ಶನಿವಾರಸಂತೆ, ಮೇ ೨: ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಸರ್ದಾರ್ ಅಹಮ್ಮದ್ ತಮ್ಮ ಬೆಂಬಲಿಗರ ಜತೆ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.
ಸ್ಥಳೀಯ ರೆಸಾರ್ಟ್ನಲ್ಲಿ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ, ಜಿಲ್ಲಾ ವಕ್ತಾರ ಚಂದ್ರಮೌಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅನಂತ್ ಕುಮಾರ್, ಮುಖಂಡರಾದ ಲೋಕೇಶ್, ಸತೀಶ್ ಇತರ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜೆಡಿಎಸ್, ಬಿಜೆಪಿಯ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾದರು.
ಡಾ. ಮಂಥರ್ ಗೌಡ ಮಾತನಾಡಿ, ಜಿಲ್ಲೆಯ ಮತದಾರರು ಬದಲಾವಣೆ ಬಯಸಿ ಮನ್ವಂತರದ ನಿರೀಕ್ಷೆಯಲ್ಲಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಿತ್ತಾಟದಲ್ಲಿ ಬಿಜೆಪಿಗೆ ಜಯ ಸಿಗುತ್ತಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತದಾರರೇ ಬದಲಾವಣೆ ಬಯಸಿದ್ದಾರೆ ಎಂದರು.
ಜಿಲ್ಲಾ ವಕ್ತಾರ ಹೆಚ್.ಎಸ್. ಚಂದ್ರಮೌಳಿ ಮಾತನಾಡಿ, ರಾಜಕೀಯ ನಿಂತ ನೀರಲ್ಲ. ಹೊಸ ನೀರು ಬಂದಾಗ ಹಳೇ ನೀರು ಕೊಚ್ಚಿಹೋಗುವಂತೆ ಹೊಸಮುಖಕ್ಕೆ ಆದ್ಯತೆ ನೀಡಲಾಗಿದೆ. ಮಂಥರ್ ಗೌಡ ಅವರ ಆಗಮನ ಚುಂಬಕಶಕ್ತಿಯAತೆ ಕೊಡಗಿಗೆ ಬಂದಿದ್ದು ಕಾಂಗ್ರೆಸ್ಸಿನ ರೋಗಗ್ರಸ್ಥ ಮನಸ್ಸುಗಳಿಗೆ ದಿವ್ಯೌಷಧ ಆಗಲಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಹಾಗೂ ಮಾಜಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಅಭ್ಯರ್ಥಿ ಗೆಲುವಿನ ಹಾದಿ ಸುಗಮವಾಗಿದ್ದು, ಕಾರ್ಯಕರ್ತರು ಮನಪೂರ್ವಕವಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಸ್. ಅನಂತ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫರ್ಜಾನಾ ಹಾಗೂ ಇತರರು ಇದ್ದರು.