ಮಡಿಕೇರಿ, ಏ. ೧೩: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮಡಿಕೇರಿ ಕ್ಷೇತ್ರದಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಅಭ್ಯರ್ಥಿ ಅಮೀನ್ ಮೊಹಿಸಿನ್ ಇಂದು ನಾಮಪತ್ರ ಸಲ್ಲಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ. ಯತೀಶ್ ಉಲ್ಲಾಳ ಅವರಿಗೆ ಪಕ್ಷದ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ಪ್ರಧಾನ ಕಾರ್ಯದರ್ಶಿ ಬಷೀರ್ ಅಹಮ್ಮದ್, ಉಪಾಧ್ಯಕ್ಷೆ ನಾಗರತ್ನ, ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ ಅವರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು. ಬಳಿಕ ಚುನಾವಣಾಧಿಕಾರಿ ಯತೀಶ್ ನಾಮಪತ್ರ ಕ್ರಮಬದ್ಧವಾಗಿದೆಯೆ ಎಂದು ಅಭ್ಯರ್ಥಿ ಎದುರು ಪರಿಶೀಲನೆ ನಡೆಸಿದರು.
ಇದಕ್ಕೂ ಮುನ್ನ ನಗರದ ಮಹದೇವಪೇಟೆ ಎ.ವಿ. ಶಾಲೆಯಿಂದ ನೂರಾರು ಬೆಂಬಲಿಗರೊAದಿಗೆ ಮೆರವಣಿಗೆ ಮೂಲಕ ನಗರದ ಮುಖ್ಯಬೀದಿಯಲ್ಲಿ ತೆರಳಿ ಗಾಂಧಿಮೈದಾನದಲ್ಲಿ ಕೊನೆಗೊಂಡಿತು. ಈ ಸಂದರ್ಭ ಅಮೀನ್ ಪರ ಜಯಘೋಷಗಳು ಕೇಳಿಬಂದವು.
ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ
(ಮೊದಲ ಪುಟದಿಂದ) ಮಾತನಾಡಿದ ಅಮೀನ್ ಮೊಹಿಸಿನ್, ಜನಪರ ಆಡಳಿತ, ಜನಸಾಮಾನ್ಯ ಅಭ್ಯರ್ಥಿಯನ್ನು ಮತದಾರ ಬಯಸಿದ್ದು, ಸೂಕ್ತ ಅಭ್ಯರ್ಥಿ ಕಣಕ್ಕಿಳಿದರೆ ಜನ ನಿಶ್ಚಿತವಾಗಿ ಬೆಂಬಲಿಸಲಿದ್ದಾರೆ ಎಂಬ ದೃಢ ನಿಲುವಿನೊಂದಿಗೆ ತಾನು ಸ್ಪರ್ಧಿಸುತ್ತಿದ್ದೇನೆ. ನೆಮ್ಮದಿಯ ಬದುಕು, ಮೂಲಭೂತ ಸೌಕರ್ಯ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಲವು ಬೇಡಿಕೆಗಳು ಕ್ಷೇತ್ರದ ಜನರಲ್ಲಿದೆ. ನನ್ನನ್ನು ಜನ ಕೈಹಿಡಿಯುತ್ತಾರೆ. ಎಲ್ಲರ ಬೆಂಬಲದೊAದಿಗೆ ತಾನು ವಿಧಾನಸಭೆ ಪ್ರವೇಶಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ಆಡಳಿತದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗಿ ಎಸ್.ಡಿ.ಪಿ.ಐ ಸರಕಾರ ರಚನೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಈಗಾಗಲೇ ೧೯ ಕ್ಷೇತ್ರಗಳಲ್ಲಿ ಪಕ್ಷದ ಹುರಿಯಾಳುಗಳು ಸ್ಪರ್ಧಿಸುತ್ತಿದ್ದು, ಮತ್ತಷ್ಟು ಕ್ಷೇತ್ರಗಳಲ್ಲಿ ಅಭ್ಯರ್ಥಿಯ ಘೋಷಣೆಯಾಗಲಿದೆ. ನಾನು ಕೇವಲ ಅಲ್ಪಸಂಖ್ಯಾತ ಅಭ್ಯರ್ಥಿ ಅಲ್ಲ. ಎಲ್ಲಾ ವರ್ಗದ ಜನರ ಪರ ಇದ್ದೇನೆ. ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸುತ್ತಿದ್ದೇನೆ. ಅಲ್ಪಸಂಖ್ಯಾತ ಒಲವು ತನ್ನ ಮೇಲೆ ಹೆಚ್ಚಿರಬಹುದು. ಆದರೆ, ಬೇರೆ ಸಮುದಾಯದ ಬೆಂಬಲ ಇಲ್ಲ ಎಂಬ ಕಲ್ಪನೆ ತಪ್ಪು. ಅಲ್ಪಸಂಖ್ಯಾತರ ಮತ ಛಿದ್ರಮಾಡಲು ತಾನು ಸ್ಪರ್ಧಿಸುತ್ತಿಲ್ಲ. ಗೆಲ್ಲುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದೇನೆ. ಪ್ರಬಲ ಸ್ಪರ್ಧೆ ಒಡ್ಡುತ್ತೇನೆ. ಎಸ್.ಡಿ.ಪಿ.ಐ. ಸ್ಪರ್ಧೆ ಬಿಜೆಪಿಗೆ ಯಾವುದೇ ರೀತಿಯೂ ಲಾಭವಾಗುವುದಿಲ್ಲ. ನಮ್ಮ ಪಕ್ಷ ಶ್ರೀಸಾಮಾನ್ಯ ಪರ ಇದೆ. ಹಲವು ಜನಪರ ಹೋರಾಟದಲ್ಲಿ ಗೆದ್ದಿದ್ದೇವೆ. ಇದೀಗ ಬ್ಯಾಲೆಟ್ ಹೋರಾಟದಲ್ಲಿ ಗೆಲ್ಲುತ್ತೇವೆ. ಹೊಂದಾಣಿಕೆ ರಾಜಕಾರಣವನ್ನು ಎಂದಿಗೂ ಮಾಡಿಲ್ಲ. ಮುಂದೆಯೂ ಮಾಡಲ್ಲ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಅಮೀನ್ ಸ್ಪಷ್ಟಪಡಿಸಿದರು. ಕೋಶಾಧಿಕಾರಿ ಮನ್ಸೂರ್ ಅಲಿ, ನಗರಾಧ್ಯಕ್ಷ ರಿಜ್ವಾನ್, ಕುಶಾಲನಗರ ಅಧ್ಯಕ್ಷ ಜಕ್ರಿಯಾ ಸೇರಿದಂತೆ ಇನ್ನಿತರರು ಹಾಜರಿದ್ದರು.