ಸೋಮವಾರಪೇಟೆ, ಏ.೧೯ : ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿರುವ ಯಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮೂಗು ದಾರದ ಬಿಗಿತದಿಂದ ಮೂಕ ರೋಧನೆ ಅನುಭವಿಸುತ್ತಿದ್ದ ಗೋವಿಗೆ, ಕೊನೆಗೂ ನೋವಿನಿಂದ ಮುಕ್ತಿ ದೊರಕಿದೆ.
ಎಳೆಯ ವಯಸ್ಸಿನಲ್ಲಿ ಈ ಗೋವಿಗೆ ಮೂಗುದಾರ ಹಾಕಲಾಗಿತ್ತು. ನಂತರ ಗೋವು ಅರಣ್ಯದಲ್ಲಿಯೇ ದಿನ ಕಳೆದಿದ್ದರಿಂದ ಮೂಗುದಾರ ವನ್ನು ಬದಲಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಅಂದಿನ ಸಣ್ಣ ದಾರ ಇತ್ತೀಚಿನ ದಿನಗಳಲ್ಲಿ ಗೋವಿಗೆ ನರಕಯಾತನೆ ನೀಡುತ್ತಿತ್ತು. ಬೆಳವಣಿಗೆಯಾಗಿರುವ ಗೋವಿನ ಮೂಗು ಕೊರೆಯಲಾರಂಭಿಸಿ ರಕ್ತಸ್ರಾವವಾಗುತ್ತಿತ್ತು. ಇದರೊಂದಿಗೆ ನೊಣ, ಕ್ರಿಮಿಕೀಟಗಳು ಮುತ್ತಿಕೊಂಡಿದ್ದರಿAದ ಗೋವು ಮೂಕರೋದನೆ ಅನುಭವಿಸುತ್ತಿತ್ತು.
ಮೇವು ತಿನ್ನಲೂ ಸಹ ಸಾಧ್ಯವಾಗದೇ ರೋದನೆ ಅನುಭವಿಸುತ್ತಿದ್ದ ಗೋವಿನ ಸ್ಥಿತಿಗೆ ಮರುಗಿದ ಸಂಪತ್ ಮಾಚಯ್ಯ ಎಂಬವರು ಪತ್ರಿಕೆಯ ಗಮನಕ್ಕೆ ತಂದಿದ್ದರು. ಈ ಬಗ್ಗೆ ತಾ. ೭ರ ‘ಶಕ್ತಿ’ಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ನಂತರದ ದಿನಗಳಲ್ಲಿ ಸ್ಥಳೀಯರು ಗೋವನ್ನು ಹಿಡಿಯಲು ಯತ್ನಿಸಿದರೂ ಅದು ಸಿಗದೇ ಅರಣ್ಯಕ್ಕೆ ತೆರಳುತ್ತಿತ್ತು.
ಅಂತಿಮವಾಗಿ ತಾ.೧೦ ರಂದು ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಭೀಮಣ್ಣ, ಚೇತನ್ ಹಾಗೂ ಕಾರೆಕೊಪ್ಪದ ಶರತ್ ಅವರುಗಳ ಪ್ರಯತ್ನದಿಂದ ಗೋವನ್ನು ಹಿಡಿದು ಅದರ ಮೂಗುದಾರವನ್ನು ತುಂಡರಿಸಿ ಯಾತನೆಯಿಂದ ಮುಕ್ತಿ ನೀಡಲಾಯಿತು. ಇದರೊಂದಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದು, ಪಾಲನೆಗಾಗಿ ಯಡವನಾಡು ಗ್ರಾಮದ ದಿನೇಶ್ ತಿಮ್ಮಯ್ಯ ಅವರ ಸುಪರ್ದಿಗೆ ಒಪ್ಪಿಸಲಾಯಿತು.
ಈ ನಡುವೆ ‘ಶಕ್ತಿ’ಯ ವರದಿ ಗಮನಿಸಿ ಮರುಕ ವ್ಯಕ್ತಪಡಿಸಿದ ಕುಟ್ಟ ಗ್ರಾಮದ ಚಂಗುಲAಡ ಕಿಶನ್ ಸುಬ್ಬಯ್ಯ ಅವರು ನಿಮ್ಮ ಪತ್ರದ ಮೂಲಕ ಯಡವನಾಡು ಗ್ರಾಮಸ್ಥರಿಗೆ ಮನವಿ ಮಾಡಿದ್ದು, ಗೋವಿನ ನರಕಯಾತನೆಗೆ ಮುಕ್ತಿ ನೀಡುವಂತೆ ಕೇಳಿಕೊಂಡಿದ್ದರು. ಇಷ್ಟೇ ಅಲ್ಲದೇ ಗ್ರಾಮದ ದೇವಾಲಯಕ್ಕೆ ಕಾಣಿಕೆ ಸಲ್ಲಿಸುವುದಾಗಿಯೂ ತಿಳಿಸಿ, ಗೋವಿನ ನೋವಿಗೆ ಮರುಗಿದ್ದರು.
ಒಟ್ಟಾರೆ ಮೂಗುದಾರದಿಂದ ಮೂಕರೋದನೆ ಅನುಭವಿಸುತ್ತಿದ್ದ ಗೋವು ಇದೀಗ ಕೃಷಿಕ ದಿನೇಶ್ ಅವರ ಸುಪರ್ದಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮಾನವೀಯತೆ ತೋರಿದ ಅರಣ್ಯ ಇಲಾಖೆ ಹಾಗೂ ಪಶುವೈದ್ಯಕೀಯ ಇಲಾಖೆ, ಕಾಳಜಿ ತೋರಿದ ಕಿಶನ್ ಅವರುಗಳಿಗೆ ಪ್ರಾಣಿಪ್ರಿಯರಿಂದ ಶ್ಲಾಘನೆ ವ್ಯಕ್ತವಾಗಿದೆ.