ಚೆಯ್ಯಂಡಾಣೆ, ಮೇ ೨: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ (ಜೆಡಿಎಸ್ )ಅಭ್ಯರ್ಥಿ ಎಂ.ಎ. ಮನ್ಸೂರ್ ಅಲಿ ನಾಪೋಕ್ಲುವಿನಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.

ಸೋಮವಾರ ಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಯಿಂದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ನೇತೃತ್ವದಲ್ಲಿ ಜೆಡಿಎಸ್ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆಗಳೊಂದಿಗೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಪಟ್ಟಣದ ಅಂಗಡಿ ಮುಂಗಟ್ಟುಗಳಿಗೆ ತೆರಳಿ ವರ್ತಕರಲ್ಲಿ ಹಾಗೂ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಮಾತನಾಡಿ ೨೦೧೮ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಕೊಡಗಿನ ಜನರು ಮನೆ ಮಠಗಳನ್ನು ಕಳೆದು ಸಂಕಷ್ಟಕ್ಕೆ ಸಿಲುಕಿದ ಸಂದರ್ಭ ಕುಮಾರಸ್ವಾಮಿ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿ ಜನರ ಕಣ್ಣೀರನ್ನು ಒರೆಸುವಂತೆ ಮಾಡಿದ್ದಾರೆ. ಜಿಲ್ಲೆಯ ಜಂಬೂರು, ಗಾಳಿಬೀಡುವಿನಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಮನೆಗಳನ್ನು ನಿರ್ಮಿಸುವ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಅದರಂತೆ ಪರಿಹಾರವನ್ನು ನೀಡಿದ್ದಾರೆ. ಇದನ್ನು ಕೊಡಗಿನ ಜನರು ಮರೆಯಲು ಸಾಧ್ಯವಿಲ್ಲ ಎಂದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಈ ಹಿಂದೆ ಕಾಂಗ್ರೆಸ್ ಪಕ್ಷದ ೧೭ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ, ಅದರಂತೆ ಬಿಜೆಪಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಭ್ರಷ್ಟಾಚಾರ ಮತ್ತು ೪೦ ಪರ್ಸೆಂಟ್ ಕಮಿಷನ್ ಪಡೆದು ಸರ್ಕಾರ ನಡೆಸಿದ್ದಾರೆ ಎಂದು ಗಣೇಶ್ ಟೀಕಿಸಿದರು.

ವೀರಾಜಪೇಟೆ ನಗರ ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯ ಹಾಗೂ ನಮ್ಮ ಜಿಲ್ಲೆಗೆ ಹಲವಾರು ಜನಪರ ಕೆಲಸಗಳನ್ನು ಮಾಡಿದ್ದಾರೆ.ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಯನ್ನು ಯಾವುದೇ ನಿಬಂಧನೆಗಳಿಲ್ಲದೆ ಜಾರಿಗೆ ತರಲಿದೆ ಎಂದರು.

ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ಇಸಾಕ್ ಖಾನ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಜಾಶಿರ್ ಮೂರ್ನಾಡು, ಜಿಲ್ಲಾ ಕಾರ್ಯದರ್ಶಿ ಮೋಹನ್ ಮೌರ್ಯ, ಮಡಿಕೇರಿ ನಗರಸಭಾ ಸದಸ್ಯ ಮುಸ್ತಫ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್, ಜೆಡಿಎಸ್ ಮುಖಂಡರುಗಳು ಇದ್ದರು. -ಅಶ್ರಫ್