ಸೋಮವಾರಪೇಟೆ, ಏ. ೧೯: ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ, ವಾತಾವರಣದಲ್ಲೂ ಧಗೆ ಅಧಿಕವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ಮಾಯವಾಗಿದ್ದು, ವರುಣನಾಗಮನಕ್ಕೆ ಕೃಷಿಕ ವರ್ಗ ಆಗಸದತ್ತ ದೃಷ್ಟಿನೆಟ್ಟಿದೆ.

ಪ್ರಸ್ತುತ ಅರೇಬಿಕಾ ಕಾಫಿಗೆ ಉತ್ತಮ ಧಾರಣೆಯಿದೆ. ಆದರೆ ಕಾಫಿ ಗಿಡಗಳು ತೋಟದಲ್ಲಿ ಒಣಗುತ್ತಿವೆ. ಅರೇಬಿಕಾ ಗಿಡಗಳನ್ನು ಉಳಿಸಿಕೊಳ್ಳಲು ಕೃಷಿಕರು ಹರಸಾಹಸ ಪಡುತ್ತಿದ್ದಾರೆ. ನೀರಾವರಿ ಸೌಕರ್ಯ ಇರುವವರು ಈಗಾಗಲೇ ತೋಟಗಳಿಗೆ ನೀರು ಹಾಯಿಸುತ್ತಿದ್ದು, ಗಿಡಗಳ ರಕ್ಷಣೆಗೆ ಮುಂದಾಗಿದ್ದಾರೆ.

ಆದರೆ ಮಾರ್ಚ್ ಹಾಗೂ ಏಪ್ರಿಲ್ ಮೊದಲನೇ ವಾರದಲ್ಲಿ ವಾಡಿಕೆ ಮಳೆ ಬಿದ್ದೇ ಬೀಳುತ್ತದೆ ಎಂದು ನಂಬಿಕೆಯಿಟ್ಟು ತೋಟಗಳಲ್ಲಿ ಮರ ಕಪಾತು ಮಾಡಿಸಿದ ಮಂದಿ ತಲೆ ಮೇಲೆ ಕೈಹೊರುವಂತಾಗಿದೆ. ಬಿಸಿಲ ಬೇಗೆಗೆ ಗಿಡಗಳು ಸೊರಗಿದ್ದರೆ, ಹಲವಷ್ಟು ಗಿಡಗಳು ಒಣಗಿವೆ.

ಮಾರ್ಚ್ ತಿಂಗಳು ಕಾಫಿ ಬೆಳೆಗಾರರಿಗೆ ಬಹು ನಿರೀಕ್ಷೆಯ ಮಾಸವಾಗಿದೆ. ಕಾಫಿ ತೋಟದ ಉಳಿವಿನ ಮಾಸವೂ ಇದಾಗಿದೆ. ಈ ತಿಂಗಳಿನಲ್ಲಿ ಸರಿಯಾಗಿ ಮಳೆಯಾದಲ್ಲಿ ಮಾತ್ರ ಮುಂದಿನ ಸಾಲಿನಲ್ಲಿ ಉತ್ತಮ ಕಾಫಿ ಮತ್ತು ಕಾಳುಮೆಣಸಿನ ಫಸಲನ್ನು ಪಡೆಯಬಹುದು.

ಮಳೆ ದೂರಾದರೆ ಮುಂದಿನ ವರ್ಷದ ಫಸಲಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮುಂದಿನ ವರ್ಷವಿಡೀ ಯಾವುದೇ ಲಾಭವಿಲ್ಲದೆ ಇರಬೇಕಾಗುವುದು. ಕಳೆದ ವರ್ಷ ಜನವರಿಯಿಂದಲೂ ಸಾಕಷ್ಟು ಮಳೆಯಾದ ಪರಿಣಾಮ ಹೂವಿನ ಮಳೆಗೆ ಸಮಸ್ಯೆಯಾಗಿರಲಿಲ್ಲ. ಆದರೆ, ಪ್ರಸಕ್ತ ಸಾಲಿನಲ್ಲಿ ಇನ್ನೂ ಬಂದಿಲ್ಲ. ಇದು ಬೆಳೆಗಾರರ ಆತಂಕ ಹೆಚ್ಚಾಗಲು ಕಾರಣವಾಗಿದೆ.

ಬಿಸಿಲಿನ ಧಗೆ ಒಂದೆಡೆಯಾದರೆ, ಮಳೆಯಿಲ್ಲದ ಕಾರಣ ಕಾಫಿ ಗಿಡಗಳು ಹಾಗೂ ಮೆಣಸಿನ ಬಳ್ಳಿಗಳು ಒಣಗುತ್ತಿವೆ. ಇದರಿಂದಾಗಿ ಫಸಲಿನೊಂದಿಗೆ ಗಿಡಗಳನ್ನು ಕಳೆದುಕೊಳ್ಳಬೇಕಾಗಿದೆ. ನೀರಿನ ಸೌಕರ್ಯವುಳ್ಳವರು ನೀರನ್ನು ಹಾಯಿಸಿಕೊಳ್ಳುವ ಮೂಲಕ ಗಿಡಗಳಲ್ಲಿ ಕಾಫಿ ಹೂ ಅರಳುವಂತೆ ಮಾಡಿದ್ದಾರೆ. ನೀರಿನ ವ್ಯವಸ್ಥೆ ಇಲ್ಲದವರು ಮಾತ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅರೇಬಿಕಾ ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಉತ್ತರ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅರೇಬಿಕಾ ಕಾಫಿ ಉದ್ದಿಮೆ ಅವನತಿಯತ್ತ ಸಾಗುತ್ತಿದೆ. ೨೦೧೮ರಿಂದಲೂ ಒಂದಲ್ಲ ಒಂದು ರೀತಿಯ ಹವಾಮಾನ ವೈಪರೀತ್ಯಕ್ಕೆ ಸಿಲುಕಿ ಕಾಫಿ ಬೆಳೆಗಾರರು ತತ್ತರಿಸುತ್ತಿದ್ದಾರೆ.

ಇದರೊಂದಿಗೆ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆ ಅರೇಬಿಕಾ ಕಾಫಿಗೆ ಬಿಳಿಕಾಂಡ ಕೊರಕದ ಹಾವಳಿಯೂ ಹೆಚ್ಚಾಗಲಿದೆ. ಕಾಫಿ ಮತ್ತು ಕಾಳು ಮೆಣಸಿನ ಗಿಡ ಮತ್ತು ಫಸಲನ್ನು ಉಳಿಸಿಕೊಳ್ಳಲು ಸರ್ಕಾರ ರೈತರಿಗೆ ಸಹಾಯಧನದಲ್ಲಿ ಯೋಜನೆಗಳನ್ನು ರೂಪಿಸಬೇಕು. ಕೆಲವೇ ಕೆಲವು ಬೆಳೆಗಾರರು ಮಾತ್ರ ತಮ್ಮಲ್ಲಿರುವ ನೀರಿನ ವ್ಯವಸ್ಥೆಯಿಂದ ಕಾಫಿ ತೋಟ ನಿರ್ವಹಣೆ ಮಾಡುತ್ತಿದ್ದಾರೆ. ಉಳಿದವರಿಗೂ ಸೂಕ್ತ ನೀರಿನ ವ್ಯವಸ್ಥೆಯಾದಲ್ಲಿ ಮಾತ್ರ ಕಾಫಿ ಬೆಳೆಗಾರರು ನೆಮ್ಮದಿಯಿಂದ ಬದುಕಬಹುದಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ದಿನೇಶ್ ಅಭಿಪ್ರಾಯಿಸಿದ್ದಾರೆ.

ಬಿಸಿಲಿನ ತಾಪ ಹೆಚ್ಚಾದಂತೆ ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ತಾಲೂಕಿನ ಹಲವಷ್ಟು ಕೆರೆಗಳು ಒಣಗಿದ್ದರೆ, ಕೆಲವು ಕೆರೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಸಣ್ಣಪುಟ್ಟ ತೊರೆ, ಕೊಲ್ಲಿಗಳಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಬೋರ್‌ವೆಲ್ ಕೊರೆಸುವವರ ಸಂಖ್ಯೆ ಹೆಚ್ಚಾಗಿದ್ದು, ಪ್ರಸ್ತುತತೆಯಲ್ಲಿ ಬೋರ್‌ವೆಲ್ ಕೊರೆಯುವ ಯಂತ್ರದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಒಟ್ಟಾರೆ ಕೃಷಿಕ ವರ್ಗ ವರುಣನ ಆಗಮನಕ್ಕೆ ಆಗಸದತ್ತ ಮುಖ ಮಾಡಿದ್ದು, ತೋಳೂರುಶೆಟ್ಟಳ್ಳಿ, ಶಾಂತಳ್ಳಿ ವ್ಯಾಪ್ತಿಯ ಕೃಷಿಕರು ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.