ಭಾಗಮಂಡಲ, ಏ. ೨೦: ಸಮೀಪದ ಚೆಟ್ಟಿಮಾನಿ ಗ್ರಾಮದ ಕೆದಂಬಾಡಿ ಕ್ರಿಕೆಟ್ ಮೈದಾನದಲ್ಲಿ ಕೆದಂಬಾಡಿ ರಾಮಯ್ಯ ಗೌಡ ಸ್ಮರಣಾರ್ಥ ೧೦ ಕುಟುಂಬ ೧೮ ಗೋತ್ರ ಕೊಡಗು ಮತ್ತು ದಕ್ಷಿಣ ಕನ್ನಡದ ಅರೆ ಭಾಷಿಕ ಗೌಡ ಕುಟುಂಬಗಳ ನಡುವಿನ ೨೭ನೇ ವರ್ಷದ ಕೆದಂಬಾಡಿ ಕಪ್ ೨೦೨೩ ಗುರುವಾರದ ಪಂದ್ಯಗಳಲ್ಲಿ ಕೆದಂಬಾಡಿ, ಕಡಪಾಲ ಮತ್ತು ಕಾಂಗಿರ ತಂಡಗಳು ಮುಂದಿನ ಹಂತ ಪ್ರವೇಶಿಸಿದವು.

ದಿನದ ಮೊದಲ ಪಂದ್ಯದಲ್ಲಿ ಕೆದಂಬಾಡಿ ಮತ್ತು ಪೂಜಾರಿರ ತಂಡಗಳ ನಡುವೆ ನಡೆಯಿತು. ಕೆದಂಬಾಡಿ ವಿರುದ್ಧ ಪೂಜಾರಿರ ತಂಡ ಕೇವಲ ೨೯ ರನ್ ಗಳಿಸಲು ಶಕ್ತವಾಯಿತು. ಕೆದಂಬಾಡಿ ತಂಡ ೫ ವಿಕೆಟ್ ನಷ್ಟಕ್ಕೆ ೭೬ ರನ್ ಗಳಿಸಿ ೪೭ ರನ್ ಗಳ ವಿಜಯ ಸಾಧಿಸಿತು. ಬೈತಡ್ಕ ೩ ವಿಕೆಟ್ ನಷ್ಟಕ್ಕೆ ೩೦ ರನ್ ಸಾಧಿಸಿತು. ಬೈಮನ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೩೧ ರನ್ ಗಳಿಸಿ ಆರು ವಿಕೆಟ್ ಗಳ ಜಯ ಸಾಧಿಸಿತು.

ಕಾಂಗೀರ ಮತ್ತು ಪಾಕ ಮುಕ್ಕಾಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಕಮುಕ್ಕಾಟಿ ತಂಡ ಐದು ವಿಕೆಟ್ ನಷ್ಟಕ್ಕೆ ೩೦ ರನ್ ಗಳಿಸಿತು. ಕಾಂಗೀರ ತಂಡ ಮೂರು ವಿಕೆಟ್ ನಷ್ಟಕ್ಕೆ ೭೭ರನ್ ಗಳಿಸಿ ೪೭ ರನ್‌ಗಳಿಂದ ಜಯ ಸಾಧಿಸಿತು. ಕೆದಂಬಾಡಿ ತಂಡವು ಬೈಮನ ಎ ತಂಡದ ವಿರುದ್ಧ ೭೮ ರನ್ ಗಳಿಸಿದರೆ ಬೈಮನ ಎ ಒಂಬತ್ತು ವಿಕೆಟ್ ನಷ್ಟಕ್ಕೆ ೫೫ ರನ್ ಗಳಿಸಿತು. ಕೆದಂಬಾಡಿ ತಂಡಕ್ಕೆ ೨೭ರನ್‌ಗಳ ಜಯ ಲಭಿಸಿತು. ಕಾಂಗೀರ ಮತ್ತು ಅಮ್ಮವನ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಅಮ್ಮವನ ತಂಡ ೬೫ ರನ್ ಗಳಿಸಿದರೆ ಕಾಂಗೀರ ತಂಡ ಮೂರು ವಿಕೆಟ್ ನಷ್ಟಕ್ಕೆ ೯೨ ರನ್ ಗಳಿಸಿ ೨೭ ರನ್‌ಗಳ ಜಯ ಸಾಧಿಸಿತು. ಮುಂದಿನ ಪಂದ್ಯದಲ್ಲಿ ಪೈಕೆ ತಂಡ ಏಳು ವಿಕೆಟ್ ನಷ್ಟಕ್ಕೆ ೩೬ ರನ್‌ಗಳಿಸಿತು.

ಬಳ್ಳಡ್ಕ ತಂಡ ಎರಡು ವಿಕೆಟ್ ನಷ್ಟಕ್ಕೆ ೩೭ ರನ್ ಗಳಿಸಿ ಗೆಲುವು ಸಾಧಿಸಿತು. ಕಡಪಾಲ ತಂಡವು ಬಳ್ಳಡ್ಕ ವಿರುದ್ಧ ಗೆಲುವು ಸಾಧಿಸಿತು. ಬಲ್ಲಡ್ಕ ತಂಡ ಎಂಟು ವಿಕೆಟ್ ನಷ್ಟಕ್ಕೆ ೩೭ ರನ್ ಮಾಡಿದರೆ ಕಡಪಾಲ ತಂಡ ಆರು ವಿಕೆಟ್ ಗೆ ೪೪ ರನ್ ಗಳಿಸಿ ಮುಂದಿನ ಹಂತ ಪ್ರವೇಶಿಸಿತು. ಶುಕ್ರವಾರ ಬೊಳ್ತಜಿರ, ದೇವಾಯಿರ, ಶೇರಮರಕಡ, ಕಾಳೆಯಂಡ, ಪಾಲಾರ ಗುಂಡ್ಯ ಮತ್ತು ನೂಜಿಬೈಲು ತಂಡಗಳ ನಡುವೆ ಪಂದ್ಯ ನಡೆಯಲಿದೆ.

-ಸುನಿಲ್