ಸೋಮವಾರಪೇಟೆ, ಮೇ ೧೦: ಮಡಿಕೇರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಆದರೆ ಸಂಜೆ ವೇಳೆಗೆ ಮಾದಾಪುರದಲ್ಲಿ ಗೊಂದಲ ಏರ್ಪಟ್ಟು ಭದ್ರತಾ ಸಿಬ್ಬಂದಿಗಳು ಮತದಾರರ ಮೇಲೆ ಲಾಠಿ ಚಾರ್ಜ್ ಮಾಡುವ ಮೂಲಕ ಅಶಾಂತಿಗೆ ಕಾರಣರಾದರು.

ಮಾದಾಪುರದ ಮತಗಟ್ಟೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ಮಂದಗತಿಯಲ್ಲಿ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು. ಮಧ್ಯಾಹ್ನದ ವೇಳೆಗೆ ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ಸಂಜೆಯಾದರೂ ಮತದಾನಕ್ಕೆ ಅವಕಾಶ ಲಭಿಸಲಿಲ್ಲ.

ಮಾದಾಪುರದ ಜಂಬೂರು ಮತಗಟ್ಟೆ ೧೧೯ರಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು ಚುರುಕಿನ ಮತದಾನಕ್ಕೆ ಅವಕಾಶ ನೀಡಲಿಲ್ಲ. ಮತದಾರರ ಭಾವಚಿತ್ರ, ಗುರುತಿನ ಚೀಟಿ ಪರಿಶೀಲನೆ ಯಲ್ಲಿಯೇ ಕಾಲಕಳೆಯುತ್ತಿದ್ದುದರಿಂದ ಸರತಿ ಸಾಲಿನಲ್ಲಿ ನಿಂತಿದ್ದವರು ಸುಸ್ತಾದರು.

೧೫೦೦ಕ್ಕೂ ಅಧಿಕ ಮತದಾರರಿರುವ ಈ ಮತಗಟ್ಟೆಯಲ್ಲಿ ಸಂಜೆ ೪ ಗಂಟೆಯ ವೇಳೆಗೆ ೫೦೦ರಷ್ಟೂ ಮತದಾನವಾಗಿಲ್ಲ. ಮತಗಟ್ಟೆಯ ಒಳಗೆ ೪೦೦ಕ್ಕೂ ಅಧಿಕ ಮಂದಿ ಮತದಾನಕ್ಕೆ ನಿಂತಿದ್ದರು. ಆದರೆ ಅಧಿಕಾರಿಗಳು ದುರ್ಬೀನು ಹಾಕಿಕೊಂಡು ಮತದಾರರ ಪಟ್ಟಿ ಪರಿಶೀಲನೆ ನಡೆಸುತ್ತಿರುವುದರಿಂದ ಬಿರುಸಿನ ಮತದಾನ ನಡೆಯಲಿಲ್ಲ.

ಲಾಠಿ ಚಾರ್ಜ್

ಹೊರ ಭಾಗದಲ್ಲಿ ನಿಂತಿದ್ದ ಮಂದಿಗೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ವೃದ್ಧರು, ಮಹಿಳೆಯರು ಗಂಟೆ ಗಟ್ಟಲೆ ಕಾದು ನಿಂತು ಸುಸ್ತಾಗಿ ಕೆಳಗೆ ಬೀಳುತ್ತಿದ್ದರು. ಈ ಸಂದರ್ಭ ಕುಡಿಯುವ ನೀರು ಕೇಳಿದ್ದಕ್ಕೆ ಭದ್ರತಾ ಸಿಬ್ಬಂದಿಗಳು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕುಡಿಯಲು ನೀರು ಕೇಳಿದ ಸಂದರ್ಭ ಭದ್ರತೆಗೆ ನಿಯೋಜನೆಗೊಂಡಿದ್ದ ಐಟಿಬಿಪಿ ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದರಿಂದ ರೊಚ್ಚಿಗೆದ್ದ ಮತದಾರರು, ಮತಗಟ್ಟೆಯಿಂದ ಭದ್ರತಾ ಸಿಬ್ಬಂದಿಗಳನ್ನು ಹೊರ ಕಳುಹಿಸುವಂತೆ ಪಟ್ಟು ಹಿಡಿದರು. ನಂತರ ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಸೇರಿದಂತೆ ಇತರ ಅಧಿಕಾರಿಗಳು ಮತದಾರರನ್ನು ಸಮಾಧಾನಪಡಿಸಿದರು. ಅಷ್ಟರಲ್ಲಾಗಲೇ ಲಾಠಿ ಚಾರ್ಜ್ನಿಂದ ಬೆದರಿದ ನೂರಾರು ಮತದಾರರು ಮತಗಟ್ಟೆಯಿಂದ ಹೊರ ಹೋಗಿದ್ದರು.

ಮತಗಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲ. ನಾವುಗಳೇ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದರೂ ಭದ್ರತಾ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ.

ಉಳಿದಂತೆ ಕೆಲವೊಂದು ಮತಗಟ್ಟೆಗಳಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಎದುರಾಗಿದ್ದನ್ನು ಹೊರತುಪಡಿಸಿದರೆ, ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗಿನಿಂದ ಸಂಜೆ ೬ ಗಂಟೆಯವರೆಗೆ ಮತದಾನ ಶಾಂತಿಯುತವಾಗಿತ್ತು.

ತಾAತ್ರಿಕ ದೋಷ

ಗಡಿಭಾಗ ಕೊಡ್ಲಿಪೇಟೆಯ ಮತಗಟ್ಟೆ ೧೩ರಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಂಡುಬAದು, ಮತದಾನ ಅರ್ಧಗಂಟೆಗಳ ಕಾಲ ತಡವಾಗಿ ಆರಂಭವಾಯಿತು. ಕೊಡ್ಲಿಪೇಟೆ ಉರ್ದುಶಾಲೆಯಲ್ಲಿನ ಮತಗಟ್ಟೆಗೆ ತಂದಿದ್ದ ಇವಿಎಂ ಯಂತ್ರದಲ್ಲಿ ದೋಷ ಕಂಡುಬAತು. ೭ ಗಂಟೆಯ ವೇಳೆಗಾಗಲೇ ೩೦ಕ್ಕೂ ಅಧಿಕ ಮತದಾರರು ಮತದಾನಕ್ಕಾಗಿ ಕಾಯುತ್ತಿದ್ದರು.

ನಂತರ ಚುನಾವಣಾ ಉಸ್ತುವಾರಿ ಅಧಿಕಾರಿಯಾಗಿದ್ದ ಡಾ. ಬದಾಮಿ ಅವರು ಬದಲಿ ಇವಿಎಂ ಅಳವಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಇಲ್ಲಿ ಅರ್ಧಗಂಟೆಗಳ ಕಾಲ ಮತದಾನ ವಿಳಂಬವಾಗಿ ಆರಂಭವಾಯಿತು.

ಉಳಿದAತೆ ಬಹುತೇಕ ಕಡೆಗಳಲ್ಲಿ ನಿಗದಿತ ಸಮಯಕ್ಕೆ ಮತದಾನ ಆರಂಭಗೊAಡಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತಗಟ್ಟೆಗೆ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಎಲ್ಲಾ ಮತಗಟ್ಟೆಗಳಿಗೆ ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಮತಗಟ್ಟೆಗಳ ೧೦೦ ಮೀಟರ್ ಅಂತರದಲ್ಲಿ ಪ್ರಚಾರ ಕಾರ್ಯವನ್ನು ನಿಷೇಧಿಸಲಾಗಿತ್ತು. ಆದರೂ ಕೆಲವೊಂದು ಮತಗಟ್ಟೆಗಳಲ್ಲಿ ಪಕ್ಷದ ಕಾರ್ಯಕರ್ತರುಗಳು ಅಂತಿಮ ಹಂತದವರೆಗೂ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದರು.

ಬೆಳಿಗ್ಗೆ ಹಾಗೂ ಸಂಜೆಯ ವೇಳೆಗೆ ಬಿರುಸಿನ ಮತದಾನ ನಡೆಯಿತು. ಕೆಲಸ ಕಾರ್ಯಗಳಿಗೆ ತೆರಳುವ ಮಂದಿ ಬೆಳಿಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ ಕೆಲಸಕ್ಕೆ ತೆರಳಿದ್ದ ಮಂದಿ ಸಂಜೆ ೩ ಗಂಟೆಯ ನಂತರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಸಂಜೆ ೬ ಗಂಟೆಯ ನಂತರವೂ ಹಲವು ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ೬ ಗಂಟೆಯ ಒಳಗೆ ಮತಗಟ್ಟೆ ಪ್ರವೇಶಿಸಿದ್ದ ಮಂದಿಗೆ ಅವಕಾಶ ಕಲ್ಪಿಸಲಾಯಿತು.

ಮತಗಟ್ಟೆಯ ಹೊರಭಾಗದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಹುರುಪಿನೊಂದಿಗೆ ಮತಯಾಚನೆ ಯಲ್ಲಿ ತೊಡಗಿದ್ದರು. ತಮ್ಮ ಪಕ್ಷದ ಬಾವುಟ, ಶಾಲು, ಟೋಪಿಗಳನ್ನು ಧರಿಸಿ ಅಂತಿಮ ಕ್ಷಣದವರೆಗೂ ಮತದಾರರ ಮನಸೆಳೆಯುವ ಕಸರತ್ತು ನಡೆಸಿದರು.

ಅಭ್ಯರ್ಥಿಗಳು ತಮ್ಮ ಮತ ಚಲಾವಣೆ ನಂತರ ಕ್ಷೇತ್ರದ ಇತರ ಬೂತ್‌ಗಳಿಗೆ ತೆರಳಿ ಕಾರ್ಯಕರ್ತ ರೊಂದಿಗೆ ಬೆರೆತರು. ಮತಗಟ್ಟೆಯಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದರು.

ಕೆಲಸ, ವಿದ್ಯಾಭ್ಯಾಸ ನಿಮಿತ್ತ ಹೊರ ಜಿಲ್ಲೆಗಳಲ್ಲಿ ನೆಲೆಸಿರುವ ಮತದಾರರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸಿದರು. ಬಹುತೇಕ ಮಂದಿ ಬಂದು ಹೋಗುವ ಖರ್ಚು ವೆಚ್ಚವನ್ನು ರಾಜಕೀಯ ಪಕ್ಷಗಳ ಮುಖಂಡರು ವಹಿಸಿಕೊಂಡಿ ದ್ದರು. ಮತದಾನ ದಿನವಾದ್ದರಿಂದ ಪಟ್ಟಣದಲ್ಲಿ ಜನ ಸಂಚಾರ ವಿರಳವಾಗಿತ್ತು. ಒಟ್ಟಾರೆ ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಮತದಾನದಲ್ಲಿ ಮತದಾರರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅತ್ಯುತ್ಸಾಹ ದೊಂದಿಗೆ ಭಾಗಿಯಾಗಿದ್ದರು.

ಮತಗಟ್ಟೆಗೆ ಆಗಮಿಸುವ ಮಂದಿಯ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣಕ್ಕೆ ಉಪಚಾರ ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಮತಗಟ್ಟೆಯಲ್ಲಿ ನಿಯೋಜಿಸಲಾಗಿತ್ತು.

ಹಾಸನ ಜಿಲ್ಲೆಯ ಗಡಿಯನ್ನು ಹೊಂದಿಕೊAಡಿರುವ ಕೊಡ್ಲಿಪೇಟೆ ವ್ಯಾಪ್ತಿಯ ಶಾಂತಪುರ ಹಾಗೂ ಶನಿವಾರಸಂತೆ ವ್ಯಾಪ್ತಿಯ ಹಿಪ್ಲಿಗೇಟ್, ಸೋಮವಾರಪೇಟೆ ವ್ಯಾಪ್ತಿಯ ಬಾಣಾವರ ಚೆಕ್‌ಪೋಸ್ಟ್ಗಳಲ್ಲಿ ಅಧಿಕಾರಿಗಳು, ವಾಹನಗಳನ್ನು ತಪಾಸಣೆಗೆ ಒಳಪಡಿಸಿದ ನಂತರ ಜಿಲ್ಲೆಯೊಳಗೆ ಬರಲು ಅವಕಾಶ ಕಲ್ಪಿಸಿದರು.