ಮಡಿಕೇರಿ, ಏ. ೨೭: ಬಿಸಿಲ ಬೇಗೆಯಿಂದ ಪರಿತಪಿಸುವಂತಾಗಿದ್ದ ಜಿಲ್ಲಾ ಕೇಂದ್ರ ಮಡಿಕೇರಿಗೆ ಇಂದು ಸಂಜೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಮೂಲಕ ಜನರಲ್ಲಿ ಒಂದಷ್ಟು ಸಂತಸ ಮೂಡಿತು. ಕಳೆದ ಜನವರಿಯ ಆರಂಭದಲ್ಲಿ ಅನಿರೀಕ್ಷಿತವಾಗಿ ಸುರಿದ ಮಳೆಯ ನಂತರ ಈ ತನಕವೂ ನಗರಕ್ಕೆ ಮಳೆಯಾಗಿರಲಿಲ್ಲ. ದಿನೇ ದಿನೇ ಬಿಸಿಲ ಧಗೆ ಹೆಚ್ಚುತ್ತಿದ್ದರಿಂದ ಜನರು ಕಂಗಾಲಾಗುವAತಾಗಿತ್ತು.

ಕಳೆದ ಒಂದೆರಡು ದಿನಗಳಿಂದ ನಗರದ ಹೊರವಲಯಕ್ಕೆ ತುಂತುರು ಮಳೆಯಾಗಿತ್ತಾದರೂ, ನಗರಕ್ಕೆ ಮಾತ್ರ ಮಳೆಯ ಸಿಂಚನವಾಗಿರಲಿಲ್ಲ. ಇಂದು ಸಂಜೆ ಸುಮಾರು ೧೫ ರಿಂದ ೨೦ ಸೆಂಟ್‌ನಷ್ಟು ಮಳೆ ಸುರಿಯಿತು. ಅಪರೂಪಕ್ಕೆ ಬಿದ್ದ ಮಳೆ ಆಶಾದಾಯಕವಾಗಿದ್ದು, ನಗರಕ್ಕೆ ಒಂದಷ್ಟು ತಂಪು ಮೂಡಿಸಿತು.