ಮಡಿಕೇರಿ, ಮೇ ೧೩: ಈ ಹಿಂದೆ ಕೊಡಗು ಮೂರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಾಗಿದ್ದವು. ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೊAಡು ಕೊಡಗು ೨ ಕ್ಷೇತ್ರಕ್ಕೆ (ಮಡಿಕೇರಿ - ವೀರಾಜಪೇಟೆ) ಸೀಮಿತವಾಗಿತ್ತು.

೨೦೦೮ಕ್ಕೆ ಮುನ್ನ ವೀರಾಜಪೇಟೆ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿತ್ತು. ೨೦೦೮ರ ಬಳಿಕ ಸಾಮಾನ್ಯ ಕ್ಷೇತ್ರವಾದರೂ ಕೊಡವ ಪ್ರಾಬಲ್ಯವಿರುವ ಈ ಕ್ಷೇತ್ರದಿಂದ ಈತನಕ ಕೊಡವ ಜನಾಂಗದ ಯಾರೂ ಶಾಸಕರಾಗಲಿಲ್ಲ. ಅರೆಭಾಷೆಗೌಡ ಜನಾಂಗಕ್ಕೆ ಸೇರಿದ ಕೆ.ಜಿ. ಬೋಪಯ್ಯ ಅವರು ೨೦೦೮ ರಿಂದ ಮೂರು ಬಾರಿ ಸತತ ಅವಧಿಗೆ ಇಲ್ಲಿಂದ ಶಾಸಕರಾಗಿ ಚುನಾಯಿತರಾಗಿದ್ದರು.

ವೀರಾಜಪೇಟೆ : ಮೊದಲ ಬಾರಿಗೆ ಕೊಡವ ಶಾಸಕ

(ಮೊದಲ ಪುಟದಿಂದ) ಈ ಅವಧಿಯಲ್ಲಿ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಸಂಕೇತ್ ಪೂವಯ್ಯ ಹೀಗೆ ಹಲವು ಕೊಡವರು ಸ್ಪರ್ಧಿಸಿದ್ದರಾದರೂ ಯಾರಿಗೂ ಜಯಗಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿಯ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಕೊಡವ ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿ ಕಾಂಗ್ರೆಸ್‌ನ ಅಭ್ಯರ್ಥಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರು ಚುನಾಯಿತರಾಗಿದ್ದಾರೆ.

ಮೈಸೂರು ರಾಜ್ಯ ಆಳ್ವಿಕೆ ಸಂದರ್ಭ ಸಿ.ಎಂ. ಪೂಣಚ್ಚ ಅವರು ಎರಡು ಬಾರಿ ವೀರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸಿ ರಾಜ್ಯ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ್ದು ಇತಿಹಾಸ.