*ಗೋಣಿಕೊಪ್ಪ, ಏ. ೨೦: ಮೇಲಧಿಕಾರಿಗೆ ದೂರು ನೀಡಿದ ಕಾರಣವನ್ನು ಮುಂದಿಟ್ಟು ಬಾಳೆಲೆ ಸೆಸ್ಕಾಂ ಶಾಖೆಯ ಕಿರಿಯ ಇಂಜಿನಿಯರ್ ಗುತ್ತಿಗೆದಾರನ ಮೇಲೆ ಕಬ್ಬಿಣದ ಸಲಾಕೆಯಿಂದ ಹೊಡೆದು ಹಲ್ಲೆ ನಡೆಸಿದ ಸಂಬAಧ ಪೊಲೀಸ್ ಪ್ರಕರಣ ದಾಖಲಾಗಿದೆ.

ಗೋಣಿಕೊಪ್ಪ ಸೆಸ್ಕಾಂ ಇಲಾಖೆ ಕಚೇರಿಯ ಮುಂಭಾಗದಲ್ಲಿ ಕುಶಾಲನಗರ ನಿವಾಸಿ ವಿದ್ಯುತ್ ಗುತ್ತಿಗೆದಾರ ಸ್ವಾಮಿ ಮತ್ತು ಬಾಳೆಲೆ ಶಾಖೆಯ ಜೆ.ಇ. ರಂಗಸ್ವಾಮಿ ನಡುವೆ ಕಲಹ ನಡೆದಿದೆ. ಗುತ್ತಿಗೆದಾರ ಗೋಣಿಕೊಪ್ಪ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಿದ ಅಧಿಕಾರಿಯನ್ನು ತಕ್ಷಣವೇ ಅಮಾನತ್ತುಗೊಳಿಸಬೇಕೆಂದು ಜಿಲ್ಲಾ ಗುತ್ತಿಗೆದಾರರ ಸಂಘ ಒತ್ತಾಯಿಸಿ ಗುರುವಾರ ಗೋಣಿಕೊಪ್ಪ ಹಿರಿಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಮುಂಭಾಗ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿತು.

ನಿಯಮಾನುಸಾರ ಟೆಂಡರ್ ಪ್ರಕ್ರಿಯೆಯಲ್ಲಿ ಸೂಚಿಸಿರುವ ಪ್ರದೇಶದಲ್ಲಿ ವಿದ್ಯುತ್ ಕಂಬ ಅಳವಡಿಕೆ ಮತ್ತು ಸಂಪರ್ಕ ಕಾಮಗಾರಿ ನಡೆಸಲು ಅನುಮತಿ ನೀಡದೇ ಬೇರೆ ಮಾರ್ಗದಲ್ಲಿ ಕಾಮಗಾರಿ ಪ್ರಾರಂಭಿಸುವAತೆ ಗುತ್ತಿಗೆದಾರನಿಗೆ ಇಂಜಿನಿಯರ್ ಸೂಚಿಸಿದರು. ಇದು ಟೆಂಡರ್ ನಿಯಮವಲ್ಲ ಎಂದು ವಾದಿಸಿದ ಹಿನ್ನೆಲೆ ಗುತ್ತಿಗೆದಾರನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಸ್ವಾಮಿ ಅವರಿಗೆ ನಿರಂತರವಾಗಿ ಜೆ.ಇ. ರಂಗಸ್ವಾಮಿಯವರು ಕಿರುಕುಳ ನೀಡುತ್ತಾ ಬಂದಿದ್ದಾರೆ. ಯಾವುದೇ ಕಾಮಗಾರಿಯ ಕಡತಗಳಿಗೆ ಸಹಿ ಹಾಕದೆ ಪೀಡಿಸುತ್ತ ಬಂದಿದ್ದು, ಸಹಿ ಹಾಕಲು ಹಣದ ಆಮಿಷವನ್ನು ಒಡ್ಡಿದ್ದಾರೆ ಎಂದು ಅಧಿಕಾರಿಯ ಅಮಾನತ್ತಿಗೆ ಒತ್ತಾಯದ ಮನವಿ ಪತ್ರದಲ್ಲಿ ಹಲ್ಲೆಯ ಕಾರಣದೊಂದಿಗೆ ಈ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ.

ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ.

ಗುತ್ತಿಗೆದಾರರ ರಾಜ್ಯ ಸಮಿತಿ ಸದಸ್ಯ ಬಿ.ಎಂ. ಗಣೇಶ್, ಜಿಲ್ಲಾ ಸಮಿತಿ ಅಧ್ಯಕ್ಷ ವಸಂತ್ ರೈ, ಉಪಾಧ್ಯಕ್ಷ ಅನೀಲ್ ಕೆ.ಕೆ., ಅನೀಫ್, ಕಾರ್ಯದರ್ಶಿ ರಾಜ, ಸಹ ಕಾರ್ಯದರ್ಶಿ ಸಂಜೀವ್, ಕಾರ್ಯಕಾರಿ ಸಮಿತಿ ನೂರುನ್ನೀಸ, ಸತೀಸ್ ಬಿ.ಜಿ., ಸೋಮೇಶ್, ರವಿ, ಪ್ರವೀಣ್ ರೈ, ನಾಗರಾಜು, ಸುಶೀಲ, ಲಿತೀಶ್, ಆಲಿ, ವೀರಾಜಪೇಟೆ ಸಮಿತಿಯ ಟಿ.ಎನ್. ವಿಶ್ವನಾಥ್, ಕುಶಾಲನಗರ ಸಮಿತಿ ಸದಸ್ಯರುಗಳಾದ ಡೇವಿಡ್, ಮಂಜು, ಪೊನ್ನಂಪೇಟೆ ಸಮಿತಿ ಅಧ್ಯಕ್ಷ ಮಹೇಶ್ ಎಂ., ಕಾರ್ಯದರ್ಶಿ ಪ್ರತಾಪ್, ಸದಸ್ಯರುಗಳಾದ ಸುಬ್ರಮಣಿ, ರವಿ, ಮಹಾದೇವ್, ಹುಸೈನ್, ಚಂದ್ರ, ಶಿಯಾಬ್ ಸೇರಿದಂತೆ ಹಲವರು ಹಾಜರಿದ್ದರು.