ಮಡಿಕೇರಿ, ಏ. ೨೨: ಕೊಡಗು ಜಿಲ್ಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವೈವಿಧ್ಯಮಯ ಕಾರ್ಯಕ್ರಮ ಗಳನ್ನು ರೂಪಿಸುತ್ತಾ ಬಂದಿದೆ. ಸ್ವೀಪ್ ಸಮಿತಿ ವತಿಯಿಂದ ರೂಪಿಸಲಾದ ಜನಸಾಮಾನ್ಯರನ್ನು ಒಳಗೊಂಡ ಸಂದೇಶವುಳ್ಳ ಆಕರ್ಷಕ ಪೋಸ್ಟರ್‌ಗಳು ಜಿಲ್ಲೆಯಾದ್ಯಂತ ಜನರ ಗಮನ ಸೆಳೆಯುತ್ತಿವೆ.

ಮತದಾನ ಮಾಡುವೆ ಎಂಬ ಸಂದೇಶದ ಮೂಲಕ ಪ್ರತೀ ಮತದಾರರಲ್ಲೂ ಮತದಾನದ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಸ್ವೀಪ್ ಸಮಿತಿಯು ೫೦ಕ್ಕೂ ಅಧಿಕ ಪೋಸ್ಟರ್‌ಗಳನ್ನು ರೂಪಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿದ್ದರೆ ಜಿಲ್ಲೆಯಾದ್ಯಂತ ೬೦ಕ್ಕೂ ಅಧಿಕ ಹೋರ್ಡಿಂಗ್‌ಗಳಲ್ಲಿ ಕೂಡ ಈ ಸಂದೇಶದ ಪೋಸ್ಟರ್‌ಗಳು ಅಳವಡಿಸಲ್ಪಟ್ಟಿವೆ.

ಕೊಡಗು ಜಿಲ್ಲಾ ಚುನಾವಣಾ ರಾಯಭಾರಿಗಳಾದ ಶಿಕ್ಷಕ, ಗಾಯಕ ಬಸವರಾಜ ಬಡಿಗೇರ್, ವಿಶೇಷ ಚೇತನ ಮಹಿಳೆ, ಸಾಹಿತಿ ಎಸ್.ಕೆ. ಈಶ್ವರಿ, ಈಜು ಪರಿಣಿತ ಕೆ.ರವಿಮುತ್ತಪ್ಪ ಅವರನ್ನು ಮುಖ್ಯ ವಾಗಿರಿಸಿಕೊಂಡು ರಾಯಭಾರಿಗಳು ಜನರಲ್ಲಿ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಸಾರುವ ಪೋಸ್ಟರ್‌ಗಳನ್ನು ರೂಪಿಸಲಾಗಿದೆ. ಯಾವುದೇ ಆಮಿಷಕ್ಕೆ ಬಲಿಯಾಗದೇ ನಿರ್ಭೀತಿಯಿಂದ ಮತದಾನ ಮಾಡಿ ಎಂಬ ಸಂದೇಶ ವನ್ನೂ ರಾಯಭಾರಿ ಗಳು ಸಾರಿದ್ದಾರೆ. ಈ ಬಾರಿ ಸಾಮಾನ್ಯರನ್ನೇ ಚುನಾವಣಾ ಮತದಾನ ಜಾಗೃತಿ ಸಂದೇಶಕ್ಕಾಗಿ ರಾಯಭಾರಿಗಳನ್ನಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಸ್. ಆಕಾಶ್ ಆಯ್ಕೆ ಮಾಡಿರುವುದು ವಿಶೇಷ.

ಚುನಾವಣಾ ರಾಯಭಾರಿಗ ಳೊಂದಿಗೆ ಸಮಾಜದ ವಿವಿಧ ಸ್ತರಗಳ ಜನರನ್ನು ಗುರುತಿಸಿ ಅವರ ಮೂಲಕ ಮತದಾನ ಮಾಡಿ ಎಂಬ ಸಂದೇಶ ಸಾರಲಾಗಿದೆ.

ಪೌರಕಾರ್ಮಿಕರು, ಶುಶ್ರೂಷಕಿ ಯರು, ವೈದ್ಯರು, ಆಟೋ ಚಾಲಕರು, ಹಾಕಿ ಕ್ರೀಡಾಪಟುಗಳು, ತರಕಾರಿ ವ್ಯಾಪಾರಸ್ಥರು, ಶತಾಯುಷಿಗಳು, ಆಶಾ ಕಾರ್ಯಕರ್ತೆಯರು, ಜೀಪ್ ಚಾಲಕರು, ಕಾಫಿ ತೋಟ ಕಾರ್ಮಿಕರ ಗುಂಪನ್ನೂ ಬಳಸಿಕೊಂಡು ಮತ ಹಾಕುವಂತೆ ಪ್ರೇರೇಪಣೆ ನೀಡುವ ಪೋಸ್ಟರ್‌ಗಳ ಮೂಲಕ ಮತದಾನ ಜಾಗೃತಿ ಮಾಡಲಾಗುತ್ತಿದೆ.

ಮಡಿಕೇರಿ ನಗರದ ೩೫ಕ್ಕೂ ಅಧಿಕ ಪೌರಕಾರ್ಮಿಕರು ‘ಶುಭ್ರ ನಗರಕ್ಕೆ ನಮ್ಮ ಕಾಯಕದ ಆದ್ಯತೆ, ಮತದಾನಕ್ಕೆ ಖಂಡಿತಾ.. ನಮ್ಮ ಆದ್ಯತೆ' ಎಂಬ ಘೋಷವಾಕ್ಯದೊಡನೆ ಮತದಾನವನ್ನು ಮಾಡಿ ಎಂಬ ಸಂದೇಶ ಸಾರುತ್ತಿದ್ದಾರೆ.

(ಮೊದಲ ಪುಟದಿಂದ) ‘ನಾವು ಪೌರಕಾರ್ಮಿಕರು ತಪ್ಪದೇ ಮತ ಚಲಾಯಿಸುತ್ತೇವೆ. ಪ್ರತಿ ಚುನಾವಣೆಯಲ್ಲಿ ಮತದಾನ ನಿಮ್ಮ ಹೊಣೆ - ಮರೆಯದಿರಿ ಮತದಾನದ ದಿನವ' ಎಂಬ ಘೋಷವಾಕ್ಯವನ್ನು ಪೌರ ಕಾರ್ಮಿಕರು ಚಿತ್ರವಿರುವ ಪೋಸ್ಟರ್‌ಗಳು ಸಾರುತ್ತಿದೆ.

ಪ್ರಯಾಣಿಕರನ್ನು ನಿಗದಿತ ಗುರಿ ಮುಟ್ಟಿಸುವ ಹೊಣೆ ನಮ್ಮದು ...ಪ್ರಜಾಪ್ರಭುತ್ವದಲ್ಲಿ ನಾಗರಿಕನ ಹಕ್ಕಾಗಿರುವ ಮತದಾನ ಮಾಡುವ ಹೊಣೆ. ನಿಮ್ಮದು ಎಂದು ಆಟೋ ಚಾಲಕರು ಪೋಸ್ಟರ್ ಸಂದೇಶದಲ್ಲಿ ಹೇಳುತ್ತಾರೆ. ನಾವು ಆಟೋ ಚಾಲಕರು ತಪ್ಪದೆ ಮತ ಚಲಾಯಿಸುತ್ತೇವೆ ಎಂದು ವಾಗ್ದಾನ ಮಾಡುತ್ತಾರೆ.

ಮಡಿಕೇರಿ ಜಾನಪದ ಪರಿಷತ್ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ ವಿದ್ಯಾರ್ಥಿಗಳು ಮತ್ತು ಜಿಲ್ಲೆಯ ಕಲಾವಿದರು ರಚಿಸಿದ ಮತದಾನ ಮಹತ್ವದ ಚಿತ್ರಕಲೆಯನ್ನೇ ಬಳಸಿಕೊಂಡು ವಿದ್ಯಾರ್ಥಿಗಳು ರಂಗು ತುಂಬಿದ ಚಿತ್ತಾರಗಳು ಹೆಸರಲ್ಲಿ ಪೋಸ್ಟರ್ ರಚಿತವಾಗಿದ್ದು, ಮತದಾನ ಮಾಡಿ ಎಂದು ಚಿತ್ರಕಲಾವಿದರು ಕರೆ ನೀಡುತ್ತಾರೆ. ತರಕಾರಿ ವ್ಯಾಪಾರಸ್ಥರು ಕೂಡ ಮತದಾನ ಮಾಡಿ ಎಂಬ ಸಂದೇಶ ಸಾರುತ್ತಿದ್ದು ‘ದೇಹದ ಆರೋಗ್ಯ ಕಾಪಾಡಲು ತರಕಾರಿ ಸಾಕು..ಪ್ರಜಾಪ್ರಭುತ್ವದ ಸಂರಕ್ಷಣೆಗೆ ಮತದಾನ ಬೇಕೇ ಬೇಕು’, ‘ವಿಧ ವಿಧ ತರಕಾರಿ, ಸೊಪ್ಪು ಅಡುಗೆಗೆ ಬೇಕು. .ಒಂದೇ ಒಂದು ಮತ ಪ್ರಜಾಪ್ರಭುತ್ವದ ಸಂರಕ್ಷಣೆಗೆ ಸಾಕು’ ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.

ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಆಯೋಜಿತ ಬೈಕ್ ಜಾಥಾದ ಚಿತ್ರದ ಮೂಲಕ ಬೈಕ್ ಸವಾರರು ‘ನಾವೆಲ್ಲಾ.. ಮತಹಾಕೋಣ.. ಬನ್ನಿ ನೀವೆಲ್ಲಾ...’ ಎಂಬ ಸಂದೇಶದ ಪೋಸ್ಟರ್, ‘ಕೊಡಗಿನ ಕಾಫಿ ಸ್ವಾದಿಷ್ಟವಾಗಲು ನಾವೂ ಕಾರಣ..ಮತದಾನ ಮಾಡಿ ಸಮಾಜ ಸುಂದರವಾಗಲು ಆಗಿ ನೀವೂ ಕಾರಣ..’ ‘ಕಾಪಿ ನಾಡು ಕೊಡಗಿನ ಎಲ್ಲರೂ ತಪ್ಪದೇ ಮತಹಾಕೋಣ..ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ... ಕಾಫಿ ತೋಟದ ಶ್ರಮಜೀವಿಗಳು ನಾವು.. ಮತದಾನದ ಹಕ್ಕು ಚಲಾಯಿಸುತ್ತೇವೆ’ ನೀವೂ ಮರೆಯದೇ.. ಮತಹಾಕುತ್ತೀರಲ್ಲ..’ ಎಂಬ ಕಾಫಿ ತೋಟ ಕಾರ್ಮಿಕರ ಪೋಸ್ಟರ್ ಕೂಡ ಗಮನಾರ್ಹವಾಗಿದೆ.

ದೇಶವೇ ಮೆಚ್ಚಿಕೊಂಡಿರುವ ಕೊಡಗಿನ ಪ್ರಮುಖ ಕ್ರೀಡೆ... ಹಾಕಿ.. ಕ್ರೀಡಾಹಬ್ಬದ ಸಂಭ್ರಮದAತೆ.. ಚುನಾವಣಾ ಹಬ್ಬದಂದು ಮತಹಾಕಿ... ಎಂದು ಹಾಕಿ ಕ್ರೀಡಾಕಲಿಗಳು ಸಂದೇಶ ಸಾರುವ ಪೋಸ್ಟರ್, ಸಣ್ಣ ಪುಟ್ಟ ಆಯ್ಕೆಗಳಿಗೆ ಹತ್ತು ಬಾರಿ ಯೋಚಿಸುತ್ತೇವೆ .. ಮತದಾನದಂಥ ಮಹತ್ವದ ಅವಕಾಶಕ್ಕೆ ಯಾಕೆ ಆಲೋಚನೆ.. ನಿರ್ಲಕ್ಷö್ಯ ಬಿಡಿ..ಮೇ ೧೦ ರಂದು ಬುಧವಾರ ಮತದಾನ ಮಾಡಿಬಿಡಿ’ ಎಂದು ಕರೆ ನೀಡುವ ಪೋಸ್ಟರ್, ‘ನೋಟಿಗಾಗಿ ಮತ ಮಾರಾಟ ಬೇಡವೇ ಬೇಡ..., ಹೆಂಡಕ್ಕಾಗಿ ಮತದ ಹಕ್ಕಿನ ನೀಡಿಕೆ ಖಂಡಿತಾ ಬೇಡ..ಯಾವುದೇ ಆಮಿಷಗಳಿಗೆ ಒಳಗಾಗದೇ ಮತಹಾಕಿ.. ಎಂಬ ಕರೆ ನೀಡುವ ಪೋಸ್ಟರ್‌ಗಳು ಮತದಾರರಲ್ಲಿ ಜಾಗೃತಿ ಮಾಡುವಂತಿದೆ.

ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು, ದಾದಿಯರು ‘ನಿಮ್ಮ ಮತ ನಿಮ್ಮ ಧ್ವನಿ' - ನಿಮ್ಮ ಆರೋಗ್ಯ ಸಂರಕ್ಷಣೆಯ ಹೊಣೆ ನಮ್ಮದು.. ಪ್ರಜಾಪ್ರಭುತ್ವದ ಆರೋಗ್ಯ ಸಂರಕ್ಷಣೆಯ ಹೊಣೆ ನಮ್ಮೆಲ್ಲರದು ಎಂಬ ಪರಿಣಾಮಕಾರಿ ಸಂದೇಶವನ್ನು ಚಿತ್ರದ ಮೂಲಕ ಸಾರಿದ್ದಾರೆ.