ಕೂಡಿಗೆ, ಏ. ೫: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ನೀರಿನ ಮಟ್ಟ ಈ ಬಾರಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ.

ಕಳೆದ ವರ್ಷಗಳಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮಳೆ ಬಿದ್ದ ಹಿನ್ನೆಲೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಹೆಚ್ಚಾಗಿತ್ತು. ಆದರೆ ಈ ಸಾಲಿನಲ್ಲಿ ಏಪ್ರಿಲ್ ತಿಂಗಳು ಪ್ರಾರಂಭವಾದರೂ ಸಹ ಮಳೆ ಬೀಳದಿರುವುದರ ಹಿನ್ನೆಲೆ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಕೆರೆಕಟ್ಟೆಗಳ ತುಂಬಿಸುವ ಮೂಲಕ ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಮತ್ತು ಕಾವೇರಿ ನದಿಯಲ್ಲಿ ನೀರಿನ ಮಟ್ಟ ಭಾರೀ ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗೂ ಸಹ ಹಾರಂಗಿಯ ಅಣೆಕಟ್ಟೆಯ ನೀರನ್ನು ಹಾರಿಸಲಾಗಿದೆ. ಇದರಿಂದಾಗಿ ಅಣೆಕಟ್ಟೆಯ ಹಿಂಭಾಗದಲ್ಲಿ ಸಂಗ್ರಹವಿರುವ ನೀರು ಸಣ್ಣ ಪ್ರಮಾಣದಲ್ಲಿದೆ.

ಅಣೆಕಟ್ಟೆಯ ಸಂಗ್ರಹ ಮಟ್ಟವು ೨೮೨೨.೧೬, ಅಡಿ, ಇಂದಿನ ಅಣೆಕಟ್ಟೆಯ ನೀರಿನ ಸಾಮರ್ಥ್ಯ ೨,೮೬೫೭೮ ಟಿ.ಎಂ.ಸಿ. ಆದರೆ, ಇಂದಿನ ನೀರಿನ ಸಂಗ್ರಹ ಮಟ್ಟ ೨,೧೧೫೩೧ ಟಿ.ಎಂ.ಸಿ. ಆಗಿದೆ. ಆದರೆ ಕಳೆದ ವರ್ಷದಲ್ಲಿ ಇದೇ ದಿನಗಳಲ್ಲಿ ೪,೮೫೧೩೪ ಟಿ.ಎಂ.ಸಿ. ನೀರಿನ ಸಂಗ್ರಹವಿತ್ತು. ಈ ಸಾಲಿನಲ್ಲಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳದ ಕಾರಣದಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹದ ಮಟ್ಟ ಈ ಬಾರಿ ಎರಡು ಟಿ.ಎಂ.ಸಿ.ಗೂ ಅಧಿಕ ಕಡಿಮೆಯಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ.