ಪೊನ್ನಂಪೇಟೆ, ಏ. ೨೭: ಪೊನ್ನಂಪೇಟೆ ಸಮೀಪದ ಮುಗುಟಗೇರಿ ಗ್ರಾಮದ ಶ್ರೀ ಕುಟ್ಟಿಚಾತ ದೇವರ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ಈ ಸಂದರ್ಭ ವಾರ್ಷಿಕೋತ್ಸವ ಪ್ರಯುಕ್ತ ದೇವತೆರೆ, ಕಲ್ಲಚಾವುಂಡಿ ತೆರೆ, ಕುಳಿಯ ತೆರೆ, ನುಚ್ಚುಟ್ಟ ತೆರೆ ಚಾಮುಂಡಿ ತೆರೆ, ಕುಟ್ಟಿಚಾತ ತೆರೆ ನಡೆಯಿತು. ಶ್ರೀ ಕುಟ್ಟಿಚಾತ ಸನ್ನಿಧಿಯ ಆರ್ಚಕರಾದ ಲೋಕೇಶ್ ಮತ್ತು ಗಣೇಶ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ದೈವಕಾರ್ಯದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭ ಗ್ರಾಮದ ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ ಅವರು ಮಾತನಾಡಿ, ಸುಮಾರು ೪೦೦ ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಕುಟ್ಟಿಚಾತ ಸನ್ನಿಧಿಯಲ್ಲಿ ಕಳೆದ ೬೦ ವರ್ಷಗಳಿಂದ ಯಾವುದೋ ಕಾರಣದಿಂದ ಪೂಜೆ ಪುನಸ್ಕಾರಗಳು ಸ್ಥಗಿತಗೊಂಡಿದ್ದವು. ಬಳಿಕ ತಂತ್ರಿಗಳ ಪ್ರಶ್ನೆಯ ಅನುಸಾರ ಕಳೆದ ೫ ವರ್ಷಗಳಿಂದ ಗ್ರಾಮಸ್ಥರೆಲ್ಲಾ ಒಂದುಗೂಡಿ ಕುಟ್ಟಿಚಾತ ಸನ್ನಿಧಿಯಲ್ಲಿ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ದೇವಸ್ಥಾನ ಸಮಿತಿಯ ಆಡಳಿತ ಮಂಡಳಿ ಅಧ್ಯಕ್ಷ ಪೂವಯ್ಯ, ಕಾರ್ಯದರ್ಶಿ ಬಿಪಿನ್, ಖಜಾಂಚಿ ಸುಬ್ರಮಣಿ, ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.