ಮಡಿಕೇರಿ, ಏ. ೨೭: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕೊಡಗು ಜಿಲ್ಲಾಸ್ಪತ್ರೆ, ಮತ್ತು ರೋಟರಿ ಕ್ಲಬ್ ವೀರಾಜಪೇಟೆ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ, ರೆಡ್‌ಕ್ರಾಸ್ ಮತ್ತು ರೆಡ್ ರಿಬ್ಬನ್ ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವನ್ನು ರೋಟರಿ ಅಧ್ಯಕ್ಷ ಹರಿಶಂಕರ್ ಪ್ರಸಾದ್ ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ರಕ್ತದಾನದ ಮಹತ್ವವನ್ನು ಕುರಿತು ಹಾಗೂ ರೆಡ್‌ಕ್ರಾಸ್ ಸಂಸ್ಥೆಯು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿರುವ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.

ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಡಾ. ಕರುಂಬಯ್ಯ ಅವರು ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಅಧಿಕವಾಗಿದ್ದು, ರಕ್ತದ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ರಕ್ತದಾನ ಮಾಡಿದರು.

ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ನಾಗರಾಜಮೂರ್ತಿ ಪಿ.ಎನ್. ಅವರು ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಯುವ ರೆಡ್‌ಕ್ರಾಸ್ ಅಧ್ಯಕ್ಷ ಧನಂಜಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಘಟಕದ ಸಂಚಾಲಕ ಮಂಜುನಾಥ ಆರ್. ಮತ್ತು ರೆಡ್‌ರಿಬ್ಬನ್ ಘಟಕದ ಸಂಚಾಲಕಿ ದಿವ್ಯ ಎಂ.ಬಿ. ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು ೬೫ ವಿದ್ಯಾರ್ಥಿಗಳು ೧೨ ಬೋಧಕ-ಬೋಧಕೇತರರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.