(ವರದಿ : ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಏ. ೪: ವಿಧಾನಸಭೆಯ ಚುನಾವಣೆಯ ಬಿರುಸು ಹೆಚ್ಚಿದೆೆಯಾದರೂ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿನ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಸದ್ಯದ ಮಟ್ಟಿಗೆ ‘ಅಭ್ಯರ್ಥಿಗಳು ಯಾರು..? ಎಂಬದೇ ಪ್ರಶ್ನೆಯಾಗಿ ಮುಂದುವರಿದಿದ್ದು, ರಾಜಕೀಯ ಸಮರ ಹೇಗಿರಲಿದೆ’ ಎಂಬ ಬಗ್ಗೆ ಜನತೆ ಊಹಿಸುವುದು ಕಷ್ಟವಾಗಿದೆ.

ಮಾರ್ಚ್ ೨೯ ರಂದು ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದ್ದು, ಏಪ್ರಿಲ್ ೧೩ ರಂದು ಅಧಿಸೂಚನೆ ಹೊರಬೀಳಲಿದೆ. ಸದ್ಯದ ಮಟ್ಟಿಗೆ ವೀರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಮಾತ್ರ ಅಧಿಕೃತಗೊಂಡಿದೆ. ಇದೇ ಕ್ಷೇತ್ರದಿಂದ ಮತ್ತೊಂದು ಪ್ರಬಲ ಪಕ್ಷವಾಗಿರುವ ಬಿಜೆಪಿಯ ಅಭ್ಯರ್ಥಿ ಯಾರೆಂಬದು ಇನ್ನೂ ಅಂತೆ... ಕಂತೆಯಲ್ಲೇ ಇರುವುದರಿಂದ ಇಲ್ಲಿನ ಹಣಾಹಣಿ ಹೇಗಿರಬಹುದೆಂಬ ಬಗ್ಗೆ ಖಚಿತವಾಗಿ ಜನರು ಅವಲೋಕಿಸುವುದು ಸಾಧ್ಯವಾಗುತ್ತಿಲ್ಲ.

ಸದ್ಯದ ಮಟ್ಟಿಗೆ ರಾಜ್ಯದಲ್ಲಿ ವೀರಾಜಪೇಟೆ ಕ್ಷೇತ್ರವೂ ಗಮನ ಸೆಳೆಯುತ್ತಿವೆ. ಕಾಂಗ್ರೆಸ್‌ನಿAದ ವಕೀಲ ಎ.ಎಸ್. ಪೊನ್ನಣ್ಣ ಅವರು ಕಾಂಗ್ರೆಸ್‌ನ ಮೊದಲ ಪಟ್ಟಿಯಲೇ ಅವಕಾಶ ಗಿಟ್ಟಿಸಿಕೊಂಡಿದ್ದು, ಇವರ ಪ್ರಚಾರ ಬಿರುಸುಗೊಳ್ಳುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ನೇರ ಸ್ಪರ್ಧೆ ಖಚಿತವಾಗಿದ್ದರೂ ಬಿಜೆಪಿ ಅಭ್ಯರ್ಥಿ ಯಾರೆಂಬದು ಪ್ರಕಟವಾಗದಿರುವುದು ಜನತೆಯ ನಿರೀಕ್ಷೆಗೆ ‘ಬ್ರೇಕ್’ ಹಾಕಿದಂತಿದೆ.

ಹಾಲಿ ಶಾಸಕ ಕೆ.ಜಿ. ಬೋಪಯ್ಯ ಅವರೇ ಮತ್ತೆ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಒಂದೆಡೆಯಾದರೆ ಮತ್ತೊಂದೆಡೆ ಅಭ್ಯರ್ಥಿ ಬದಲಾವಣೆ ಖಚಿತವಾಗಿದ್ದು, ಹೊಸಮುಖಕ್ಕೆ ಅವಕಾಶ ನೀಡಲಾಗುತ್ತದೆ ಎಂಬ ಪ್ರಬಲ ಚರ್ಚೆಯೂ ಇರುವುದು ಚುನಾವಣಾ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಮನು ಸೋಮಯ್ಯ ಸ್ಪರ್ಧೆ ಖಚಿತ ಎನ್ನಲಾಗಿದೆ. ಜೆಡಿಎಸ್ ಪಕ್ಷವೂ ವೀರಾಜಪೇಟೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದಲ್ಲದೆ ಇನ್ನೂ ಕೆಲವರು ಸ್ಪರ್ಧೆ ಮಾಡಲಿದ್ದಾರೆ. ಏನೇ ಆದರೂ ಇಲ್ಲಿ ಪೈಪೋಟಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಎಂಬದರಲ್ಲಿ ಎರಡು ಮಾತಿಲ್ಲ.

ಮಡಿಕೇರಿ ಕ್ಷೇತ್ರ

ಮಡಿಕೇರಿ ಕ್ಷೇತ್ರದಲ್ಲಿಯೂ ಈ ತನಕ ಯಾವುದೇ ತೀರ್ಮಾನವಾಗಿಲ್ಲ. ಕಾಂಗ್ರೆಸ್ ವೀರಾಜಪೇಟೆಗೆ ಅಭ್ಯರ್ಥಿ ಘೋಷಿಸಿದ್ದರೂ ಮಡಿಕೇರಿ ಕ್ಷೇತ್ರದ ನಿರ್ಧಾರವಾಗಿಲ್ಲ. ಕಾಂಗ್ರೆಸ್‌ನಲ್ಲೇ ಹಲವರು ಆಕಾಂಕ್ಷಿಗಳಿರುವುದರಿAದ ಇದು ಇನ್ನೂ ಚರ್ಚೆಯಲ್ಲೇ ಇದೆ. ಇದೀಗ ಚಂದ್ರಮೌಳಿ, ಮಂಥರ್‌ಗೌಡ ಹಾಗೂ ಜೀವಿಜಯ ಅವರುಗಳ ಹೆಸರುಗಳಿವೆ.

(ಮೊದಲ ಪುಟದಿಂದ) ಬಿಜೆಪಿಯಿಂದಲೂ ಅಂತೆ ಕಂತೆಯದ್ದೇ ಮಾತಾಗಿದೆ. ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರಿಗೇ ಟಿಕೆಟ್ ಎಂಬ ನಿರೀಕ್ಷೆಯ ನಡುವೆ ಇಲ್ಲಿಯೂ ಈ ಬಾರಿ ಅಭ್ಯರ್ಥಿ ಬದಲಾವಣೆಯ ಸುದ್ದಿಯು ಕೇಳಿಬರುತ್ತಿದೆ.

ಇಲ್ಲಿಯೂ ಅಸ್ಪಷ್ಟತೆಯೇ ಸದ್ಯಕ್ಕೆ ಮುಂದುವರಿದಿದೆ. ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪ ಅಭ್ಯರ್ಥಿ ಎಂಬದು ಚರ್ಚೆಯಲ್ಲಿದ್ದರೂ ಇದೂ ಅಧಿಕೃತಗೊಂಡಿಲ್ಲ. ಆದರೆ ಮಡಿಕೇರಿ ಕ್ಷೇತ್ರದಿಂದ ಎಸ್‌ಡಿಪಿಐನಿಂದ ಅಮೀನ್ ಮೊಹಿಸಿನ್, ಸಿಪಿಐನಿಂದ ಸೋಮಪ್ಪ, ಬಿಎಸ್‌ಪಿಯಿಂದ ದಿವಿಲ್‌ಕುಮಾರ್, ಆಪ್‌ನಿಂದ ಸಾಯಿಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂಬದು ಸದ್ಯಕ್ಕೆ ಖಚಿತವಾಗಿದೆ. ಇವರುಗಳ ಸ್ಪರ್ಧೆ ಇದ್ದರೂ, ಇರದಿದ್ದರೂ ನೇರ ಸ್ಪರ್ಧೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮಾತ್ರ. ಜೆಡಿಎಸ್‌ನ ಅಭ್ಯರ್ಥಿ ವಿಚಾರ ಇಲ್ಲಿ ತ್ರಿಕೋನ ಸ್ಪರ್ಧೆ ಎದುರಾಗಲಿದೆಯೇ ಎಂಬದನ್ನು ನಿರ್ಧರಿಸಲಿದೆ. ಸದ್ಯಕ್ಕೆ ಇಂದು... ನಾಳೆ... ನಾಡಿದ್ದು, ಎಂಬ ಕುತೂಹಲದಲ್ಲಿಯೇ ಜಿಲ್ಲೆಯ ರಾಜಕೀಯ ಸಾಗುತ್ತಿದೆ.