ಭಾಗಮಂಡಲ, ಏ. ೪: ಶಿಕ್ಷಣ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹರಿದು
ಹಂಚಿ ಹೋಗಿರುವ ಜನಾಂಗ ಬಾಂಧವರು
ಒಗ್ಗೂಡಲು ಕ್ರೀಡಾಕೂಟಗಳು ಸಹಕಾರಿ ಆಗಿವೆ ಎಂದು ಮಕ್ಕಳ ತಜ್ಞ ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಹೇಳಿದರು. ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಕುದುಕುಳಿ ಐನ್ಮನೆ ಕ್ರಿಕೆಟ್ ಕಪ್ ೨೦೨೩ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಅರೆಭಾಷೆ ಗೌಡರ ಸಂಖ್ಯೆ ಕೊಡಗಿನಲ್ಲಿ ಅಧಿಕ ಇದ್ದು ಜನಾಂಗದವರು ತಮ್ಮ ಶಕ್ತಿಯನ್ನು ಅರಿತುಕೊಂಡಾಗ ಉತ್ತಮ ಕ್ರೀಡಾಕೂಟವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಲು ಸಾಧ್ಯ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಟ್ರೋಫಿಯನ್ನು ಅನಾವರಣಗೊಳಿಸಿ ಮಾತನಾಡಿ, ಕೌಟುಂಬಿಕ ಪಂದ್ಯಾಟಗಳು ಜನಾಂಗವನ್ನು ಒಗ್ಗೂಡಿಸಲು ಒಂದು ಉತ್ತಮ ವೇದಿಕೆ ಎಂದರು.
ಕಾವೇರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಆನೆರ ಜಾನಕಿ ಮೋಹನ್ ಮಾತನಾಡಿ, ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯುವಜನರು ಹಿಂದೇಟು ಹಾಕಬಾರದು ಪ್ರತಿಯೊಂದು ರಂಗದಲ್ಲಿ ತೊಡಗಿಸಿಕೊಳ್ಳಬೇಕು.
ಸಂಘಟನೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ವೆಂದಾದರೆ ಸಂಘಟಕರಿಗೆ ಸಂಪೂರ್ಣ ಬೆಂಬಲ ನೀಡುವ ಪ್ರೋತ್ಸಾಹ ನೀಡುವ ಕಾರ್ಯ ಆಗಬೇಕು. ಕ್ರೀಡಾ ಕೂಟದಂತಹ ಜನಪರ ಕೆಲಸ ಕಾರ್ಯಗಳು ಜನ ಮಾನಸದಲ್ಲಿ ಉಳಿಯಬೇಕಾದರೆ ಸ್ಮರಣೆ ಸಂಚಿಕೆಯನ್ನು ಹೊರ ತರುವ ಅಗತ್ಯವಿದೆ.
(ಮೊದಲ ಪುಟದಿಂದ) ಪ್ರತಿಯೊಂದು ಕ್ರೀಡಾಕೂಟದ ವಿವರಗಳು ದಾಖಲಾದಲ್ಲಿ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದಂತಾಗುತ್ತದೆ. ಯುವಕರು ಮನಸ್ಸು ಮಾಡಿದರೆ ಎಂತಹ ಕೆಲಸವನ್ನು ಸಂಘಟಿಸಬಲ್ಲರು. ಸಾಮರಸ್ಯ ಸಹಕಾರ ಮನೋಭಾವನೆ ಬೆಳೆಯಲು ಕ್ರೀಡಾಕೂಟಗಳು ಸಹಕಾರಿಯಾಗಲಿದೆ ಎಂದರು. ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಉದ್ಘಾಟನಾ ಪಂದ್ಯಕ್ಕೆ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿದರು.
ಕುದುಕುಳಿ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಕುದುಕುಳಿ ಅಕ್ಷಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುದುಕುಳಿ ಕುಟುಂಬದ ಪಟ್ಟೆದಾರ ಕುದುಕುಳಿ ಯು. ಕೃಷ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುದುಕುಳಿ ಕುಟುಂಬ ಸಂಘದ ಅಧ್ಯಕ್ಷ ಕುದುಕುಳಿ ಬಿ. ಮೋಹನ್, ಕೆದಂಬಾಡಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆದಂಬಾಡಿ ಜಯಪ್ರಕಾಶ್, ಕೊಡಗು ಗೌಡ ಯುವ ವೇದಿಕೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಕುದುಕುಳಿ ಕ್ರಿಕೆಟ್ ಸಮಿತಿ ಸಲಹೆಗಾರ ಕುದುಕುಳಿ ಜೆ. ಭರತ್ ಉಪಸ್ಥಿತರಿದ್ದರು. ಕುದುಕುಳಿ ಕಿಶೋರ್ ಸ್ವಾಗತಿಸಿದರು. ಕುದುಕುಳಿ ಚೈತ್ರಾ ಅಶ್ವಥ್ ಕಾರ್ಯಕ್ರಮವನ್ನು ನಿರೂಪಿಸಿದರು. ಕುದುಕುಳಿ ದಿವ್ಯಚಿಂತನ್ ಪ್ರಾರ್ಥಿಸಿದರು.
ಕೊಡಗು ಗೌಡ ಯುವ ವೇದಿಕೆ ಹಾಗೂ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ೧೦ ದಿನಗಳ ಕಾಲ ಗೌಡ ಕುಟುಂಬಗಳ ನಡುವೆ ಪಂದ್ಯಾಟ ನಡೆಯಲಿದೆ.
ಫಲಿತಾಂಶ
ಕೊಡಗು ಗೌಡ ಯುವ ವೇದಿಕೆ ಹಾಗೂ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಪ್ರದರ್ಶನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಡಗು ಗೌಡ ಯುವ ವೇದಿಕೆ ನಾಲ್ಕು ಓವರ್ನಲ್ಲಿ ೪೨ ರನ್ ಗಳಿಸಿದರೆ ಉತ್ತರವಾಗಿ ಆಡಿದ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ೩.೪ ಓವರ್ನಲ್ಲಿ ಎಂಟು ವಿಕೆಟ್ ಗಳ ಜಯ ಸಾಧಿಸಿತು.
ಕೋಚನ ಮತ್ತು ಬಾರಿಕೆ ತಂಡಗಳ ನಡುವೆ ಮೊದಲ ಪಂದ್ಯ ನಡೆಯಿತು .ಬಾರಿಕೆ ತಂಡ ೬ ವಿಕೆಟ್ ನಷ್ಟಕ್ಕೆ ೫೨ ರನ್ ಗಳಿಸಿತು. ಕೋಚನ ತಂಡ ೪೫ ರನ್ ಗಳಿಸಿ ೧೨ ರನ್ಗಳ ಸೋಲನ್ನು ಅನುಭವಿಸಿತು.
ಇಳಂದಿಲ ಮತ್ತು ಮೇಲ್ ಚೆಂಬು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಲ್ ಚೆಂಬು ತಂಡ ೬ ವಿಕೆಟ್ ನಷ್ಟಕ್ಕೆ ೫೪ ರನ್ ಗಳಿಸಿದರೆ ಇಳಂದಿಲ ತಂಡ ೫ ಓವರ್ನಲ್ಲಿ ೫೪ ರನ್ ಗಳಿಸಿ ಜಯಸಾಧಿಸಿತು.
ಮುಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುದುಕುಳಿ (ಸಿ) ತಂಡ ೪೩ ರನ್ ಗಳಿಸಿದರೆ ಆಮೆ ಮನೆ ತಂಡ ಎರಡು ವಿಕೆಟ್ ನಷ್ಟಕ್ಕೆ ಜಯಭೇರಿ ಬಾರಿಸಿತು. ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾರಿಕೆ ತಂಡ ಎರಡು ಓವರ್ನಲ್ಲಿ ೨೭ ರನ್ ಗಳಿಸಿತು ಉತ್ತರವಾಗಿ ಆಡಿದ ಇಳಂದಿಲ ಮೂರು ಓವರ್ನಲ್ಲಿ ಗುರಿ ಸಾಧಿಸಿ ವಿಜಯವಾಯಿತು
ಆಮೆಮನೆ ಮತ್ತು ಇಳಂದಿಲ ತಂಡಗಳ ನಡುವೆ ನಡೆದ ಪ್ರ್ರೀ ಕ್ವಾಟರ್ ಫೈನಲ್ ಪಂದ್ಯದಲ್ಲಿ ಆಮೆಮನೆ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ ೫೩ ರನ್ ಗಳಿಸಿದ್ದು ಉತ್ತರವಾಗಿ ಆಡಿದ ಇಳಂದಿಲ ತಂಡ ಎರಡು ವಿಕೆಟ್ ನಷ್ಟಕ್ಕೆ ಗುರಿ ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು. - ಸುನಿಲ್ ಕುಯ್ಯಮುಡಿ