ಕುಶಾಲನಗರ, ಏ.೨೪: ಶಾಸಕ ಅಪ್ಪಚ್ಚುರಂಜನ್ ಅವರು ಮತದಾರರ ಪ್ರೀತಿ, ವಿಶ್ವಾಸವನ್ನು ಗೆಲ್ಲುವಲ್ಲಿ ವಿಫಲರಾಗಿದ್ದು, ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ ಎಂದು ಅಭ್ಯರ್ಥಿ ಡಾ.ಮಂಥರ್ ಗೌಡ ಹೇಳಿದರು.
ಸಮೀಪದ ತೊರೆನೂರು ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಪಾಲ್ಗೊಂಡು ಅವರು ಮಾತನಾಡಿದರು. ಮತದಾರರು ದಡ್ಡರಲ್ಲ ಬುದ್ಧಿವಂತರು, ಪ್ರಜ್ಞಾವಂತರು. ಈ ಬಾರಿ ಬದಲಾವಣೆ ಬಯಸಿದ್ದು, ವಿದ್ಯಾವಂತ ಯುವಕನ ಪರ ಮತ ಚಲಾಯಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.
ಐದು ಬಾರಿ ಶಾಸಕರಾಗಿ ಆಯ್ಕೆಯಾದರೂ ತೊರೆನೂರು ಗ್ರಾಮಕ್ಕೆ ಯಾವುದೇ ಶಾಶ್ವತ ಯೋಜನೆ ರೂಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಕಳೆದ ಇಪ್ಪತ್ತೆöÊದು ವರ್ಷ ನೀವು ಅಪ್ಪಚ್ಚುರಂಜನ್ ಅವರಿಗೆ ಶಾಸಕರಾಗಿ ಆಯ್ಕೆಯಾಗಲು ಆಶೀರ್ವಾದ ಮಾಡಿದ್ದೀರಿ. ಆದರೆ ಇಷ್ಟು ವರ್ಷ ರಸ್ತೆಗೆ ಡಾಂಬರು ಹಾಕಿಸಲು ಸಾಧ್ಯವಾಗದೆ ಚುನಾವಣೆ ಹತ್ತಿರ ಬಂದಾಗ ಡಾಂಬರು ಹಾಕಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಲ್ಲಾ ಕಾಮಗಾರಿಗಳಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೀವನ ಕಷ್ಟಕರವಾಗಿದೆ.ಈ ಹಿನ್ನೆಲೆಯಲ್ಲಿ ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಮುಂದಿನ ಸರ್ಕಾರ ಕಾಂಗ್ರೆಸ್ ಸರ್ಕಾರ, ನಾಯಕರು ಜನತೆಗೆ ನೀಡಿದ ವಾಗ್ದಾನ ತಿಂಗಳಿಗೆ ೨೦೦ಯೂನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ, ಮಾಸಿಕ ೨ ಸಾವಿರ ರೂಪಾಯಿಯ ಗೃಹಲಕ್ಷಿö್ಮ, ಈಗಾಗಲೇ ಸಿದ್ದರಾಮಯ್ಯನವರ ಅನ್ನಭಾಗ್ಯ ಸೇರಿ ರಾಜ್ಯದ ಪ್ರತಿ ಕುಟುಂಬಕ್ಕೂ ವಾರ್ಷಿಕ ೫೦ ಸಾವಿರ ರೂಪಾಯಿ ಮೌಲ್ಯದ ಕಾಂಗ್ರೆಸ್ ಕೊಡುಗೆ ಕೈಸೇರಲಿದೆ, ಜನತೆಗೆ ಕಾಂಗ್ರೆಸ್ ಪಕ್ಷವೇ ಅನಿವಾರ್ಯ ಮತ್ತು ಅಗತ್ಯ ಎಂದು ಮನವರಿಕೆ ಆಗಿದೆ, ಜನರೇ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂದರು.
ಎಪಿಸಿಎAಎಸ್ಸಿ ಮಾಜಿ ಉಪಾಧ್ಯಕ್ಷ ಟಿ.ಬಿ. ಜಗದೀಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಪ್ರಗತಿಪರ ರೈತ ಶಾಂತಪ್ಪ ನೇತೃತ್ವದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಮಂಥರ್ ಗೌಡ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭ ಕೆಪಿಸಿಸಿ ಸದಸ್ಯರಾದ ನಂಟೇಶ್ ಗೌಡ, ಚುನಾವಣಾ ಉಸ್ತುವಾರಿ ಮಂಜುನಾಥ್ ಗುಂಡೂರಾವ್, ಡಿಸಿಸಿ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ಹಾಗೂ ಇತರರು ಇದ್ದರು. ಮೊದಲಿಗೆ ಡಾ.ಮಂಥರ್ ಗೌಡ ಅವರು ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.