ಮಡಿಕೇರಿ, ಮೇ. ೨: ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ ೨ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ವಿತ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರಕಾರ ಜನರಿಂದ ರೂಪಿತವಾದ ಸರಕಾರವಲ್ಲ. ಶಾಸಕರನ್ನು ಖರೀದಿಸಿ ವಾಮಮಾರ್ಗದಲ್ಲಿ ರಚಿಸಿದ ಸರಕಾರವಾಗಿದೆ. ಸರಕಾರ ರೂಪುಗೊಂಡ ಬಳಿಕ ನೀಡಿದ ಯಾವುದೇ ಒಂದು ಭರವಸೆಯೂ ಇದುವರೆಗೆ ಈಡೇರಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಎಲ್ಲಾ ವಲಯಗಳನ್ನು ಬಿಜೆಪಿ ನಿರ್ಲಕ್ಷಿಸಿದೆ. ಬಿಜೆಪಿ ಡಬಲ್ ಎಂಜಿನ್ ಸರಕಾರವಲ್ಲ, ಡಬಲ್ ದೋಖಾ ಸರಕಾರ ಎಂದು ಕಿಡಿಕಾರಿದರು. ಕೊಡಗಿನ ವೈಭವವನ್ನು ಪುನರ್‌ಸ್ಥಾಪಿಸಲು ಕಾಂಗ್ರೆಸ್‌ನ ಅನಿವಾರ್ಯತೆ ಇದೆ. ೨ ಕಡೆಗಳಲ್ಲಿ ಕಾಂಗ್ರೆಸ್‌ನ ಉತ್ತಮ ಹಾಗೂ ವಿದ್ಯಾವಂತ ಅಭ್ಯರ್ಥಿಗಳನ್ನು ಜನರು ಆಶೀರ್ವಾದಿಸಲಿದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ)

ಬಿಜೆಪಿ ವಿರುದ್ಧ ವಾಗ್ದಾಳಿ

‘ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಬಿಜೆಪಿ ಮಹಿಳೆಯರ ಸುರಕ್ಷತೆಗೆ ಕ್ರಮವಹಿಸಿಲ್ಲ. ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಸುಳ್ಳಾಗಿದೆ. ಕಾಂಗ್ರೆಸ್‌ನ ಉಚಿತ ಕೊಡುಗೆಗಳ ಬಗ್ಗೆ ಟೀಕಿಸುತ್ತಿದ್ದ ಬಿಜೆಪಿ ಇದೀಗ ತನ್ನ ಪ್ರಣಾಳಿಕೆಯಲ್ಲಿ ಉಚಿತ ಭಾಗ್ಯ ನೀಡಿದೆ. ಯಾವುದೇ ರೀತಿಯ ಜನಪರ ಯೋಜನೆಯನ್ನು ಬಿಜೆಪಿ ಸರಕಾರ ಅನುಷ್ಠಾನಗೊಳಿಸಿಲ್ಲ. ಕಾಂಗ್ರೆಸ್ ಸರಕಾರದ ಯೋಜನೆಯ ಹೆಸರನ್ನು ಬದಲಾಯಿಸಿ ತನ್ನ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಇದು ರಾಜಕೀಯ ದಿವಾಳಿತನವಾಗಿದೆ ಎಂದು ಟೀಕಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಂಯೋಜಕ ಟಿ.ಪಿ. ರಮೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಹಾಜರಿದ್ದರು.