ಕಣಿವೆ, ಏ. ೧೯: ಏಪ್ರಿಲ್ ಮೂರನೇ ವಾರವಾದರೂ ಕೂಡ ಈ ಸಲ ಮಳೆಯ ಲಕ್ಷಣವೇ ಗೋಚರಿಸುತ್ತಿಲ್ಲ. ದಿನೇ ದಿನೇ ತಾಪಮಾನ ಏರುತ್ತಲೇ ಇದೆ. ಮಳೆಯನ್ನು ನಂಬಿ ಶುಂಠಿ ಬಿತ್ತನೆಗೈದ ಕೃಷಿಕರಿಗೆ ಉರಿಬಿಸಿಲ ತಾಪ ಒಂದೆಡೆಯಾದರೆ, ಬಿತ್ತನೆ ಮಾಡಿದ ಶುಂಠಿಗೆ ನೀರಿಲ್ಲದೇ ಒಣಗುವ ಭೀತಿ ಮತ್ತೊಂದೆಡೆ ಆವರಿಸಿದೆ. ಖರ್ಚು ಮಾಡಿದ ಹಣ ಎಲ್ಲಿ ಅಪವ್ಯಯವಾಗುತ್ತೋ ಎಂಬ ಚಿಂತೆಯೂ ಕಾಡುತ್ತಿದೆ. ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತದೆ ಎಂಬ ನಾಣ್ಣುಡಿಯನ್ನು ಇದೀಗ ಧರೆಯನ್ನು ಸುಡುತ್ತಿರುವ ಬಿಸಿಲು ಸುಳ್ಳು ಮಾಡುತ್ತಿದೆ.

ಕಳೆದ ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಬಿತ್ತನೆ ಮಾಡಿದ ಕೃಷಿಕರ ಶುಂಠಿ ಬಿತ್ತನೆಗೆ ಇದುವರೆಗೂ ಮಳೆಯ ಹನಿ ಸ್ಪರ್ಶಿಸಿಲ್ಲ. ಅಲ್ಲಲ್ಲಿ ಹಳ್ಳ-ಕೊಳ್ಳಗಳಲ್ಲಿ ಹಾಗೂ ನದಿ ತೀರದಲ್ಲಿದ್ದ ಜಲಮೂಲಗಳು ಬತ್ತಿ ಹೋಗುತ್ತಿರುವ ಕಾರಣ ಪರ್ಯಾಯ ನೀರಿನ ವ್ಯವಸ್ಥೆಯೇ ಇಲ್ಲದಿರುವುದು ಒಂದೆಡೆಯಾದರೆ, ಅಲ್ಲಲ್ಲಿ ಹೊಲ-ಗದ್ದೆ, ತೋಟಗಳಲ್ಲಿ ಈಗಾಗಲೇ ತೋಡಿದ್ದಂತಹ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಪಾತಕ್ಕಿಳಿಯುತ್ತಿದೆ.

ಇರುವ ನೀರನ್ನಾದರೂ ಒಣಗುತ್ತಿರುವ ಶುಂಠಿ ಬಿತ್ತನೆ ಮಾಡಿರುವ ಹೊಲ-ಗದ್ದೆಗಳಿಗೆ ಹಾಯಿಸೋಣ ಎಂದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬAತೆ ವಿದ್ಯುತ್ ಸಂಪರ್ಕ ಆಗಾಗ್ಗೆ ಕಡಿತವಾಗುತ್ತಿರುವ ಬಗ್ಗೆಯೂ ಕೃಷಿಕರು ಚೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಬಿತ್ತನೆ ಮಾಡಿರುವ ಶುಂಠಿ ಬೀಜ ಮೊಳಕೆಯೊಡೆದು ಒಂದೆರಡು ಗರಿಗಳು ಮೇಲೆ ಒಡ ಮೂಡುತ್ತಿವೆಯಾದರೂ ಅವುಗಳನ್ನು ತಣಿಸಲು ಪೂರಕವಾದ ನೀರಿನ ವ್ಯವಸ್ಥೆಯೇ ಇಲ್ಲದೇ ಮೊಳಕೆಯೊಡೆದ ಬೀಜ ಒಣಗುವ ಸ್ಥಿತಿ ನಿರ್ಮಾಣವಾಗಿದ್ದು, ಶುಂಠಿ ಬೆಳೆಗೆ ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಿದ್ದ ಕೃಷಿಕನ ಬದುಕು ನಿರ್ನಾಮದತ್ತ ಸಾಗಿದೆ.

ಈ ವಾಣಿಜ್ಯ ಬೆಳೆ ಶುಂಠಿ ಬೆಳೆಗೆ ಬಿತ್ತನೆ ದಿನದಿಂದ ಕಟಾವಿನತನಕವೂ ಎಗ್ಗಿಲ್ಲದೇ ನೀರಿನಾಂಶವನ್ನು ಸುಸ್ಥಿತಿಯಲ್ಲಿ ನಿರ್ವಹಿಸಬೇಕು. ನೀರಿನಾಂಶ ಕಡಿಮೆ ಆದರೆ ಈ ಬೆಳೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಹಾಗಾಗಿ ಈ ಬಾರಿ ಧರೆಯನ್ನು ಸುಡುತ್ತಿರುವ ಸೂರ್ಯನ ತಾಪ ಶುಂಠಿ ಕೃಷಿಕನ ನೆಮ್ಮದಿಯನ್ನು ಸುಡುತ್ತಿದೆ.

ಕೂಡಲೇ ಮಳೆ ಸುರಿದು ಭೂಮಿಯ ತಾಪಮಾನವನ್ನು ಕಡಿಮೆ ಮಾಡದೇ ಇದ್ದಲ್ಲಿ ಅಲ್ಲಲ್ಲಿ ಇರುವ ಕೊಳವೆ ಬಾವಿಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ.

ಹತ್ತು ದಿನಗಳಲ್ಲಿ ಮಳೆ ಸುರಿಯದೇ ಇದ್ದಲ್ಲಿ ಜನ ಹಾಗೂ ಜಾನುವಾರುಗಳಿಗೂ ಕುಡಿವ ನೀರಿಗೆ ತತ್ವಾರ ಬಂದರೂ ಅಚ್ಚರಿಪಡಬೇಕಿಲ್ಲ.

- ಕೆ.ಎಸ್. ಮೂರ್ತಿ