ಸುಂಟಿಕೊಪ್ಪ, ಏ. ೨೦: ಚೇರಳ ಶ್ರೀಮಂಗಲ ಚೆಟ್ಟಳ್ಳಿ ಫಾರಂ ಸಮೀಪ ತೋಟಕ್ಕೆ ಆನೆಗಳ ಹಿಂಡು ನುಗ್ಗಿ ಕೃಷಿಫಸಲು ನಾಶಪಡಿಸಿದೆ.ಹಲವು ದಿನಗಳಿಂದ ಈ ಭಾಗದಲ್ಲಿ ಕಾಡಾನೆಗಳು ತೋಟಗಳಲ್ಲಿ ಬೀಡುಬಿಟ್ಟಿದ್ದು ತೋಟಗಳಿಗೆ ನುಗ್ಗಿ ಅಡಿಕೆ, ಕಾಫಿ, ಸಪೋಟ, ಪಪ್ಪಾಯಿ, ನಾಶಪಡಿಸಿ ಸುಮಾರು ೪೦ ಸಾವಿರ ನಷ್ಟಪಡಿಸಿವೆ.
ಈ ಭಾಗದಲ್ಲಿ ನಿರಂತರವಾಗಿ ಸುತ್ತಮುತ್ತಲಿನ ತೋಟಗಳಲ್ಲಿ ಹಗಲು ವೇಳೆಯಲ್ಲಿಯೇ ಆನೆಗಳು ಕಂಡುಬರುತ್ತಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ಮನೆಯಿಂದ ಹೊರಬರುವುದಕ್ಕೂ ಭಯಪಡುತ್ತಿದ್ದಾರೆ. ಕಾಡಿನಿಂದ ಆಹಾರ ಅರಸಿ ಬರುವ ಆನೆಗಳು ತೋಟದೊಳಗೆ ಎಲ್ಲೆಂದರಲ್ಲಿ ನುಗ್ಗಿ ಅಡಿಕೆ ಗಿಡಗಳನ್ನು ಕೋರೆಯಿಂದ ಸಿಗಿದುಹಾಕಿವೆ. ಆನೆಗಳು ನಾಡಿಗೆ ಬರದಂತೆ ಅಳವಡಿಸಿರುವ ಸೋಲಾರ್ ತಂತಿಗಳನ್ನು ಲೆಕ್ಕಿಸದೆ ಅದನ್ನು ತುಂಡರಿಸಿ ಆನೆಗಳು ಬರುತ್ತಿವೆ. ಕೂಡಲೇ ಆನೆಗಳನ್ನು ಅರಣ್ಯಕ್ಕೆ ಓಡಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.