ಸೋಮವಾರಪೇಟೆ, ಏ. ೨೪ : ಕೊಡಗಿನಲ್ಲಿ ಸಂಭವಿಸಿದ ಭೂ ಪ್ರಳಯ, ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಸ್ಪಂದಿಸಿ, ಕಷ್ಟಗಳಿಗೆ ನೆರವಾದ ಜನ ಸೇವಕನನ್ನು ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿಸಿ ಎಂದ ಶಾಸಕ ಅಪ್ಪಚ್ಚು ರಂಜನ್, ಬೆಂಗಳೂರಿನಲ್ಲಿ ನೆಲೆಸಿರುವ ‘ಪಿಕ್ನಿಕ್ ಅಭ್ಯರ್ಥಿ’ಗಳನ್ನು ದೂರವಿಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಟ್ಟಣದ ಜೇಸೀ ವೇದಿಕೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಭೂ ಪ್ರಳಯ ಹಾಗೂ ಕೊರೊನಾ ಸಂದರ್ಭ ಜೀವದ ಹಂಗು ತೊರೆದು ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ. ರಾಜಕೀಯ ಜೀವನದಲ್ಲಿ ವ್ಯಕ್ತಿಗತವಾಗಿ ಹಾಗೂ ಪಕ್ಷಕ್ಕೆ ಒಂದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸಾಮಾಜಿಕ ಸೇವೆ ಮಾಡಿದ್ದೇನೆ. ಪಿಪಿಇ ಕಿಟ್ ಧರಿಸಿ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಚಿಕಿತ್ಸಾ ಗುಣಮಟ್ಟವನ್ನು ಸುಧಾರಿಸಿದ್ದೇನೆ. ಈ ಬಾರಿಯ ಚುನಾವಣೆಯಲ್ಲಿ ಜನೋಪಯೋಗಿ ಶಾಸಕರ ಆಯ್ಕೆಗಾಗಿ ಬಿಜೆಪಿ ಬೆಂಬಲಿಸಿ ಎಂದರು.
ಕೇAದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು, ಬಡವರು ಸೇರಿದಂತೆ ಎಲ್ಲಾ ವರ್ಗದ ಮಂದಿಗೂ ನೆರವು ನೀಡಿದೆ. ಕೊಡಗಿನ ಕೃಷಿಕರ ೧೦ ಹೆಚ್‌ಪಿವರೆಗಿನ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌ನ್ನು ಬಿಜೆಪಿ ಸರ್ಕಾರದಿಂದ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ವನ್ಯಪ್ರಾಣಿ ಹಾವಳಿಯಿಂದ ಪ್ರಾಣಹಾನಿಯಾದರೆ ಪರಿಹಾರ ಮೊತ್ತವನ್ನು ೧೫ಲಕ್ಷಕ್ಕೆ ಏರಿಸಿದ್ದೇವೆ. ಇದರೊಂದಿಗೆ ಕಾಡಾನೆ ಹಾವಳಿ ತಡೆಗೆ ೧೦೦ ಕೋಟಿ ವೆಚ್ಚದಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸುತ್ತಿದ್ದೇವೆ ಎಂದರು.
ಸೋಮವಾರಪೇಟೆ ತಾಲೂಕೊಂದರಲ್ಲಿಯೇ ಅಕ್ರಮ ಸಕ್ರಮ ಯೋಜನೆಯಡಿ ೧೨ ಸಾವಿರ ರೈತರಿಗೆ ಹಕ್ಕುಪತ್ರ ನೀಡಲಾಗಿದೆ. ಬಡ ಕೂಲಿ ಕಾರ್ಮಿಕರಿಗೆ ೯೪ ಸಿ ಮತ್ತು ೯೪ ಸಿಸಿ ಅಡಿಯಲ್ಲಿ ೬೦೦೦ಕ್ಕೂ ಅಧಿಕ ಮಂದಿಗೆ ಪಟ್ಟೆ ನೀಡಲಾಗಿದೆ. ಅರಣ್ಯ ಹಕ್ಕು ಸಮಿತಿ ಯೋಜನೆಯಡಿ ಬಜೆಗುಂಡಿಯಲ್ಲಿ ೩೯೫, ನಂಜರಾಯಪಟ್ಟಣದಲ್ಲಿ ೫೦೦ ಮಂದಿಗೆ ಹಕ್ಕುಪತ್ರ ನೀಡಲಾಗಿದೆ. ಇದರೊಂದಿಗೆ ಕಿಬ್ಬೆಟ್ಟ, ತಣ್ಣೀರುಹಳ್ಳ, ಎಳನೀರುಗುಂಡಿ, ಕಾಜೂರು, ಯಡವಾರೆಯಲ್ಲಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ರಂಜನ್ ಹೇಳಿದರು.
ಯಡವಾರೆ, ಐಗೂರು ಭಾಗದಲ್ಲಿ ಬಡ ಮಂದಿಗೆ ಹಕ್ಕುಪತ್ರ ನೀಡದಂತೆ ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತಡೆಯೊಡ್ಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿ ಬಡವರಿಗೆ ಹಕ್ಕುಪತ್ರ ನೀಡುತ್ತೇನೆ ಎಂದರು. ಬಿಜೆಪಿ ಸರ್ಕಾರದಿಂದ ಮಳೆಹಾನಿ ಪರಿಹಾರದಲ್ಲಿ ೪೦,೭೫೭ ರೈತ ಕುಟುಂಬಗಳಿಗೆ ೧೦ ರಿಂದ ೫೬ ಸಾವಿರದವರೆಗೆ ೧೩೮ ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ. ಇದರೊಂದಿಗೆ ಕೃಷಿಕ ಸಮ್ಮಾನ್ ನಿಧಿಯಡಿ ವಾರ್ಷಿಕ ೧೦ ಸಾವಿರ ಹಣ ನೀಡಲಾಗುತ್ತಿದೆ. ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ ಎಂದು ಪಟ್ಟಿ ನೀಡಿದ ಅವರು, ಜನತೆಯ ಕೈಗೆ ಸಿಗುವ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ದೇಶದ ರಕ್ಷಣೆ, ಜನತೆಯ ಸಂಕಷ್ಟಗಳಿಗೆ ಸ್ಪಂದಿಸಲು ಕಟಿಬದ್ಧವಾಗಿರುವ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು. ಕೊಡಗಿನ ಸ್ವಾಭಿಮಾನ, ಘನತೆ, ಗೌರವಕ್ಕಾಗಿ ಅಪ್ಪಚ್ಚುರಂಜನ್ ಅವರೇ ಸೂಕ್ತ ಆಯ್ಕೆ ಎಂದರು. ಹಗಲು ಕೊಡಗಿನಲ್ಲಿ ಕಾಂಗ್ರೆಸ್ ಎಂದು ಓಡಾಡಿ ರಾತ್ರಿ ಅರಕಲಗೂಡಿನಲ್ಲಿ ಜೆಡಿಎಸ್‌ಗೆ ದುಡಿಯುವವರ ಬಗ್ಗೆ ಎಚ್ಚರಿಕೆಯಿರಲಿ. ಸೂಟ್‌ಕೇಸ್-ಟಿಕೇಟ್ ಸಂಸ್ಕೃತಿಗೆ ತಕ್ಕ ಪಾಠ ಕಲಿಸಬೇಕೆಂದರು.
ಬಸವಾಪಟ್ಟಣ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಸಾಮರಸ್ಯ ಹಾಗೂ ದೇಶ ವಿಶ್ವಗುರು ಆಗುವ ದಿಸೆಯಲ್ಲಿ ಪ್ರಧಾನಿ ಮೋದಿ ಕೆಲಸ ಮಾಡುತ್ತಿದ್ದಾರೆ. ಭಯಮುಕ್ತ ಸಮಾಜ ನಿರ್ಮಾಣಕ್ಕೆ ಬಿಜೆಪಿಗೆ ಅಧಿಕಾರ ನೀಡಬೇಕು. ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಈ ಬಾರಿ ಅಪ್ಪಚ್ಚುರಂಜನ್ ಗೆಲುವು ಸಾಧಿಸಿ ಮಂತ್ರಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಪ್ರಮುಖರಾದ ವಿ.ಕೆ. ಲೋಕೇಶ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ಚಂದ್ರಮೌಳಿ, ಜೀವಿಜಯ ಅವರಂತಹ ನಾಯಕರಿದ್ದರೂ ಹೊರ ಜಿಲ್ಲೆಯ ವ್ಯಕ್ತಿಗೆ ಟಿಕೆಟ್ ನೀಡುವ ಮೂಲಕ ಕೊಡಗಿನ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಲಾಗಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ, ಮತಾಂತರ ತಡೆ ಕಾಯ್ದೆ ರದ್ದುಪಡಿಸುವುದು ಹಾಗೂ ಟಿಪ್ಪು ಜಯಂತಿ ಆಚರಿಸುವ ಬಗ್ಗೆ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಸ್ವಾಭಿಮಾನಿ ಸಮಾಜ ಕಾಂಗ್ರೆಸ್‌ನ್ನು ತಿರಸ್ಕರಿಸಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಬಿಜೆಪಿ ಮಾಜೀ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಮುಖಂಡರುಗಳಾದ ಅಭಿಮನ್ಯುಕುಮಾರ್, ವಿ.ಎಂ. ವಿಜಯ, ಹೆಚ್.ಕೆ. ಮಾದಪ್ಪ, ಲೋಕೇಶ್ವರಿ ಗೋಪಾಲ್, ಬಿ.ಶಿವಪ್ಪ, ಮೋಹನ್‌ದಾಸ್, ಹೆಚ್.ಸಿ. ರಾಮಕೃಷ್ಣ, ರೂಪಾ ಸತೀಶ್, ಕುಂದಳ್ಳಿ ದಿನೇಶ್, ಮಂಜುಳಾ ಸುಬ್ರಮಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.