಟೇಲ್‌ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾದ ಶಾಸಕರಿಗೆ ಸಿಎಂ ಆಯ್ಕೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಪರಿಣಾಮ ಸಿಎಂ ಆಯ್ಕೆ ವಿಚಾರ ಹೈಕಮಾಂಡ್ ಅಂಗಳ ತಲುಪಿದೆ. ಸಭೆಯಲ್ಲಿ ಯಾವುದೇ ನಿರ್ಧಾರವನ್ನೂ ತೆಗೆದುಕೊಳ್ಳದೇ, ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರಲಿದೆ ಎಂಬ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಗಿದೆ. ಹೈಕಮಾಂಡ್‌ಗೆ ವೀಕ್ಷಕರು ಇಂದಿನ ಶಾಸಕಾಂಗ ಸಭೆಯ ವರದಿ ನೀಡಲಿದ್ದು, ಈ ವರದಿ ಆಧರಿಸಿ ಕಾಂಗ್ರೆಸ್ ಹೈಕಮಾಂಡ್ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಕರ್ನಾಟಕಕ್ಕೆ ನೂತನ ಸಿಎಂ ಆಯ್ಕೆ ಮಾಡಲಿದೆ. ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿ ತಲುಪಿದ್ದು, ನಾಳೆ ಸೋನಿಯಾ ಗಾಂಧಿ ಅವರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಶಾಸಕಾಂಗ ಸಭೆ ಬಳಿಕ, ಸಿಎಂ ಆಯ್ಕೆ ಸಂಬAಧ ಪ್ರತಿಯೊಬ್ಬ ಶಾಸಕರ ಅಭಿಪ್ರಾಯವನ್ನೂ ಸಂಗ್ರಹಿಸಲು ವೀಕ್ಷಕರು ಮುಂದಾಗಿದ್ದಾರೆ.

ಡಿಕೆಶಿಯನ್ನೇ ಮುಖ್ಯಮಂತ್ರಿ ಮಾಡುವಂತೆ ಒಕ್ಕಲಿಗ ಶ್ರೀಗಳ ಆಗ್ರಹ

ಬೆಂಗಳೂರು, ಮೇ ೧೪: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೇ ರಾಜ್ಯದ ಮುಂದಿನ ಮುಖ್ಯ ಮಂತ್ರಿಯನ್ನಾಗಿ ನೇಮಕ ಮಾಡಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಭಾನುವಾರ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದಿರುವ ಹಿನ್ನೆಲೆಯಲ್ಲಿ ಡಿ.ಕೆ. ಶಿವ ಕುಮಾರ್ ಅವರು ರಾಜ್ಯವನ್ನು ಮುನ್ನಡೆಸಲು ಅತ್ಯಂತ ಅರ್ಹ ವ್ಯಕ್ತಿ ಎಂದು ಶ್ರೀಗಳು ಹೇಳಿದ್ದಾರೆ. ಕರ್ನಾಟಕದ ಪ್ರಬಲ ಸಮುದಾಯಗಳಲ್ಲಿ ಒಂದಾದ ಒಕ್ಕಲಿಗ ಸಂಘವು ಒಕ್ಕಲಿಗ ಮಠಾಧೀಶರ ನೇತೃತ್ವದಲ್ಲಿ ಇಂದು ಸಂಜೆ ವಿಜಯನಗರದ ಆದಿಚುಂಚನಗಿರಿ ಮಠದಲ್ಲಿ ಸಭೆ ನಡೆಸಿ, ರಾಜ್ಯ ಕಾಂಗ್ರೆಸ್ ಘಟಕದ ಸಾರಥ್ಯ ವಹಿಸಿರುವ ಒಕ್ಕಲಿಗ ನಾಯಕ ಶಿವಕುಮಾರ್ ಅವರನ್ನು ಸಿಎಂ ಮಾಡುವಂತೆ ಒತ್ತಾಯಿಸಲಾಯಿತು.

ಕಾಂಗ್ರೆಸ್‌ಗೆ ಬೆಂಬಲ ನೀಡಿದ ಪಕ್ಷೇತರ ಶಾಸಕಿ ಲತಾ

ಬೆಂಗಳೂರು, ಮೇ ೧೪: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿರುವ ಲತಾ ಮಲ್ಲಿಕಾರ್ಜುನ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರು ಭಾನುವಾರ ಹೇಳಿದ್ದಾರೆ. ಲತಾ ಮಲ್ಲಿಕಾರ್ಜುನ್ ಅವರು ಹಿರಿಯ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರಿ. ಲತಾ ಮಲ್ಲಿಕಾರ್ಜುನ್ ಅವರು ತಮ್ಮ ಸೈದ್ಧಾಂತಿಕ ಬೇರುಗಳು ಮತ್ತು ಕಾಂಗ್ರೆಸ್ ಆದರ್ಶಗಳನ್ನು ಪರಿಗಣಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದ್ದಾರೆ. ನಾನು ಅವರಿಗೆ, ಅವರ ಪತಿ ಮಲ್ಲಿಕಾರ್ಜುನ್ ಮತ್ತು ಎಲ್ಲಾ ಬೆಂಬಲಿಗರು ಮತ್ತು ಹಿತೈಷಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದು ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ

ಬೆಂಗಳೂರು, ಮೇ ೧೪: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್‌ಗೆ ಬಹುಮತ ಸಿಗುತ್ತಿದ್ದಂತೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದಾರೆ. ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಾವದಗಿ ರಾಜೀನಾಮೆ ನೀಡಿದರು. ೨೦೧೮ರ ಮೇ ೧೮ ರಂದು ನಾವದಗಿ ಅವರು ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು.

ಸೋಲಿನ ಕಾರಣದ ವಿಶ್ಲೇಷಣೆ-ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ ೧೪: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸೋಲಿನ ಹಿಂದಿನ ಕಾರಣಗಳ ಕುರಿತು ವಿವರವಾದ ವಿಶ್ಲೇಷಣೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಪಕ್ಷದ ಸೋಲನ್ನು ಸ್ವೀಕರಿಸಿದ್ದು, ಸೋಲಿನ ಹಿಂದಿನ ಕಾರಣಗಳ ಕುರಿತು ವಿವರವಾದ ವಿಶ್ಲೇಷಣೆ ಮಾಡುತ್ತೇವೆ ಎಂದು ಕರ್ನಾಟಕದ ನಿರ್ಗಮಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ. ಒಟ್ಟಾರೆ ಸಮೀಕ್ಷೆಯ ಫಲಿತಾಂಶಗಳ ವಿವರವಾದ ವಿಶ್ಲೇಷಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಸಿದ್ದವಾಗುತ್ತೇವೆ. ನಾವು ನಮ್ಮ ಅಧ್ಯಕ್ಷರೊಂದಿಗೆ ಅನೌಪಚಾರಿಕ ಸಭೆ ನಡೆಸಿದ್ದೇವೆ. ಕೆಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಮತ್ತು ನಾವು ಚುನಾಯಿತ ಪ್ರತಿನಿಧಿಗಳು ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸುತ್ತೇವೆ. ನಾವು ಆಳವಾದ ವಿಶ್ಲೇಷಣೆಯನ್ನು ಮಾಡುತ್ತೇವೆ ಮತ್ತು ಲೋಕಸಭೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರ್ಯತಂತ್ರ ರೂಪಿಸುತ್ತೇವೆ ಎಂದು ಬೊಮ್ಮಾಯಿ ಹೇಳಿದರು. ಚುನಾವಣಾ ಸೋಲಿನ ನಂತರ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ತಮ್ಮ ಸ್ಥಾನದಿಂದ ಕೆಳಗಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯಕ್ಕೆ ಆಗ್ರಹ

ಬೆಂಗಳೂರು, ಮೇ ೧೪: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶೇ. ೮೮ ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಬಹುಮತ ಬಂದಿದ್ದು ನಮ್ಮ ಸಮುದಾಯಕ್ಕೆ ಒಂದು ಡಿಸಿಎಂ ಹುದ್ದೆ ಐವರನ್ನು ಮಂತ್ರಿ ಮಾಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಶೇ. ೯೦ ರಷ್ಟು ಮುಸ್ಲಿಮರಿದ್ದಾರೆ. ಅದರಲ್ಲಿ ಶೇ. ೮೮ರಷ್ಟು ಮುಸ್ಲಿಂರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಎಲ್ಲಾ ಮಸೀದಿಗಳಲ್ಲಿ ಅಭಿಯಾನ, ಜಾಗೃತಿ ಮಾಡಿದ್ದೆವು. ಹೀಗಾಗಿ ರಾಜ್ಯದಲ್ಲಿ ೭೩ ಶಾಸಕರು ಗೆಲ್ಲಲು ಮುಸ್ಲಿಮರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶಾಫೀ ಸಅದಿ ಹೇಳಿದ್ದಾರೆ.

ರೂ. ೧೨ ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶ

ಕೇರಳ, ಮೇ ೧೪: ಎನ್‌ಸಿಬಿ ಮತ್ತು ಭಾರತೀಯ ನೌಕಾಪಡೆಯ ತಂಡವು ಕೇರಳ ಕರಾವಳಿಯ ಬಳಿ ೧೨ ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಸರಕುಗಳಲ್ಲಿ ಮೆಥಾಂಫೆಟಮೈನ್, ಹೆರಾಯಿನ್ ಮತ್ತು ಚರಸ್ ಕೂಡ ಸೇರಿವೆ. ಆರೋಪಿ ಪಾಕಿಸ್ತಾನದಿಂದ ಬೋಟ್ ಮೂಲಕ ಸಮುದ್ರ ಮಾರ್ಗವಾಗಿ ಭಾರತಕ್ಕೆ ಈ ಡ್ರಗ್ಸ್ ತರುತ್ತಿದ್ದರು. ಎನ್‌ಸಿಬಿ ಮತ್ತು ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಎನ್‌ಸಿಬಿ ಉಪ ಮಹಾನಿರ್ದೇಶಕ (ಆಪ್ಸ್) ಸಂಜಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಪತ್ತೆಯಾದ ಡ್ರಗ್ಸ್ನ ಮೂಲ ಪಾಕಿಸ್ತಾನ. ಇರಾನ್‌ನ ಚಬಹಾರ್ ಬಂದರಿನಿAದ ಈ ಡ್ರಗ್ಸ್ ತರಲಾಗುತ್ತಿತ್ತು. ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ ಸುಮಾರು ೧೨,೦೦೦ ಕೋಟಿ ರೂ. ಇದು ಎರಡನೇ ಅತಿ ದೊಡ್ಡ ರವಾನೆಯಾಗಿದೆ. ಈ ಹಿಂದೆ ೨೦೨೧ರ ಸೆಪ್ಟೆಂಬರ್‌ನಲ್ಲಿ ಗುಜರಾತ್‌ನ ಅದಾನಿ ಬಂದರಿನಿAದ ೨೧ ಸಾವಿರ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಪಾಕಿಸ್ತಾನದಿಂದ ಡ್ರಗ್ಸ್ ಸರಬರಾಜಾಗುತ್ತಿದ್ದು, ಇರಾನ್ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಗುಜರಾತ್‌ನ ಬಂದರನ್ನು ತಲುಪುವ ಮೊದಲೇ ಈ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ೨೬೦೦ ಕೆಜಿ ಡ್ರಗ್ಸ್ನೊಂದಿಗೆ ಸಿಕ್ಕಿಬಿದ್ದ ಮಾಫಿಯಾವನ್ನು ಕೊಚ್ಚಿ ಬಂದರಿಗೆ ಕರೆದೊಯ್ಯಲಾಗಿದೆ. ಇಲ್ಲಿ ಎನ್‌ಸಿಬಿ ಮತ್ತು ನೌಕಾಪಡೆ ತಂಡಗಳು ಆತನನ್ನು ವಿಚಾರಣೆ ನಡೆಸುತ್ತಿವೆ. ಡ್ರಗ್ಸ್ ಎಲ್ಲಿ, ಯಾರಿಗೆ ತಲುಪಿಸಬೇಕಿತ್ತು ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.