ಮಡಿಕೇರಿ, ಮೇ ೨: ಸಮಯದ ಅಭಾವದ ನಡುವೆಯೂ ಕ್ಷೇತ್ರದಲ್ಲಿ ಪೂರಕ ಸ್ಪಂದನ ಸಿಗುತ್ತಿದೆ. ಪ್ರಜ್ಞಾವಂತ ಮತದಾರರು ಜೆಡಿಎಸ್ ಪರವಾಗಿದ್ದು, ತಮಗೆ ಬೆಂಬಲ ನೀಡುತ್ತಿರುವುದಾಗಿ ವೀರಾಜಪೇಟೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಎಂ.ಎ. ಮನ್ಸೂರ್ ಆಲಿ ಅವರು ಹೇಳಿದರು.

‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ನಡುವೆ ಪ್ರಬಲ ಸ್ಪರ್ಧೆ ಎದುರಾಗಿದ್ದು, ಜೆಡಿಎಸ್ ಅಭ್ಯರ್ಥಿಯಾಗಿರುವ ತಾವು ಪಡೆಯುವ ಮತ ನಿರ್ಣಾಯಕವಾಗಲಿದೆ. ತಾವು ಕೊನೆಯ ಕ್ಷಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದು, ಪ್ರಚಾರ ಹಾಗೂ ಜನರನ್ನು ಸಂದಿಸಲು ಸಮಯದ ಅಭಾವವಿದೆ. ಆದರೆ, ಕಾರ್ಯಕರ್ತರು ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದು, ಜೆಡಿಎಸ್ ಕಳೆದ ಬಾರಿಗಿಂತಲೂ ಹೆಚ್ಚಿನ ಮತ ಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ಕೆಲಸ ಕಾರ್ಯಗಳಿಗೆ ಜನರು ಬೆಂಬಲ ನೀಡುತ್ತಾರೆ. ರಾಜ್ಯದಲ್ಲಿಯೂ ಈ ಬಾರಿ ಜೆಡಿಎಸ್ ನಿರ್ಣಾಯಕವಾಗಲಿದ್ದು, ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಹೇಳಿದರು. ಜೆಡಿಎಸ್‌ನಲ್ಲಿದ್ದ ಸಂಕೇತ್ ಪೂವಯ್ಯ ಅವರು ಪಕ್ಷ ತ್ಯಜಿಸಿದ್ದರೂ ಕಾರ್ಯಕರ್ತರು ಬದಲಾಗಿಲ್ಲ. ಕೆಲವು ಮುಖಂಡರು ಮಾತ್ರ ಸಂಕೇತ್ ಅವರೊಂದಿಗೆ ಪಕ್ಷ ಬಿಟ್ಟಿದ್ದು, ಇದು ಪಕ್ಷಕ್ಕೆ ಧಕ್ಕೆಯಾಗದು ಎಂದ ಮನ್ಸೂರ್ ಆಲಿ ಅವರು ಸದ್ಯದಲ್ಲಿ ಕೆಲವು ನಾಯಕರು ಪ್ರಚಾರಕ್ಕೆ ಬರಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದೆ ಎಂದರು.

ವೀರಾಜಪೇಟೆ ಕ್ಷೇತ್ರಕ್ಕೆ ಜೆಡಿಎಸ್ ಸ್ಪರ್ಧಿಸುವುದಿಲ್ಲ ಎಂಬ ಮಾತಿತ್ತು. ಆದರೆ, ತಮ್ಮ ಪಕ್ಷ ನಿಷ್ಠೆ ಪರಿಗಣಿಸಿ ನಾಯಕರು ಅಲ್ಪಸಂಖ್ಯಾತರಾಗಿರುವ ತಮಗೆ ಈ ಬಾರಿ ಅವಕಾಶ ನೀಡಿದ್ದಾರೆ. ರಾಷ್ಟಿçÃಯ ಪಕ್ಷಗಳ ನಡುವೆ ಇದೀಗ ತಾವೂ ಸ್ಪರ್ಧೆಯಲ್ಲಿ ಪ್ರಮುಖರಾಗಿರುವುದಾಗಿ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆದಿಲ್ಲ ಎಂಬ ಅಸಮಾಧಾನ ಜನರಲ್ಲಿದೆ. ಈ ಬಾರಿ ಬದಲಾವಣೆ ಬಯಸಿರುವುದು ಕ್ಷೇತ್ರದಲ್ಲಿ ಅನುಭವವಾಗುತ್ತಿರುವುದಾಗಿ ಹೇಳಿದ ಅವರು, ಸೋಲು - ಗೆಲುವು ಬೇರೆ ವಿಚಾರ ಆದರೆ, ತಾವು ಕ್ಷೇತ್ರದ ಜನರು ಹಾಗೂ ಕುಮಾರಸ್ವಾಮಿ ಅವರ ನಡುವೆ ಸೇತುವೆಯಾಗಿ ಸ್ಪಂದಿಸಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ. ರಾಜ್ಯದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರಾಷ್ಟಿçÃಯ ಪಕ್ಷಗಳು ಅವರವರ ಪರ ಮತಯಾಚಿಸಲಿ ಆದರೆ, ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತಿರುವುದನ್ನು ಆಕ್ಷೇಪಿಸುವುದಾಗಿ ಅವರು ಹೇಳಿದರು.