ಹೆಚ್.ಜೆ. ರಾಕೇಶ್
ಮಡಿಕೇರಿ, ಮೇ ೧೩ : ಎಲ್ಲೆಲ್ಲೂ ಜಯಘೋಷ, ಹೂವಿನ ಮಳೆಯಲ್ಲಿ ಮಿಂದೆದ್ದ ‘ಕೈ’ ಹುರಿಯಾಳುಗಳು, ಕೇಕೆ, ಚಪ್ಪಾಳೆ ತಟ್ಟುತ್ತ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೊಡಗು ಚುನಾವಣಾ ಫಲಿತಾಂಶ.
ಹೌದು..ಈ ದೃಶ್ಯಾವಳಿಗಳು ಕಂಡುಬAದಿದ್ದು ಮಡಿಕೇರಿಯ ಮತಎಣಿಕಾ ಕೇಂದ್ರದ ಆವರಣದಲ್ಲಿ. ಬೆಳಿಗ್ಗೆ ೮ ಗಂಟೆಯಿAದಲೇ ನಗರದ ಸಂತಜೋಸೆಫರ ಶಾಲಾ ಆವರಣದಲ್ಲಿ ಜಮಾಯಿಸಿದ ಬಿಜೆಪಿ, ಕಾಂಗ್ರೆಸ್, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಬಿಸಿಲಿನ ನಡುವೆ ಕಾದು ಕುಳಿತಿದ್ದರು. ಶಾಲಾ ಮೈದಾನದಲ್ಲಿ ನೂರಾರು ವಾಹನಗಳು ನಿಂತಿದ್ದವು. ಎಣಿಕೆ ಕಾರ್ಯ ಆರಂಭವಾಗುತ್ತಿದ್ದAತೆ ಕಾರ್ಯಕರ್ತರಲ್ಲಿ ದುಗುಡ, ಕುತೂಹಲ, ಭಯ ಆವರಿಸಿತ್ತು. ಜಿಲ್ಲೆಯ ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ವಿವಿಧ ಪಕ್ಷಗಳ ಕಾರ್ಯಕರ್ತರು ಫಲಿತಾಂಶಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತ ತಮಗೆ ತಿಳಿದವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು. ಪ್ರತಿ ಎಣಿಕೆ ಸುತ್ತಿನಲ್ಲಿಯೂ ಮುನ್ನಡೆ ಸಾಧಿಸುವ ಅಭ್ಯರ್ಥಿಗಳ ಬೆಂಬಲಿಗರು ಕೇಕೆ ಹಾಕುತ್ತ ಫಲಿತಾಂಶವನ್ನು ಸಂಭ್ರಮಿಸುತ್ತಿದ್ದರು.
ವೀರಾಜಪೇಟೆ ಕ್ಷೇತ್ರದ ಮೊದಲ ೬-೭ ಸುತ್ತಿನ ಫಲಿತಾಂಶದ ತನಕ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಅದಾದ ಬಳಿಕ ಪೊನ್ನಣ್ಣ ಅವರ ಮತದ ಅಂತರ ಹೆಚ್ಚಾಗುತ್ತಿದ್ದಂತೆ ಕೈಪಾಳಯಕ್ಕೆ ಉತ್ಸಾಹ ಮೂಡಿತು. ಮಡಿಕೇರಿ ಕ್ಷೇತ್ರದಲ್ಲಿ ಮೊದಲ ಸುತ್ತಿನಿಂದಲೇ ‘ಲೀಡ್’ ಕಾಯ್ದುಕೊಂಡ ಮಂಥರ್ ಗೌಡ ಬೆಂಬಲಿಗರ ಹರ್ಷ ಆಕಾಶದೆತ್ತರಕ್ಕೆ ಮುಟ್ಟಿತ್ತು. ಮಂಥರ್ ಭಾವಚಿತ್ರ ಹಿಡಿದು ಸಂಭ್ರಮಿಸಲು ಆರಂಭಿಸಿದರು. ಮತಗಳ ಅಂತರ ಬಿಜೆಪಿಗರನ್ನು ಮಂಕಾಗಿಸಿತು. ಮಡಿಕೇರಿ ಗ್ರಾಮೀಣ ಪ್ರದೇಶದಲ್ಲಿ ಅಂತರ ಹೆಚ್ಚಿಸಿಕೊಳ್ಳುವ ವಿಶ್ವಾಸವನ್ನು ಕೇಸರಿ ಪಾಳಯ ಹೊಂದಿತ್ತಾದರೂ ಕಾಂಗ್ರೆಸ್ ಮಾಡಿದ ‘ಪ್ಲಾನ್’ ಬಿಜೆಪಿ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ಕಾಂಗ್ರೆಸ್ನ ಇಬ್ಬರ ಗೆಲುವಿನ ಅಂತರ ಹೆಚ್ಚಾಗುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರ ಸಂಭ್ರಮ ದುಪ್ಪಟ್ಟಾಗುತಿತ್ತು.
ಹೂವಿನ ಮಳೆ - ಹೆಗಲ ಮೇಲೆ ಹೊತ್ತು ಮೆರವಣಿಗೆ
ಕಳೆದ ೨೦-೨೫ ವರ್ಷಗಳಿಂದ ೨ ಕ್ಷೇತ್ರಗಳಲ್ಲಿದ್ದ ಬಿಜೆಪಿ ಪಾರುಪತ್ಯ ಅಂತ್ಯಗೊAಡು ಹೊಸ ಅದಿಪತಿಗಳು ಹುಟ್ಟಿಕೊಂಡಿರುವುದು ಕೊಡಗು ರಾಜಕಾರಣದ ಐತಿಹಾಸಿಕ ಕ್ಷಣ ಎಂದು ವಿಶ್ಲೇಷಿಸಲಾಗಿದೆ.
ಹಲವು ವರ್ಷಗಳ ಸೋಲಿನ ಪೆಟ್ಟಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್ಗೆ ಇದು ‘ಬೂಸ್ಟರ್ ಡೋಸ್’ ನೀಡಿದಂತಿತ್ತು. ಪೊನ್ನಣ್ಣ ಮತಎಣಿಕಾ ಕೇಂದ್ರದಿAದ ಹೊರಬರುತ್ತಿದ್ದಂತೆ ಕಾರ್ಯಕರ್ತರು ಅವರನ್ನು ಹೆಗಲ ಮೇಲೆ ಹೊತ್ತು ಹೂವಿನ ಹಾರ ಹಾಕಿ ಮೆರವಣಿಗೆ ಆರಂಭಿಸಿದರು. ಅದೇ ಹೊತ್ತಿಗೆ ಬೇರೆಡೆ ಇದ್ದ ಮಂಥರ್ ಗೌಡ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಿದರು. ಈ ಸಂದರ್ಭ ಇಬ್ಬರು ಮುಖಾಮುಖಿಯಾಗಿ ಪರಸ್ಪರ ಆಲಿಂಗನ ಮಾಡಿ ಗೆಲುವನ್ನು ಹಂಚಿಕೊAಡರು. ಪೊನ್ನಣ್ಣ ಅವರು ಮೊದಲು ಕಾರ್ಯಕರ್ತರ ಎದುರು ಹೋಗಿ ನಮಸ್ಕರಿಸಿ, ತಮ್ಮ ಹೆಗಲ ಮೇಲಿದ್ದ ಹೂವಿನ ಹಾರವನ್ನು ಕಾರ್ಯಕರ್ತರ ಕಡೆ ಎಸೆದರು. ಈ ವೇಳೆ ಕಾರ್ಯಕರ್ತರು ಕೇಕೆ ಹಾಕಿ ಪೊನ್ನಣ್ಣ ಪರ ಜಯಘೋಷ ಹಾಕಿದರು.
ಮಂಥರ್ ಕೂಡ ಪ್ರಮಾಣ ಪತ್ರ ಸ್ವೀಕರಿಸಿ ಹೊರಬರುತ್ತಿದ್ದಂತೆ ಬೆಂಬಲಿಗರು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದರು. ಯುವಕರು, ಮಹಿಳೆಯರು ಕುಣಿದು ಕುಪ್ಪಳಿಸಿದರು. ಸೋಲನ್ನೆ ಕಂಡಿದ್ದ ಕಾಂಗ್ರೆಸ್ಗೆ ಹಲವು ವರ್ಷಗಳ ಬಳಿಕ ಗೆಲುವಿನ ರುಚಿ ದೊರೆತ್ತಿದ್ದು, ಇದು ಕೆಲವರನ್ನು ಭಾವುಕಗೊಳಿಸಿತು.
ಬಿಜೆಪಿಗರಿಗೆ ಆಘಾತ
ಭಾರತೀಯ ಜನತಾ ಪಕ್ಷಕ್ಕೆ ‘ಮಾಸ್ಟರ್ ಸ್ಟೊçÃಕ್’ ನೀಡಿದ ಕೈಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದರೆ, ಬಿಜೆಪಿಗರು ಆಘಾತ ಅನುಭವಿಸಿದರು.
ಎರಡು ಕ್ಷೇತ್ರಗಳಲ್ಲಿಯೂ ಕೊನೆ ಘಳಿಗೆಯಲ್ಲಿ ‘ಮ್ಯಾಜಿಕ್’ ನಡೆಯುತ್ತದೆ ಎಂಬ ಆತ್ಮವಿಶ್ವಾಸದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಸೇರಿದಂತೆ ಅನೇಕ ಪ್ರಮುಖರು ಮತ ಎಣಿಕೆ ಕೇಂದ್ರದಲ್ಲಿದ್ದರು. ಆದರೆ, ಊಹಿಸಿದ ಫಲಿತಾಂಶ ಬಾರದ ಹಿನ್ನೆಲೆ ಎಲ್ಲರೂ ಬೇಸರದಿಂದ ಹೊರನಡೆದರು. ಇದೇ ಸಂದರ್ಭ ಎದುರು ಸಿಕ್ಕ ಕಾಂಗ್ರೆಸ್ ಸ್ನೇಹಿತರಿಗೆ ಬಿಜೆಪಿಗರು ‘ಕಂಗ್ರಾಟ್ಸ್’ ಹೇಳಿ ಶುಭಕೋರಿದ ದೃಶ್ಯಗಳು ಕಂಡಬAದವು. ಮೈದಾನದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಕೂಡ ನಿರಾಸೆಯಿಂದ ಹಿಂತಿರುಗಿದರು.
ಜಿಲ್ಲಾಡಳಿತದಿAದ ಉತ್ತಮ ವ್ಯವಸ್ಥೆ
ಪ್ರಸಕ್ತ ಚುನಾವಣೆಯಲ್ಲಿ ಜಿಲ್ಲಾಡಳಿತದಿಂದ ಮತ ಎಣಿಕೆ ಕೇಂದ್ರದಲ್ಲಿ ಉತ್ತಮ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಮಾಧ್ಯಮವರಿಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ವಿದ್ಯುನ್ಮಾನ ಯಂತ್ರದ ಮೂಲಕ ತ್ವರಿತ ರೀತಿಯಲ್ಲಿ ಮಾಹಿತಿ ಒದಗಿಸಲು ವಿಶೇಷ ತಾಂತ್ರಿಕ ಸಂಪರ್ಕ ಒದಗಿಸಲಾಗಿತ್ತು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಮತ್ತಿತರರು ಮಾಧ್ಯಮದವರೊಂದಿಗೆ ಕುಳಿತು ಕೈಜೋಡಿಸಿದ್ದರು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಕೆಲಕಾಲ ಮಾಧ್ಯಮ ಕೊಠಡಿಯಲ್ಲಿ ಕುಳಿತು ವ್ಯವಸ್ಥೆಯನ್ನು ಅವಲೋಕಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಎಣಿಕೆ ಕೇಂದ್ರದ ಆವರಣದಲ್ಲಿ ಡಿವೈಎಸ್ಪಿ ಮತ್ತಿತರ ಅಧಿಕಾರಿಗಳೊಂದಿಗೆ ನಿಂತು ಶಾಂತಿ ಸುವ್ಯವಸ್ಥೆ ಬಗ್ಗೆ ಪರಿಶೀಲನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಠೇವಣಿ ಕಳೆದುಕೊಂಡ ಜೆಡಿಎಸ್ ಎಸ್.ಡಿ.ಪಿ.ಐ., ಸರ್ವೋದಯ
ಚುನಾವಣಾ ಕಣದಲ್ಲಿ ಸದ್ದು ಮಾಡಿದ್ದ ಮಡಿಕೇರಿ ಕ್ಷೇತ್ರದ ಎಸ್.ಡಿ.ಪಿ.ಐ. ಅಭ್ಯರ್ಥಿ ಹಾಗೂ ವೀರಾಜಪೇಟೆ ಕ್ಷೇತ್ರದ ಸರ್ವೋದಯ ಪಕ್ಷದ ಅಭ್ಯರ್ಥಿ ಕಾಡ್ಯಮಾಡ ಮನು ಸೋಮಯ್ಯ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ನಿರೀಕ್ಷಿತ ಮತ ಗಳಿಸದೆ ಠೇವಣಿ ಕಳೆದುಕೊಂಡರು.
ಮನು ಸೋಮಯ್ಯ ಹಾಗೂ ಅವರ ಬೆಂಬಲಿಗರು ಹೆಚ್ಚಿನ ಮತ ದೊರೆಯುವ ಉತ್ಸಾಹದಿಂದ ಕೇಂದ್ರಕ್ಕೆ ಆಗಮಿಸಿದರು. ಆದರೆ, ಮೂರಂಕಿ ದಾಟದ ಹಿನ್ನೆಲೆ ಬೇಸರದಿಂದ ತೆರಳಿ ನಮ್ಮ ಹೋರಾಟಗಳಿಂದ ಸಹಾಯ ಪಡೆದವರು ನಮಗೆ ಮತ ನೀಡದ ಬಗ್ಗೆ ಮಾಧ್ಯಮದೊಂದಿಗೆ ಬೇಸರ ವ್ಯಕ್ತಪಡಿಸಿದರು. ಎಸ್.ಡಿ.ಪಿ.ಐ ಅಭ್ಯರ್ಥಿ ಅಮೀನ್ ಮೊಹಿಸಿನ್ ಕೇಂದ್ರದತ್ತ ಆಗಮಿಸಲಿಲ್ಲ. ಅದೇ ರೀತಿ ಜೆಡಿಎಸ್ ಅಭ್ಯರ್ಥಿಗಳಾದ ನಾಪಂಡ ಮುತ್ತಪ್ಪ ಹಾಗೂ ಮನ್ಸೂರ್ ಆಲಿ ಎಲ್ಲೂ ಕಂಡುಬರಲಿಲ್ಲ. ಅವರುಗಳೂ ಕೂಡ ಠೇವಣಿ ಕಳೆದುಕೊಂಡಿದ್ದಾರೆ.
ಬಿಗಿ ಭದ್ರತೆ
ಮತ ಎಣಿಕಾ ಕೇಂದ್ರದ ಸುತ್ತಲೂ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ೭೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಕೇಂದ್ರದಲ್ಲಿ ೪೦೦ ಪೊಲೀಸರಿಂದ ಭದ್ರತೆ ವಹಿಸಲಾಗಿತ್ತು. ಜೊತೆಗೆ ೧೦೦ ಅರೆಸೇನಾ ಪಡೆ ಸಿಬ್ಬಂದಿಗಳು, ೨ ಕೆಎಸ್ಆರ್ಪಿ ತುಕಡಿಗಳು ಇದ್ದವು. ೧ ಎಸ್.ಪಿ., ೧ ಎ.ಎಸ್.ಪಿ, ೩ ಡಿವೈಎಸ್ಪಿಗಳು, ೧೪ ಸಿ.ಪಿ.ಐ.ಗಳು, ೩೦ ಎಸ್.ಐ.ಗಳು ಭದ್ರತೆಯ ನೇತೃತ್ವ ವಹಿಸಿದ್ದರು. ಬೂತ್ ಏಜೆಂಟ್ಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಪತ್ರಕರ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಪ್ರವೇಶದ್ವಾರದಲ್ಲಿ ತಪಾಸಣೆ ಮಾಡಿ ಕಳುಹಿಸಲು ವ್ಯವಸ್ಥೆ ಮಾಡಲಾಗಿತ್ತು. ಸ್ಮಾರ್ಟ್ ವಾಚ್, ಮೊಬೈಲ್ ಅನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ನಿರ್ಬಂಧಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಪ್ರಕ್ರಿಯೆ ಮುಗಿಯುವ ತನಕ ಕೇಂದ್ರದಲ್ಲಿದ್ದು, ಪರಿಶೀಲನೆ ನಡೆಸಿದರು.