*ಗೋಣಿಕೊಪ್ಪ, ಮೇ ೧೦: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆ ಪೊನ್ನಂಪೇಟೆ ತಾಲೂಕಿನಲ್ಲಿ ಶಾಂತಿಯುತವಾಗಿ ನಡೆಯಿತು.

ಬೆಳಿಗ್ಗೆ ೭ ಗಂಟೆಗೆ ಪ್ರಾರಂಭವಾದ ಮತದಾನದ ಪ್ರಕ್ರಿಯೆ ಬಿರುಸಿನಿಂದ ಸಾಗಿತ್ತಾದರೂ, ಮಧ್ಯಾಹ್ನದ ವೇಳೆ ನಿಧಾನಗತಿಯಾಗಿತ್ತು. ಕ್ಷೇತ್ರದಲ್ಲಿ ೫ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾದಾನ್ಯತೆ ಇದ್ದ ಕಾರಣ ಮೂರು ಮಹಿಳೆಯರ ನಂತರ ಒಬ್ಬ ಪುರುಷನನ್ನು ಮತ ಹಾಕಲು ಒಳಪ್ರವೇಶವಿದ್ದ ಕಾರಣದಿಂದ ತುಸು ವಿಳಂಬವೇ ಆಗುತ್ತಿತ್ತು. ಉಳಿದಂತೆ, ನಾಗರಹೊಳೆ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಿರ್ಮಿಸಲಾದ ಎಥಿನಿಕ್ ಮತಗಟ್ಟೆ ಹೆಚ್ಚು ಗಮನ ಸೆಳೆಯಿತು. ಕಾಡಿನ ಮಕ್ಕಳು ತಮ್ಮ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿದರು. ಸೆಲ್ಫಿ ಮತಗಟ್ಟೆಗಳಲ್ಲಿ ಮಹಿಳೆಯರು ಹೆಚ್ಚು ಸೆಲ್ಫಿ ತೆಗೆದುಕೊಂಡು ಸಂಭಮಿಸಿದರು. ಸರದಿ ಸಾಲಿನಲ್ಲಿ ನಿಂತು ಹಿರಿಯರು, ಕಿರಿಯರು ಎಂಬ ಬೇದಭಾವವಿಲ್ಲದೇ ಮತ ಚಲಾಯಿಸಿ ಉತ್ಸಾಹಗೊಂಡರು. ಮೊದಲ ಬಾರಿಗೆ ಮತ ಹಾಕುತ್ತಿರುವ ಯುವ ಮತದಾರರಂತೂ ದೇಶದ ಭವಿಷ್ಯಕ್ಕಾಗಿ ಮತ ಹಾಕುತ್ತಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗೋಣಿಕೊಪ್ಪ ಮಹಿಳಾ ಸಮಾಜದಲ್ಲಿ, ತಿತಿಮತಿ ಗ್ರಾಮ ಪಂಚಾಯಿತಿ, ಜ್ಯೂನಿಯರ್ ಕಾಲೇಜು, ಪೊನ್ನಂಪೇಟೆ, ಜಿ.ಯಂ.ಪಿ. ಶಾಲೆ, ವಿರಾಜಪೇಟೆ, ಜಯಪ್ರಕಾಶ್ ವಿದ್ಯಾರ್ಥಿನಿಯರ ಪ್ರೌಢಶಾಲೆ ವೀರಾಜಪೇಟೆ, ಸಂತ ಅಂತೋಣಿ ಮತಗಟ್ಟೆಗಳಲ್ಲಿ ತೆರೆಯಲಾದ ಸಖಿ ಪಿಂಕ್ ಬೂತ್, ವೀರಾಜಪೇಟೆ ಶಾಲೆಯಲ್ಲಿ ಬೂತ್‌ನಲ್ಲಿ ವಿಶೇಷಚೇತನರಿಗೆ ಕಲ್ಲುಬಾಣೆ, ಬದ್ರಿಯ ಹಿರಿಯ ಪ್ರಾಥಮಿಕ ಬೂತ್‌ನಲ್ಲಿ ಯುವ ಮತಗಟ್ಟೆ, ಥೀಮ್ ಬೇಸ್ಟ್ ಮತಗಟ್ಟೆಯನ್ನು ಪೊನ್ನಂಪೇಟೆ ಜ್ಯೂನಿಯರ್ ಕಾಲೇಜು, ಎಥಿನಿಕ್ ಮತಗಟ್ಟೆಯನ್ನು ತಿತಿಮತಿ ಪ್ರಾಥಮಿಕ ಶಾಲೆಗಳಲ್ಲಿ ತೆರೆಯಲಾದ ವಿಶೇಷ ಮತಗಟ್ಟೆಗಳು ಗಮನ ಸೆಳೆದವು.

ವೀರಾಜಪೇಟೆ ಕೆದಮುಳ್ಳೂರು ಪುದಿಯಾನ ಚರ್ಚ್ ಮತಗಟ್ಟೆಯಲ್ಲಿ ಕುಲ್ಲಚೆಟ್ಟಿ ಕುಟುಂಬಸ್ಥರ ೩೦ಕ್ಕೂ ಹೆಚ್ಚು ಸದಸ್ಯರು ಸಾಮೂಹಿಕವಾಗಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಪ್ರತಿಷ್ಠಾಪಿಸಿ ಮತಜಾಗೃತಿಯನ್ನು ಸಾರಿದರು. ಪೊನ್ನಂಪೇಟೆ ತಾಲೂಕಿನ ಮತಗಟ್ಟೆಗಳಲ್ಲಿ ತಮ್ಮ ಅಭ್ಯರ್ಥಿಯ ಮತ್ತು ಪಕ್ಷಕ್ಕೆ ಮತ ನೀಡುವಂತೆ ಕಾರ್ಯಕರ್ತರು ಮತದಾರರ ಒಲೈಕೆ ಮಾಡುತ್ತಿದ್ದರು.

ಸಾಕಷ್ಟು ಬೂತ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಷ್ಟೆ ಇದ್ದು, ಮತದಾರರನ್ನು ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರು. ಆದರೆ, ಜೆಡಿಎಸ್ ಮತ್ತು ಸರ್ವೋದಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಬೂತ್‌ಗಳಲ್ಲಿ ಕಾರ್ಯಕರ್ತರು ಕಂಡುಬರಲಿಲ್ಲ.

ಮಾತಿನ ಚಕಮಕಿ

ಅರುವತ್ತೊಕ್ಲು ಮತ್ತು ಗೋಣಿಕೊಪ್ಪ ಮಹಿಳಾ ಸಮಾಜ ಮತಗಟ್ಟೆಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆಯಿತು. ತಕ್ಷಣ ನೆರದ ಪೊಲೀಸರು ಘಟನೆಯನ್ನು ತಿಳಿಗೊಳಿಸುವಲ್ಲಿ ಸಫಲರಾದರು. ಉಳಿದಂತೆ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತ್ತು ಉತ್ಸಾಹದಿಂದ ಮತದಾನ ನಡೆಯಿತು.