ಸೋಮವಾರಪೇಟೆ, ಮೇ ೪: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಥರ್‌ಗೌಡ ಅವರ ಬಗ್ಗೆ ಬಿಜೆಪಿ ಯಾವುದೇ ಅಪಪ್ರಚಾರ ಮಾಡುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಸತ್ಯವನ್ನಷ್ಟೇ ಹೇಳುತ್ತಿದ್ದೇವೆ ಎಂದು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಮಂಥರ್‌ಗೌಡ ಅವರು ಕೊಡಗಿನಲ್ಲಿ ವೈದ್ಯಕೀಯ ಸೇವೆ ಮಾಡಿಲ್ಲ. ಆದರೆ ಶಾಸಕರ ಪುತ್ರ ಪ್ರತಿ ವರ್ಷ ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಒಂದು ತಿಂಗಳು ಉಚಿತ ಸೇವೆ ಸಲ್ಲಿಸುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿಯನ್ನು ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ತೇಜೋವಧೆ ಮಾಡಿಲ್ಲ. ಸತ್ಯವನ್ನಷ್ಟೆ ಹೇಳುತ್ತಿದ್ದಾರೆ. ಹೊರ ಜಿಲ್ಲೆಯಿಂದ ಬಂದಿರುವ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕೊಡಗಿನ ಸ್ವಾಭಿಮಾನಿ ಮತದಾರರು ಪಿಕ್ನಿಕ್ ಅಭ್ಯರ್ಥಿಗಳಿಗೆ ಮಣೆ ಹಾಕುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿದ್ದು, ಬಿಜೆಪಿ ಅಭ್ಯರ್ಥಿ ಮತ್ತು ಹಾಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ೩೦ ಸಾವಿರಕ್ಕೂ ಅಧಿಕ ಅಂತರದಿAದ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕು ಎಂದರು.
ಕೊಡಗಿನ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಇಲ್ಲಿನ ಶಾಲಾ ಕಾಲೇಜು, ವಿಶ್ವವಿದ್ಯಾಲಯದಲ್ಲಿ ಕಲಿಯಲು ಅರಕಲಗೂಡು ತಾಲೂಕಿನಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ, ಕಳೆದ ೨೫ ವರ್ಷಗಳಿಂದಲೂ ಅರಕಲಗೂಡು ಅಭಿವೃದ್ಧಿ ಹೊಂದಿಲ್ಲ. ಈಗ ಅಲ್ಲಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಕರೆಸಲಾಗಿದೆ. ಆದರೆ, ಜನರು ಸ್ಥಳೀಯರನ್ನೇ ಆಯ್ಕೆ ಮಾಡುತ್ತಾರೆ ಎಂದು ಅಭಿಪ್ರಾಯಿಸಿದರು. ಕಳೆದ ೨೫ ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರ ಹೆಚ್ಚಿನ ಅಭಿವೃದ್ಧಿಗೊಂಡಿದೆ. ಗ್ರಾಮೀಣ ಜನರು ಶಾಸಕ ಅಪ್ಪಚ್ಚು ರಂಜನ್ ಅವರ ಪರವಿದ್ದಾರೆ. ರಸ್ತೆ, ಮನೆಗಳು, ಹಕ್ಕುಪತ್ರ ಸೇರಿದಂತೆ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಕೊಡಲಾಗಿದೆ. ಈ ಬಾರಿಯೂ ಬಿಜೆಪಿ ಪರ ಮತದಾರರು ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದ ೨೦೩ ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರ ಬಲಿಷ್ಠ ಪಡೆಯಿದೆ. ಆದರೆ, ಬಹುತೇಕ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಕಾರ್ಯಕರ್ತರೆ ಇಲ್ಲ. ಈ ಬಾರೀ ಸೋಮವಾರಪೇಟೆ ತಾಲೂಕಿ ನಲ್ಲೂ ಮುನ್ನಡೆ ಸಾಧಿಸಲಿದ್ದೇವೆ ಎಂದು ಬಿಜೆಪಿ ಸೋಮವಾರಪೇಟೆ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಹೇಳಿದರು.
ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಕೋವಿಡ್ ಸಂದರ್ಭ ಶಾಸಕ ಅಪ್ಪಚ್ಚು ರಂಜನ್ ಮತ್ತು ಬಿಜೆಪಿ ಕಾರ್ಯಕರ್ತರು ದೊಡ್ಡಮಟ್ಟದ ಸೇವೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿಲ್ಲ. ಜನತೆ ಕಷ್ಟಕಾಲದಲ್ಲಿ ನೆರವಾದವರನ್ನು ಮರೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್, ತಾಲೂಕು ಕಾರ್ಯದರ್ಶಿ ಅಶೋಕ, ಪದಾಧಿಕಾರಿ ಶ್ರೀಕಾಂತ್ ಇದ್ದರು.