ಮಡಿಕೇರಿ, ಮೇ ೧೪: ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ, ಮಿತಿಮೀರಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದು ಹಾಗೂ ಕಂದಾಯ ಇಲಾಖೆಯಲ್ಲಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ತನ್ನ ಗುರಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ದೊರೆತಿದೆ. ಎಲ್ಲರ ಸಲಹೆ ಪಡೆದು ಮುನ್ನಡೆಯುತ್ತೇನೆ. ಹಲವು ಸವಾಲಿನ ನಡುವೆ ತಾನು ಚುನಾವಣೆ ಎದುರಿಸಿದ್ದೇನೆ. ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ ಜನರ ಬಳಿ ಹೋಗಿ ಮತಯಾಚನೆ ಮಾಡಿದೆ. ಇದರಿಂದ ಜನ ಆಶೀರ್ವಾದ ಮಾಡಿದ್ದಾರೆ ಎಂದ ಅವರು, ಕಳೆದ ಹಲವು ವರ್ಷಗಳಿಂದ ಬಿಜೆಪಿ ಜನಪ್ರತಿನಿಧಿಗಳು ಜಿಲ್ಲೆಯನ್ನು ನಿರೀಕ್ಷಿತ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇದನ್ನು ಪುನರಾರಂಭಿಸಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಜೊತೆಗೆ ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ತನ್ನ ಕರ್ತವ್ಯ ಎಂದರು.
ಕಾರ್ಮಿಕ ವರ್ಗಕ್ಕೆ ವಸತಿ ಒದಗಿಸುವುದರೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ, ಆಸ್ಪತ್ರೆಗಳ ಅಭಿವೃದ್ಧಿ, ಅಗತ್ಯ ವೈದ್ಯಕೀಯ ಸೇವೆ ಒದಗಿಸುವುದು, ಇತ್ತೀಚಿಗೆ ಜಿಲ್ಲೆಯಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚಾಗುತ್ತಿದ್ದು, ಇದನ್ನು ಸಮರ್ಪಕ ವಿಲೇವಾರಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಗೆದ್ದ ಬಳಿಕ ಜಿಲ್ಲೆಯಲ್ಲಿ ಇರುವುದಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಮಂಥರ್, ಇದೀಗ ತಾನೆ ಗೆದಿದ್ದೇನೆ. ಒಂದು ಅವಕಾಶ ನೀಡಿ. ತಪ್ಪುಗಳಿದ್ದಾರೆ ನೇರವಾಗಿ ಹೇಳಿ ತಿದ್ದಿಕೊಳ್ಳುತ್ತೇನೆ. ತಾನು ರಾಜಕಾರಣಕ್ಕೆ ದುಡ್ಡು ಮಾಡಲು ಬಂದಿಲ್ಲ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ಮಂಥರ್ ಜನಪರ ಆಡಳಿತ ನೀಡುವುದು ನಿಶ್ಚಿತ. ಈ ಬಾರಿ ಮತದಾರರು ಬದಲಾವಣೆ ಬಯಸಿದ್ದರು ಅದರಂತೆ ಫಲಿತಾಂಶ ಹೊರಬಿದ್ದಿದೆ ಎಂದರು.
ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಹಾಜರಿದ್ದರು.