ಮಡಿಕೇರಿ, ಏ. ೬: ರಾಜ್ಯ ವಿಧಾನಸಭಾ ಚುನಾವಣೆಗೆ ಈ ಬಾರಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಡಾ|| ಮಂಥರ್‌ಗೌಡ ಅವರ ಹೆಸರನ್ನು ಪಕ್ಷ ಅಖೈರುಗೊಳಿಸಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಇಂದು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ೪೨ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಈ ಪಟ್ಟಿಯಲ್ಲಿ ಮಡಿಕೇರಿ ಕ್ಷೇತ್ರದಿಂದ ಡಾ|| ಮಂಥರ್‌ಗೌಡ ಅವರಿಗೆ ಪಕ್ಷ ಮಣೆ ಹಾಕಿದೆ. ೨೦೨೧ ಕೊಡಗು ಜಿಲ್ಲೆಯಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಡಾ|| ಮಂಥರ್‌ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಮೂಲಕ ಕೊಡಗು ಜಿಲ್ಲೆಗೆ ಅಚ್ಚರಿಯ ‘ಎಂಟ್ರಿ’ ಕೊಟ್ಟಿದ್ದರು. ಬಿಜೆಪಿಯ ಸುಜಾ ಕುಶಾಲಪ್ಪ ಅವರಿಗೆ ಪ್ರಬಲ ಸ್ಪರ್ಧೆ ನೀಡಿ ಪರಾಭವಗೊಂಡರೂ ಮಂಥರ್‌ಗೌಡ ಯಾರೂ ನಿರೀಕ್ಷಿಸದ ಮಾದರಿಯಲ್ಲಿ ಪ್ರಬಲ ಸ್ಪರ್ಧೆ ನೀಡುವ ಮೂಲಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದರು.

ಈ ಸೋಲಿನ ನಂತರವೂ ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿ ಅದರಲ್ಲೂ ಮಡಿಕೇರಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ವಿಧಾನಸಭೆಗೆ ಅಭ್ಯರ್ಥಿ ಎಂಬದಾಗಿಯೇ ಪ್ರತಿಬಿಂಬಿತರಾಗಿದ್ದರು.

(ಮೊದಲ ಪುಟದಿಂದ) ಕಾಂಗ್ರೆಸ್‌ನ ಹಲವು ಮಂದಿ ಆಕಾಂಕ್ಷಿಗಳ ನಡುವೆಯೂ ಪಕ್ಷ ಮತ್ತೆ ಮಂಥರ್‌ಗೇ ಅವಕಾಶ ನೀಡಿರುವುದು ಗಮನಾರ್ಹವಾಗಿದೆ.

ಕೊಡಗಿನ ನಂಟು ಹೊಂದಿದ್ದರೂ ಮೂಲತಃ ಹಾಸನ ಜಿಲ್ಲೆಯವರಾದ ಇವರು, ಮಾಜಿ ಸಚಿವ ಎ. ಮಂಜು ಅವರ ಪುತ್ರರಾಗಿದ್ದಾರೆ. ಪ್ರಸ್ತುತ ಮಂಜು ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವುದು ವಿಶೇಷವಾಗಿದೆ. ಇವರು ಜೆಡಿಎಸ್ ಪಕ್ಷದಿಂದ ಅರಕಲಗೋಡು ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ ಎಂಬದು ಚರ್ಚೆಯಲ್ಲಿದೆಯಾದರೂ ಅಂತಿಮ ನಿರ್ಧಾರವಾಗಿಲ್ಲ. ವೃತ್ತಿಯಲ್ಲಿ ವೈದ್ಯರೂ ಆಗಿರುವ ಮಂಥರ್‌ಗೌಡ ೨೦೧೬ರಲ್ಲಿ ಹಾಸನ ರಾಮನಾಥಪುರ ಕ್ಷೇತ್ರದ ಜಿ.ಪಂ. ಸದಸ್ಯರೂ ಆಗಿದ್ದರು.

ಶೈಕ್ಷಣಿಕ ಹಿನ್ನೆಲೆ, ಸಂಘಟನಾ ಚತುರತೆ ತನಗೆ ಪಕ್ಷದಲ್ಲಿ ವೇದಿಕೆ ಸಿಗಲು ಕಾರಣವಾಗಿದೆ. ಈಗಾಗಲೇ ಸಾಕಷ್ಟು ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿರುವುದು ತಮಗೆ ಸ್ಪರ್ಧೆಗೆ ನೆರವಾಗಲಿದೆ ಎಂಬ ಅಭಿಪ್ರಾಯ ಇವರದ್ದಾಗಿದೆ. ಕೊಡಗಿನಲ್ಲಿಯೂ ಅನೇಕ ಕಾರ್ಯಕ್ರಮಗಳು, ಕ್ರೀಡಾ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುತ್ತ ಬಂದಿರುವ ಮಂಥರ್‌ಗೌಡ ಅವರು ಹಾಸನದಲ್ಲಿಯೂ ಅನೇಕ ವೈದ್ಯಕೀಯ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ತನ್ನ ಸೇವೆಯನ್ನು ಪಕ್ಷದ ನೆಲೆಗಟ್ಟಿನಲ್ಲಿ ಮುಂದುವರಿಸುವುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.