ಮಡಿಕೇರಿ, ಮೇ ೪: ವಿಧಾನಸಭಾ ಚುನಾವಣೆಯ ದಿನ ಸಮೀಪಿಸಿರುವಂತೆ ರಾಜಕೀಯ ಚಟುವಟಿಕೆಗಳೂ ಬಿರುಸುಗೊಳ್ಳುತ್ತಿವೆ. ಈಗಾಗಲೇ ಚುನಾವಣೆಯ ಅಖಾಡ ಸಿದ್ಧಗೊಂಡಿದ್ದು, ಹಲವಾರು ಲೆಕ್ಕಾಚಾರಗಳ ನಡುವೆ ರಾಜಕೀಯ ಪಕ್ಷಗಳು-ಅಭ್ಯರ್ಥಿಗಳು ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಪ್ರಚಾರದ ಪೈಪೋಟಿ ಹೆಚ್ಚುತ್ತಿವೆ. ಪ್ರಬಲ ಅಭ್ಯರ್ಥಿಗಳ ನಡುವೆ ಸ್ಪರ್ಧಿಗಳಾಗಿ ಇರುವ ಇತರ ಅಭ್ಯರ್ಥಿಗಳು ಮತಬೇಟೆ ನಡೆಸುತ್ತಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ೧೫ ಅಭ್ಯರ್ಥಿಗಳು ಕಣದಲ್ಲಿದ್ದು, ವೀರಾಜಪೇಟೆಯಲ್ಲಿ ೯ ಮಂದಿ ಇವರಲ್ಲಿ ಯಾರ ಸ್ಪರ್ಧೆ ಯಾವ ಅಭ್ಯರ್ಥಿಗೆ ಮುಳುವಾಗಲಿದೆ. ಅಥವಾ ಪೂರಕವಾಗಲಿದೆ ಎಂಬ ಕುತೂಹಲ ಜನಸಾಮಾನ್ಯರಲ್ಲಿ ಎದುರಾಗಿದೆ. ಪ್ರಸ್ತುತ ಎಲ್ಲೆಲ್ಲೂ ಜನರಲ್ಲಿ ಇದೇ ದಿನನಿತ್ಯದ ಚರ್ಚೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಆಯಾ ಪಕ್ಷ-ಅಭ್ಯರ್ಥಿಗಳ ಬೆಂಬಲಿಗರು ವಾದ-ವಿವಾದಗಳ ಮೂಲಕ ತಮ್ಮ ತಮ್ಮ ನಿಲುವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಕೆಲವೊಮ್ಮೆ ವಿಕೋಪದತ್ತಲೂ ತೆರಳುತ್ತಿರುವ ಸನ್ನಿವೇಶದ ಬಗ್ಗೆ ಹಲವರು ಅಸಹ್ಯ ಪಡುವಂತಾಗಿದೆ.
ರಾಜಕೀಯ ತಿಕ್ಕಾಟಗಳು ಸಾಮರಸ್ಯ ಹಾಳುಗೆಡುವಂತೆ ಮಾಡುತ್ತಿರುವ ಬಗ್ಗೆ ಪ್ರಜ್ಞಾವಂತರು ವಿಷಾದವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳು, ಅವಹೇಳನಗಳ ಬಗ್ಗೆ ಚುನಾವಣಾಧಿಕಾರಿ ಗಳಿಗೆ, ಪೊಲೀಸರಿಗೆ ದೂರು ಸಲ್ಲಿಸಲ್ಪಡುತ್ತಿರುವ ಘಟನೆಗಳು ಕೊಡಗು ಜಿಲ್ಲೆಗೆ ಶೋಭೆತರುವಂತದ್ದಲ್ಲ ಎಂಬ ಅಭಿಪ್ರಾಯ ಹಲವರದ್ದಾಗಿದೆ. ಈ ಬೆಳವಣಿಗೆ ಒಂದೆಡೆಯಾದರೆ ಶತಾಯ-ಗತಾಯವಾಗಿ ತಮ್ಮ ಪಕ್ಷ-ಅಭ್ಯರ್ಥಿಗಳು ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಪಕ್ಷಗಳು ಜಾತಿ ಲೆಕ್ಕಾಚಾರ-ಸ್ವತಂತ್ರ ಅಭ್ಯರ್ಥಿಗಳ ಸ್ಪರ್ಧೆಯ ಲಾಭ-ನಷ್ಟಗಳ ಅವಲೋಕನದೊಂದಿಗೆ ಪ್ರಚಾರ ನಡೆಯನ್ನು ತ್ವರಿತಗೊಳಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳು, ಸಭೆ- ಸಮಾರಂಭ, ಕ್ರೀಡೋತ್ಸವ, ಸಂತೆ, ಚರ್ಚೆಗಳ ಹಾಟ್ಸ್ಪಾಟ್ ಎಂದೆನಿಸಿರುವ ‘ಬಾರ್’ಗಳಲ್ಲಿ ರಾಜಕೀಯದ್ದೇ ಕಲರವ... ಎಲ್ಲದಕ್ಕೂ ತಾ. ೧೩ ರ ತನಕ ಕಾಯಬೇಕಿದೆ.