ಮಡಿಕೇರಿ, ಮೇ ೧೦: ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಕುಗ್ರಾಮಗಳೆಂದೇ ಕರೆಯಲ್ಪಡುತ್ತಿರುವ ಗಾಳಿಬೀಡು, ವಣಚಲು, ಕಾಲೂರು, ಮಕ್ಕಂದೂರು, ಮುಕ್ಕೋಡ್ಲು ಮುಂತಾದೆಡೆಗಳಲ್ಲಿ ಮತದಾರರು ಹುರುಪಿನಿಂದ ಮತದಾನ ಮಾಡಿದರು. ಬೆಳಿಗ್ಗೆಯಿಂದಲೇ ಮತಗಟ್ಟೆಗೆ ಸ್ವ ಇಚ್ಛೆಯಿಂದ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ನಕ್ಸಲ್ ಪೀಡಿತ ಹಾಗೂ ಅತಿ ಸೂಕ್ಷö್ಮ ಮತಗಟ್ಟೆಗಳೆಂದು ಗುರುತಿಸಲಾಗಿರುವ ಈ ಗ್ರಾಮಗಳಲ್ಲಿ ಮತದಾರರು ಯಾವದೇ ಆತಂಕ, ಅಳುಕಿಲ್ಲದೆ ಆಗಮಿಸಿ ಮತ ಚಲಾಯಿಸುತ್ತಿದ್ದುದು ಕಂಡು ಬಂದಿತು. ಮಹಿಳೆಯರು ಹಾಗೂ ಹಿರಿಯರೇ ಅತಿ ಉತ್ಸುಕತೆಯಿಂದ ದೂರದಿಂದ ನಡೆದುಕೊಂಡು ಬಂದು ಎಲ್ಲರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ನಕ್ಸಲ್ ಪೀಡಿತ, ಕಾಡುಮೂಲೆ ಯಲ್ಲಿರುವ ವಣಚಲು ಮತಗಟ್ಟೆಯಲ್ಲಿ ಬೆಳಿಗ್ಗೆ ೧೧ ಗಂಟೆ ವೇಳೆಗಾಗಲೇ ಶೇ. ೫೦ ರಷ್ಟು ಮತದಾನ ಪೂರ್ಣಗೊಂಡಿತ್ತು. ಪೊಲೀಸರ ಸಹಿತ ನಾಲ್ವರು ಶಸ್ತç ಸಜ್ಜಿತ ಸಿಐಎಸ್‌ಎಫ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಟ್ಟು ಪಾಳು ಬಿದ್ದಿರುವ ಸರಕಾರಿ ಶಾಲೆಯನ್ನು ಮತದಾನಕ್ಕೋಸ್ಕರ ದುರಸ್ತಿಪಡಿಸಿ ತಯಾರಿ ಮಾಡಲಾಗಿತ್ತು.

ಗಾಳಿಬೀಡಿನಲ್ಲಿ ಬತ್ತದ ಉತ್ಸಾಹ

ಸೂಕ್ಷö್ಮ ಮತಗಟ್ಟೆಯಾಗಿರುವ ಗಾಳಿಬೀಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತದಾನ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಮತದಾರರ ಉತ್ಸಾಹ ಕಂಡುಬAದಿತು. ಪುರುಷ, ಮಹಿಳೆಯರಾದಿಯಾಗಿ ಮಕ್ಕಳ ಸಹಿತ ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ಕಿಕ್ಕಿರಿದು ತುಂಬಿದ್ದ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿರಿಯರೇ ಕಂಡು ಬಂದರು. ಹಿರಿಯ ಮತದಾರರು ಅನೇಕರಿದ್ದರೂ ಅವರುಗಳಿಗೆ ಮತ ಚಲಾಯಿಸಲು ಪ್ರತ್ಯೇಕ ವ್ಯವಸ್ಥೆ ಇಲ್ಲದ್ದರಿಂದ ಬಹುತೇಕ ಹಿರಿಯ ಮತದಾರರು ಸಾಲಿನಲ್ಲಿ ನಿಂತು ಬಸವಳಿದು ಮತಗಟ್ಟೆ ಪ್ರಾಂಗಣದಲ್ಲಿ ಕುಳಿತಿದ್ದ ದೃಶ್ಯ ಗೋಚರಿಸಿತು.

ಮಕ್ಕಳಲ್ಲೂ ಆಸಕ್ತಿ..!

ಚುನಾವಣೆ ಹಾಗೂ ಮತದಾನದ ಬಗ್ಗೆ ಮಕ್ಕಳಲ್ಲೂ ಆಸಕ್ತಿ ಇದ್ದುದು ಗೋಚರಿಸಿತು. ಅಪ್ಪ, ಅಮ್ಮಂದಿರೊAದಿಗೆ ಮಕ್ಕಳೂ ಕೂಡ ಮತಗಟ್ಟೆಯಲ್ಲಿ ಕಾಣಿಸಿಕೊಂಡರು. ಅಪ್ಪ, ಅಮ್ಮಂದಿರು ಸರತಿ ಸಾಲಿನಲ್ಲಿ ನಿಂತಿದ್ದರೆ ಮಕ್ಕಳು ಅತ್ತಿತ್ತ ಸುತ್ತಾಡಿ, ಎಲ್ಲವನ್ನೂ ಗಮನಿಸಿ ಬಳಿಕ ತಮ್ಮ ಪಾಡಿಗೆ ಮೊಬೈಲ್ ಪ್ರಪಂಚದಲ್ಲಿ ಮುಳುಗಿದ್ದರು..!

ಕಾಲೂರಿನಲ್ಲಿ ಸರತಿ ಸಾಲು

ಮತ್ತೊಂದು ನಕ್ಸಲ್ ಪೀಡಿತ ಮತಗಟ್ಟೆಯಾಗಿರುವ ಕಾಲೂರು ಸರಕಾರಿ ಶಾಲೆ ಮತಗಟ್ಟೆಯಲ್ಲಿಯೂ ಮತದಾರರ ಸರತಿ ಸಾಲು ಕಂಡುಬAದಿತು. ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಾಗುತ್ತಿದ್ದರೂ ಮತದಾರ ರಲ್ಲಿನ ಉತ್ಸಾಹ ಮಾತ್ರ ಕಡಿಮೆಯಾ ದಂತಿರಲಿಲ್ಲ. ಮಹಿಳೆಯರು, ಹಿರಿಯರೇ ಹೆಚ್ಚಾಗಿದ್ದ ಮತಗಟ್ಟೆಯಲ್ಲಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ನಕ್ಸಲ್ ಪೀಡಿತ ಕೇಂದ್ರವಾಗಿದ್ದರಿAದ ಪೊಲೀಸರು, ಶಸ್ತçಸಜ್ಜಿತ ಸಿಐಎಸ್‌ಎಫ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು. ಸ್ವೀಫ್ ಸಮಿತಿ ಯಿಂದ ಚುನಾವಣಾ ರಾಯ ಭಾರಿಯಾಗಿ ನಿಯೋಜನೆಗೊಂಡಿರುವ ಗೃಹರಕ್ಷಕ ದಳದ ಕೊತ್ತೋಳಿ ಮುತ್ತಪ್ಪ ಮತಗಟ್ಟೆಯಲ್ಲಿದ್ದು ಜಾಗೃತಿ ಮೂಡಿಸಿದರು.

(ಮೊದಲ ಪುಟದಿಂದ)

ಹಿರಿಯರಿಗೆ ಅವಕಾಶ ನಿರಾಕರಣೆ

ಕಾಲೂರು ಮತಗಟ್ಟೆಯಲ್ಲಿ ಸರತಿ ಸಾಲು ಹೆಚ್ಚಾದಂತೆ ಬಿಸಿಲು ಕೂಡ ಹೆಚ್ಚಾಗುತ್ತಿತ್ತು. ಬಿಸಿಲಿನೇಟು ತಡೆಯಲಾರದೆ ಪುರುಷರು ಎರಡು ಸಾಲಿನಲ್ಲಿ ನಿಂತಿದ್ದರು. ಮತಗಟ್ಟೆಗೆ ಬರುತ್ತಿದ್ದ ಹಿರಿಯರನ್ನು ಸಾಲಿನಲ್ಲಿ ನಿಲ್ಲಗೊಡದ ಯುವಕರು ಅವರುಗಳನ್ನು ನೇರವಾಗಿ ಮತದಾನಕ್ಕೆ ಕಳುಹಿಸಿಕೊಡುತ್ತಿದ್ದರು. ಇದನ್ನು ಗಮನಿಸಿದ ಸಿಎಸ್‌ಎಫ್ ಸಿಬ್ಬಂದಿಗಳು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲಿದ್ದ ಪೊಲೀಸರು ಮುಂದೆ ನಿಂತಿದ್ದ ಹಿರಿಯರನ್ನು ತಡೆದು ಹಿಂದೆ ಸರಿಸಿದರಲ್ಲದೆ, ಎಲ್ಲರನ್ನು ಒಂದೇ ಸಾಲಿನಲ್ಲಿ ನಿಲ್ಲುವಂತೆ ದಬಾಯಿಸುತ್ತಿದ್ದ ದೃಶ್ಯ ಗೋಚರಿಸಿತು. ಈ ಸಂದರ್ಭ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ಕುಡಿಯುವ ನೀರಿಲ್ಲ..!

ಗಾಳಿಬೀಡು ಹಾಗೂ ಕಾಲೂರು ಮತಗಟ್ಟೆಗಳಲ್ಲಿ ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಗಾಳಿಬೀಡಿನಲ್ಲಿ ನೀರಿನ ಕ್ಯಾನ್ ಇರಿಸಲಾಗಿತ್ತಾದರೂ ಕುಡಿಯಲು ಗ್ಲಾಸ್ ಇರಲಿಲ್ಲ. ಕಾಲೂರಿನಲ್ಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೇ ಮಾಡಿರಲಿಲ್ಲ. ಬಿಸಿಲಿನಿಂದ ದಣಿದವರು ಪಕ್ಕದ ಅಂಗನವಾಡಿಗೆ ತೆರಳಿ ನೀರು ಕುಡಿದು ಬರುತ್ತಿದ್ದುದು ಕಂಡು ಬಂದಿತು.

ಅತಿಸೂಕ್ಷö್ಮ ಮತಗಟ್ಟೆಯಾಗಿರುವ ಮಕ್ಕಂದೂರು ಹಾಗೂ ಮುಕ್ಕೋಡ್ಲು ಮತಗಟ್ಟೆಗಳಲ್ಲಿ ಕೂಡ ಹುರುಪಿನ ಮತದಾನ ಕಂಡುಬAದಿತು. ಮಧ್ಯಾಹ್ನದ ವೇಳೆಗೆ ಶೇ. ೫೦ರಷ್ಟು ಮತದಾನ ಮುಗಿದಿತ್ತು. ಎಲ್ಲ ಮತಗಟ್ಟೆಗಳ ೨೦೦ ಮೀ. ದೂರದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು, ಪ್ರಮುಖರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು.