ಮಡಿಕೇರಿ, ಮೇ ೧೩: ಜಿಲ್ಲೆಯಲ್ಲಿ ಭಾರತೀಯ ಜನತಾಪಕ್ಷ (ಬಿಜೆಪಿ)ದ ಭದ್ರಕೋಟೆ ಈ ಬಾರಿ ಛಿದ್ರಗೊಂಡಿದೆ. ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಸುಭದ್ರವಾಗಿದ್ದ ಬಿಜೆಪಿ ಆಡಳಿತದ ಪಾರುಪತ್ಯಕ್ಕೆ ಮತದಾರರು ಮಂಗಳ ಹಾಡಿದಂತಾಗಿದೆ.
ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಾದ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಈ ಬಾರಿ ಕಾಂಗ್ರೆಸ್ನ ಹೊಸ ಅಭ್ಯರ್ಥಿಗಳು ಕಳೆದ ಮೂರು ಅವಧಿಯಲ್ಲಿ ಸತತವಾಗಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಪ್ರಬಲ ಅಭ್ಯರ್ಥಿಗಳು, ಹಾಲಿ ಶಾಸಕರುಗಳನ್ನು ಪರಾಭವಗೊಳಿಸಿ ಇದೇ ಚೊಚ್ಚಲ ಬಾರಿಗೆ ರಾಜ್ಯ ವಿಧಾನಸಭೆಗೆ ಶಾಸಕರುಗಳಾಗಿ ಚುನಾಯಿತರಾಗಿದ್ದಾರೆ.
ವೀರಾಜಪೇಟೆ ಕ್ಷೇತ್ರದಿಂದ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಹಾಗೂ ಮಡಿಕೇರಿಯಿಂದ ಡಾ. ಮಂಥರ್ಗೌಡ ಅವರುಗಳು ಹಾಲಿ ಶಾಸಕರುಗಳಾಗಿದ್ದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳ ಎದುರು ಜಯ ಸಾಧಿಸುವ ಮೂಲಕ ಕೊಡಗಿನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಎ.ಎಸ್. ಪೊನ್ನಣ್ಣ ಅವರು ೪೨೯೧ ಮತಗಳಿಂದ ಹಾಗೂ ಡಾ. ಮಂಥರ್ಗೌಡ ಅವರು ೪೪೦೨ ಮತಗಳ ಅಂತರದಿAದ ವಿಜಯಮಾಲೆ ಧರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆ ಭಾರೀ ಕುತೂಹಲಕ್ಕೆ ಎಡೆಮಾಡಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರಬಲ ಸ್ಪರ್ಧೆ ಹಾಗೂ ಹಾಲಿ ಶಾಸಕರು - ಹೊಸಮುಖಗಳಾಗಿದ್ದ ಅಭ್ಯರ್ಥಿಗಳ ನಡುವಿನ ಸ್ಪರ್ಧೆ ಚುನಾವಣಾ ಕಣವನ್ನು ರಂಗೇರುವAತೆ ಮಾಡಿತ್ತು. ತಾ. ೧೦ ರಂದು ನಡೆದಿದ್ದ ಮತಸಮರದ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪೊನ್ನಣ್ಣ ಹಾಗೂ ಮಂಥರ್ಗೌಡ ಬಿಜೆಪಿಯ ಭದ್ರಕೋಟೆಗೆ ಲಗ್ಗೆ ಹಾಕುವಲ್ಲಿ ಯಶಸ್ಸು ಕಂಡಿದ್ದಾರೆ.
ಕೊಡಗಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ಬಳಿಕ ೨೦೦೮ ರಿಂದ ನಡೆದ ಮೂರು ವಿಧಾನ ಸಭಾ ಚುನಾವಣೆಗಳಲ್ಲೂ
(ಮೊದಲ ಪುಟದಿಂದ) ಕೊಡಗಿನ ಜನರು ಬಿಜೆಪಿಗೇ ಮಣೆ ಹಾಕಿದ್ದರು. ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರುಗಳು ಸತತ ಮೂರು ಗೆಲುವಿನೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದ್ದ ಶಾಸಕರುಗಳಾಗಿದ್ದು, ಈ ಬಾರಿಯೂ ಮತ್ತೆ ಬಿಜೆಪಿಯ ಹುರಿಯಾಳುಗಳಾಗಿದ್ದರು. ಆದರೆ ಪ್ರಸಕ್ತ ಅವಧಿಯಲ್ಲಿ ಮತದಾರರು ಬದಲಾವಣೆ ಬಯಸಿರುವ ಸ್ಪಷ್ಟ ಸಂದೇಶ ನೀಡಿದ್ದು, ಈ ಇಬ್ಬರೂ ಪ್ರಭಾವಿ ಶಾಸಕರು ಪರಾಜಿತರಾಗಿದ್ದಾರೆ.
ಮಡಿಕೇರಿ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಅವರು ಒಟ್ಟು ೭ ಬಾರಿ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿದ್ದು, ೫ ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರೆ, ಕೆ.ಜಿ. ಬೋಪಯ್ಯ ಅವರು ಆರು ಬಾರಿ ಸ್ಪರ್ಧೆ ಮಾಡಿದ್ದು, ನಾಲ್ಕು ಬಾರಿ ಶಾಸಕರಾಗಿದ್ದರು. ಆದರೆ ಈ ಬಾರಿಯ ಸ್ಪರ್ಧೆಯಲ್ಲಿ ಇಬ್ಬರೂ ಮುಗ್ಗರಿಸುವ ಮೂಲಕ ಇಡೀ ಬಿಜೆಪಿ ಪಾಳಯ ತಮ್ಮ ಭದ್ರಕೋಟೆ ಛಿದ್ರಗೊಂಡ ಆಘಾತದೊಂದಿಗೆ ನಿರಾಶೆಯ ನೋವಿನಿಂದ ಪರಿತಪಿಸುತ್ತಿದ್ದಾರೆ.
ಒಂದು ರೀತಿಯಲ್ಲಿ ಸುಮಾರು ೨೦ ವರ್ಷಗಳಿಂದ ಇಡೀ ಕೊಡಗಿನಲ್ಲಿ ನೆಲೆ ಕಳೆದುಕೊಂಡAತಿದ್ದ ಕಾಂಗ್ರೆಸ್ ಪಕ್ಷ ಈ ಬಾರಿ ಇಬ್ಬರು ಯುವ ಅಭ್ಯರ್ಥಿಗಳು ತಂದಿತ್ತ ಗೆಲುವಿನ ಸಂತಸದೊAದಿಗೆ ಮತ್ತೆ ಈ ಹಿಂದಿನ ಕಾಂಗ್ರೆಸ್ ವೈಭವದ ಹರ್ಷದಲ್ಲಿದ್ದಾರೆ.
ಮಡಿಕೇರಿಯ ಸಂತಜೋಸೆಫರ ಶಾಲಾ ಆವರಣದಲ್ಲಿ ಭಾರೀ ಭದ್ರತೆಯ ನಡುವೆ ಇಂದು ಮತ ಎಣಿಕೆ ಪ್ರಕ್ರಿಯೆ ಆರಂಭಗೊAಡಿತು. ಆರಂಭದಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವುದು ಕಂಡು ಬಂದಿದ್ದು, ಡಾ. ಮಂಥರ್ಗೌಡ ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಮುನ್ನಡೆ ಸಾಧಿಸುವ ಮೂಲಕ ವಿಜಯಶಾಲಿ ಯಾಗಿ ಹೊರಹೊಮ್ಮಿದರು.
ಆದರೆ, ವೀರಾಜಪೇಟೆ ಕ್ಷೇತ್ರದಲ್ಲಿ ಆರಂಭದ ೬ ಸುತ್ತಿನಲ್ಲಿ ಸುಮಾರು ೬ ಸಾವಿರ ಮತಗಳಿಂದ ಬಿಜೆಪಿ ಮುನ್ನಡೆಯಲ್ಲಿದ್ದು, ಇಲ್ಲಿ ಗೆಲುವಿನ ಭರವಸೆ ಎದುರಾಗಿತ್ತು. ಆದರೆ ೯ನೇ ಸುತ್ತಿನಲ್ಲಿ ಸುಮಾರು ೬೦೦ ಮತಗಳ ಮುನ್ನಡೆ ಪಡೆದ ಎ.ಎಸ್. ಪೊನ್ನಣ್ಣ ಮತ್ತೆ ಹಿನ್ನೆಡೆ ಕಾಣಲಿಲ್ಲ. ಅಂತಿಮವಾಗಿ ಇವರೂ ಗೆಲವು ಸಾಧಿಸುವ ಮೂಲಕ ಎರಡು ಕ್ಷೇತ್ರಗಳು ಕಾಂಗ್ರೆಸ್ಗೆ ‘‘ಸಿಹಿ’’ಯಾದವು.ನೋಟಾಕ್ಕೆ ೩೧೫೨ ಮತಗಳು...!
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಿಂದ ಒಟ್ಟು ೩೧೫೨ ಮತಗಳು ನೋಟಾಕ್ಕೆ ಬಿದ್ದಿವೆ. ಮಡಿಕೇರಿ ಕ್ಷೇತ್ರದಲ್ಲಿ ೧೫೧೬, ವೀರಾಜಪೇಟೆ ಕ್ಷೇತ್ರದಲ್ಲಿ ೧೬೩೬ ಮತಗಳು ‘ನೋಟಾ’ಕ್ಕೆ ಚಲಾಯಿಸಲ್ಪಟ್ಟಿದೆ. ಎರಡೂ ಕ್ಷೇತ್ರಗಳಲ್ಲಿ ಸೇರಿ ೭೦ ಅಂಚೆಗಳು ತಿರಸ್ಕೃತ ಮತಗಳಾಗಿವೆ. ಮಡಿಕೇರಿ ಕ್ಷೇತ್ರದಲ್ಲಿ ೩೧, ವೀರಾಜಪೇಟೆ ಕ್ಷೇತ್ರದಲ್ಲಿ ೩೯ ಅಂಚೆಮತಗಳು ತಿರಸ್ಕರಿಸಲ್ಪಟ್ಟಿವೆ.
ಮಂಥರ್ ಮ್ಯಾಜಿಕ್
ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ನಿAದ ಸ್ಪರ್ಧಿಸಿ ಅಚ್ಚರಿಯ ಸಾಧನೆ ತೋರಿದ್ದರೂ ಡಾ. ಮಂಥರ್ಗೌಡ ಆ ಸಂದರ್ಭ ಸುಜಾ ಕುಶಾಲಪ್ಪ ವಿರುದ್ಧ ಪರಾಭವಗೊಂಡಿದ್ದರು. ಇದೀಗ ಮತ್ತೆ ಮಡಿಕೇರಿ ಕ್ಷೇತ್ರದಿಂದ ಕಾಂಗ್ರೆಸ್ನಿAದ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಪಡೆದಿದ್ದ ಡಾ. ಮಂಥರ್ಗೌಡ ವಿಜಯಶಾಲಿಯಾಗಿದ್ದಾರೆ.
ಇಂದು ನಡೆದ ಮತ ಎಣಿಕೆಯಲ್ಲಿ ಅಂಚೆಮತ - ಸೇವಾಮತ ಎಣಿಕೆಯಿಂದಲೇ ಮುನ್ನಡೆಗಳಿಸಿದ್ದ ಅವರು ಬಳಿಕ ೨೦ ಸುತ್ತುಗಳಲ್ಲಿ ನಡೆದ ಮತ ಎಣಿಕೆಯ ಎಲ್ಲಾ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಸುಮಾರು ೧೫ ಸುತ್ತಿನ ಬಳಿಕ ಎದುರಾಳಿ ಅಪ್ಪಚ್ಚು ರಂಜನ್ ಅವರು ಈ ಹಿಂದಿನ ಚುನಾವಣೆಗಳಲ್ಲಿ ನಡೆದ ಮತ ಎಣಿಕೆಯ ಮಾದರಿಯಲ್ಲಿ ಕೊನೆಯ ಹಂತದಲ್ಲಿ ಮುನ್ನಡೆ ಸಾಧಿಸುವ ಹಲವರ ಕನಸು ಈ ಬಾರಿ ಈಡೇರಲೇ ಇಲ್ಲ. ಆರಂಭದಿAದಲೂ ಇದ್ದ ಸುಮಾರು ೩ ರಿಂದ ೪ ಸಾವಿರ ಮತಗಳ ಅಂತರವೇ ಕೊನೆಯ ತನಕವೂ ಮುಂದುವರಿದು ಅಂತಿಮವಾಗಿ ಡಾ. ಮಂಥರ್ಗೌಡ ಜಯ ಸಾಧಿಸಿದರು.
ಪೊನ್ನಣ್ಣಗೆ ಆರಂಭಿಕ ಆಘಾತ
ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಅವರಿಗೆ ಆರಂಭದಲ್ಲಿ ಆತಂಕ ಎದುರಾಗಿತ್ತು. ಅಂಚೆಮತ - ಸೇವಾಮತ ಮಾತ್ರವಲ್ಲದೆ ಆರಂಭದ ಆರು ಸುತ್ತಿನ ಮತ ಎಣಿಕೆಯತನಕವೂ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರು ಮುನ್ನಡೆಗಳಿಸುತ್ತಲೇ ಬಂದಿದ್ದರು. ೮ನೇ ಸುತ್ತಿನ ವೇಳೆಗೆ ಅಂತರ ೨೧೬೭ ರಷ್ಟಿತ್ತು. ಆದರೆ ೯ನೇಯ ಸುತ್ತಿನಿಂದ ಪೊನ್ನಣ್ಣ ಪರ್ವ ಆರಂಭಗೊAಡಿತು. ಅಂದಾಜು ೬೭೪ ಮತಗಳ ಅತ್ಯಲ್ಪ ಅಂತರದ ಮುನ್ನಡೆಗಳಿಸಿದ ಅವರು ನಂತರದಲ್ಲಿ ಇದನ್ನು ಕಾಯ್ದುಕೊಂಡರು.
ಒಂದೊಮ್ಮೆ ಪೊನ್ನಣ್ಣ ಅವರು ಸುಮಾರು ೬ ಸಾವಿರ ಅಂತರದಷ್ಟು ಮುನ್ನಡೆಗೆ ಬಂದಿದ್ದರಾದರೂ ಮತ್ತೆ ಅಂತರ ಕುಸಿತವಾದಾಗ ಪೊನ್ನಣ್ಣ ಅಭಿಮಾನಿಗಳು ಹಾಗೂ ಕಾಂಗ್ರೆಸ್ಸಿಗರಲ್ಲಿ ಮತ್ತೆ ಆತಂಕದ ಛಾಯೆ ಎದುರಾಯಿತಾದರೂ ಇದು ಬಳಿಕ ಪೆಟ್ಟಾಗಲಿಲ್ಲ. ೨೦ನೇಯ ಸುತ್ತಿನ ತನಕವೂ ಸುಮಾರು ೪ ಸಾವಿರ ಮತಗಳ ಅಂತರ ಹಾಗೆಯೇ ಮುಂದುವರಿದು, ಅಂತಿಮವಾಗಿ ೪೨೯೧ ಮತಗಳಿಂದ ಅವರು ವಿಜಯ ಸಾಧಿಸಿದರು.ಮುನ್ನಡೆಯನ್ನೇ ಕಾಣದ ರಂಜನ್
ಈ ಹಿಂದಿನ ಚುನಾವಣೆಗಳಲ್ಲಿ ಅಪ್ಪಚ್ಚುರಂಜನ್ ಅವರು ಆರಂಭಿಕ ಹಂತದಲ್ಲಿ ಬಹುತೇಕ ಬಾರಿ ಹಿನ್ನಡೆಯನ್ನೇ ಕಾಣುತ್ತಿದ್ದರು. ಆದರೆ ಕೊನೆಯ ಹಂತದ ಮತ ಎಣಿಕೆಯ ಸುತ್ತುಗಳು ಬರುತ್ತಿದ್ದಂತೆ, ಕ್ರಿಕೆಟ್ ಆಟದಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವಂತೆ ಮುನ್ನಡೆಗಳಿಸುತ್ತಾ ಜಯಗಳಿಸುತ್ತಿದ್ದುದು ಈ ಬಾರಿಯೂ ಇದು ಮುಂದುವರಿಯಬಹುದು ಎಂಬ ನಿರೀಕ್ಷೆ ಮೂಡಿಸಿತ್ತು. ಆದರೆ ವಿಪರ್ಯಾಸವೆಂಬAತೆ ಅಪ್ಪಚ್ಚು ರಂಜನ್ ಅವರು ಈ ಚುನಾವಣೆಯಲ್ಲಿ ಯಾವುದೇ ಹಂತದಲ್ಲೂ ಮುನ್ನಡೆಯನ್ನೇ ಕಾಣದೆ ಸೋಲು ಕಂಡರು.ಮೊದಲ ಬಾರಿ ಹಿನ್ನಡೆ ಕಂಡ ಕೆ.ಜಿ.ಬಿ.
ಮಡಿಕೇರಿ ಕ್ಷೇತ್ರದಿಂದ ಎದುರಿಸಿದ್ದ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದ ಕೆ.ಜಿ. ಬೋಪಯ್ಯ ಅವರು ೨೦೦೪ರಲ್ಲಿ ಇದೇ ಕ್ಷೇತ್ರದಲ್ಲಿ ಮತ್ತೆ ಜಯಗಳಿಸಿದ್ದರು. ೨೦೦೮ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ವೀರಾಜಪೇಟೆ ಕ್ಷೇತ್ರದಿಂದ ಅಭ್ಯರ್ಥಿಯಾದ ಅವರು ೨೦೦೮, ೨೦೧೩, ೨೦೧೮ರ ಚುನಾವಣೆಯಲ್ಲಿ ಎಲ್ಲೂ ಹಿನ್ನಡೆಯನ್ನೇ ಕಂಡಿರಲಿಲ್ಲ. ಈ ಎಲ್ಲಾ ಚುನಾವಣೆಗಳಲ್ಲೂ ಬೋಪಯ್ಯ ಅವರು ಆರಂಭದಿAದ ಕೊನೆಯ ತನಕವೂ ಮುನ್ನಡೆಯಲ್ಲೇ ಇರುತ್ತಿದ್ದರು. ಈ ಬಾರಿಯ ಮತ ಎಣಿಕೆಯ ಸಂದರ್ಭವೂ ಆರಂಭದಲ್ಲಿ ಇದೇ ಲಕ್ಷಣ ಕಂಡು ಬಂದು ಸುಮಾರು ೬ ಸಾವಿರ ಮತಗಳ ಮುನ್ನಡೆ ಕಂಡಿದ್ದರು.
ಆದರೆ ೯ನೇ ಸುತ್ತಿನಲ್ಲಿ ಎದುರಾಳಿ ಪೊನ್ನಣ್ಣ ಅವರು ೬೭೪ ಮತಗಳ ಮುನ್ನಡೆ ಗಳಿಸಿದ್ದು, ಬೋಪಯ್ಯ ಅವರಿಗೆ ಈ ತನಕದ ಚುನಾವಣೆಗಳಲ್ಲಿ ಪ್ರಥಮ ಹಿನ್ನಡೆಯಾಗಿತ್ತು. ನಂತರದಲ್ಲಿ ಪೊನ್ನಣ್ಣ ಮುನ್ನಡೆ ಕಾಯ್ದುಕೊಳ್ಳುವದರೊಂದಿಗೆ ಬೋಪಯ್ಯ ಅವರು ೨೦ ವರ್ಷಗಳ ಬಳಿಕ ಸೋಲು ಅನುಭವಿಸಿದರು.