ಸಿದ್ದಾಪುರ, ಏ. ೨೭: ವೀರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಮಿತಿಮೀರಿದ್ದು ಜಿಲ್ಲಾಡಳಿತ ಮಧ್ಯಪ್ರವೇಶಿಸುವಂತೆ ಸಿಪಿಎಂ ಪಕ್ಷ ಆಗ್ರಹಿಸಿದೆ.
ಪಕ್ಷದ ಗ್ರಾಮ ಸಮಿತಿ ಸಂಚಾಲಕ ಎನ್.ಡಿ ಕುಟ್ಟಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ದಾಪುರ ಬಸ್ ನಿಲ್ದಾಣ, ಶಾಲಾ ಮುಂಭಾಗ, ಸರಕಾರಿ ಆಸ್ಪತ್ರೆಯ ಸಮೀಪ, ಮಸೀದಿ ದೇವಸ್ಥಾನಗಳ ಪಕ್ಕದಲ್ಲಿ ಬೇಕಾಬಿಟ್ಟಿ ತ್ಯಾಜ್ಯವನ್ನು ಸುರಿಯಲಾಗಿದೆ. ಸಾರ್ವಜನಿಕರು ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆAದು ಆರೋಪಿಸಿದ ಅವರು, ಇದೀಗ ತ್ಯಾಜ್ಯಗಳಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದರು.
ಪಕ್ಷದ ನಗರ ಸಮಿತಿ ಸದಸ್ಯ ರೆಹ್ಮಾನ್ ಮಾತನಾಡಿ, ತ್ಯಾಜ್ಯ ವಿಲೇವಾರಿಗೆ ಮುಂದಾಗದಿದ್ದರೆ ಚುನಾವಣೆಯ ಬಳಿಕ ಸಾರ್ವಜನಿಕರನ್ನು ಒಗ್ಗೂಡಿಸಿ ಗ್ರಾಮ ಪಂಚಾಯಿತಿ ಎದುರು ಆಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಗರ ಸಮಿತಿ ಸದಸ್ಯ ಏಳುಮಲೈ ಇದ್ದರು.