ಸೋಮವಾರಪೇಟೆ, ಏ. ೧೯: ತಾಲೂಕಿನ ಹರಗ ಗ್ರಾಮದಲ್ಲಿ ಯಾವ ವ್ಯಕ್ತಿಗೂ ಬಹಿಷ್ಕಾರ ಹಾಕಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹರಗ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎ. ಧರ್ಮಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಗ ಗ್ರಾಮ ನಿವಾಸಿಯಾಗಿರುವ ಪಿ.ಡಿ. ಗಿರೀಶ್ ಎಂಬವರು, ಗ್ರಾಮಾಭಿವೃದ್ಧಿ ಮಂಡಳಿ ವಿರುದ್ಧ ಬಹಿಷ್ಕಾರದ ದೂರು ನೀಡಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಉಪ ತಹಶೀಲ್ದಾರ್, ಬಿಸಿಎಂ ಅಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಗ್ರಾಮಕ್ಕೆ ಬಂದು ಹೇಳಿಕೆ ಪಡೆದುಕೊಂಡು ಸಲಹೆ ನೀಡಿ ಹೋಗಿದ್ದಾರೆ ಎಂದರು.

ಗ್ರಾಮದ ಪಿ.ಡಿ. ಗಿರೀಶ್ ಎಂಬವರು ಅರಣ್ಯ ಒತ್ತುವರಿ ೬ ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದರು. ಬೆಟ್ಟದಲ್ಲಿ ಯಂತ್ರದ ಮೂಲಕ ರಸ್ತೆ ಮಾಡಿದ್ದರು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ನೋಟೀಸ್ ನೀಡಿ, ಕಾಫಿ ಗಿಡಗಳನ್ನು ಕಿತ್ತು ತೆರವುಗೊಳಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ಹರಗ ಗ್ರಾಮದವರು ಹೇಳಿ ತೆರವು ಮಾಡಿಸಿದ್ದಾರೆ ಎಂದು ಗಿರೀಶ್ ಸುಳ್ಳು ಆರೋಪ ಮಾಡಿ ಕಾಗಿನಹರೆ ಚಾಮುಂಡೇಶ್ವರಿ ದೇವಾಲಯದಿಂದ ೪೦ ಮಂದಿಗೆ ನೋಟೀಸ್ ಮಾಡಿಸಿದ್ದಾರೆ ಎಂದರು. ನೋಟೀಸ್ ಪಡೆದ ೪೦ ಮಂದಿ ಗ್ರಾಮಸ್ಥರು ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿ ನಾವು ಅರಣ್ಯ ಇಲಾಖೆಗೆ ಹೇಳಿ ಗಿರೀಶ್ ಅವರ ಕಾಫಿ ಗಿಡಗಳನ್ನು ಕೀಳಿಸಲಿಲ್ಲ ಎಂದು ಪ್ರಮಾಣ ಮಾಡಿದ್ದೇವೆ. ಆದರೆ, ಗ್ರಾಮದವರೇ ಕೀಳಿಸಿದ್ದು ಎಂದು ಆರೋಪಿಸಿರುವ ಪಿ.ಡಿ. ಗಿರೀಶ್ ಅವರೂ ಸಹ ಪ್ರಮಾಣ ಮಾಡಲು ನಾವೆಲ್ಲರೂ ಆಗ್ರಹಿಸಿದರೂ, ಅವರು ಮಾಡಲಿಲ್ಲ. ವಿನಾಕಾರಣ ಕಾಗಿನಹರೆ ತನಕ ಹೋಗಲು ಕಾರಣರಾದ ಗಿರೀಶ್‌ಗೆ ವಾಹನ ಬಾಡಿಗೆ ಭರಿಸುವಂತೆ ಗ್ರಾಮಸ್ಥರು ಕೇಳಿದಾಗ ಕೊಡಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದ ಕೆಲವರು ಅವರೊಂದಿಗೆ ಮಾತನಾಡುತ್ತಿಲ್ಲ. ಇದನ್ನೇ ಬಹಿಷ್ಕಾರ ಎಂದು ಮೇಲಾಧಿಕಾರಿಗಳಿಗೆ ದೂರು ನೀಡಿ, ಗ್ರಾಮಕ್ಕೆ ಕಳಂಕ ಬರುವಂತೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಹರಗ ಗ್ರಾಮಾಭಿವೃದ್ಧಿ ಮಂಡಳಿ ಗ್ರಾಮದ ರೈತಾಪಿ ವರ್ಗದವರ ಒಳಿತಿಗಾಗಿ ದುಡಿಯುತ್ತಿದೆ. ಮರಣನಿಧಿ ಸ್ಥಾಪಿಸಲಾಗಿದೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ, ಮನೆಯ ಶುಭಕಾರ್ಯಗಳಿಗೆ ಸಾಲಸೌಲಭ್ಯ ನೀಡಲಾಗುತ್ತದೆ. ಬಹಿಷ್ಕಾರದ ಆರೋಪ ಮಾಡಿರುವ ಗಿರೀಶ್ ಕೂಡ ಫಲಾನುಭವಿಯಾಗಿದ್ದಾರೆ. ಇಂತಹ ನಿರಾಧಾರ ಆರೋಪಗಳನ್ನು ಯಾರೂ ಮಾಡಬಾರದು ಎಂದರು.

ಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಹೆಚ್.ಕೆ. ತ್ರಿಶೂಲ್, ಕಾಯದರ್ಶಿ ಹೆಚ್.ಜೆ. ಶರತ್, ಗ್ರಾಮಸ್ಥರಾದ ರಮೇಶ್, ಸತೀಶ್ ಇದ್ದರು.