ನಾಪೋಕ್ಲು, ಏ. ೧೯: ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಯೋಜನವಾಗಲೆಂದು ೨೦೦೧ರಲ್ಲಿ ಸ್ಥಾಪಿಸಲಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ೨೩ ವರ್ಷಗಳಿಂದ ನಿರಂತರವಾಗಿ ಬೇಸಿಗೆ ಶಿಬಿರವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸುತ್ತಿದೆ. ಈ ವರ್ಷವೂ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು, ೬೫ ಶಿಬಿರಾರ್ಥಿಗಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ರಜಾ ಅವಧಿಯಲ್ಲಿ ಕಾಲಹರಣ ಮಾಡದೇ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸುವುದರ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಹೇಳಿದರು.

ಶಿಬಿರಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಇಂದು ಮಕ್ಕಳಲ್ಲಿ ಶಿಸ್ತಿನ ಕೊರತೆ ಕಾಡುತ್ತಿದೆ. ಇದಕ್ಕೆ ಪೋಷಕರೇ ಕಾರಣ. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ತರಬೇತಿಯ ಜೊತೆಗೆ ಶಿಸ್ತು ಹಾಗೂ ಸಮಯ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ನಮ್ಮಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಉನ್ನತ ಸ್ಥಾನಮಾನವನ್ನು ಅಲಂಕರಿಸಿಕೊAಡಿದ್ದಾರೆ . ಶಿಬಿರ ನಡೆಸಲು ದಾನಿಗಳು ನೆರವು ನೀಡುತ್ತಿದ್ದಾರೆ. ಶಿಬಿರವು ಒಂದು ತಿಂಗಳ ಕಾಲ ಉಚಿತವಾಗಿ ನಡೆಯಲಿದೆ. ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಹಾಲು ನೀಡಲಾಗುತ್ತಿದೆ ಎಂದರು. ಈ ಸಂದರ್ಭ ತರಬೇತುದಾರರಾಗಿರುವ ಕೇಟೋಳಿರ ಡಾಲಿ ಅಚ್ಚಪ್ಪ ಮತ್ತು ಅರೆಯಡ ಗಣೇಶ್, ಖಜಾಂಚಿ ಮಾಚಿಮಾಡ ಕುಶು ಕುಶಾಲಪ್ಪ, ನಿರ್ದೇಶಕರು ಹಾಗೂ ಪೋಷಕರು ಇದ್ದರು. -ದುಗ್ಗಳ ಸದಾನಂದ