ಶನಿವಾರಸಂತೆ, ಏ. ೪ : ಪಟ್ಟಣಕ್ಕೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದೊಳಗೆ ಲಗ್ಗೆ ಇಡುತ್ತಿದ್ದ ಕಾಡಾನೆಗಳು ಹಾಗೂ ಕಾಟಿಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದೆ.

ಅರಣ್ಯ ಇಲಾಖೆ ರೂ.೧೬ ಲಕ್ಷ ವೆಚ್ಚದಲ್ಲಿ ೨.೨೫ ಮೀಟರ್ ಎತ್ತರ ಹಾಗೂ ೭೫ ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಮಾಡಿ ಒಂದು ತಿಂಗಳಾಗಿದೆ. ಈವರೆಗೂ ಆನೆಗಳು ಗ್ರಾಮದೊಳಗೆ ಕಾಣಿಸಿಕೊಂಡಿಲ್ಲ.

ಸಮೀಪದ ಮಾಲಂಬಿ ಮೀಸಲು ಅರಣ್ಯದಿಂದ ಪಂಚಾಯಿತಿ ವ್ಯಾಪ್ತಿಯ ಹಿರಿಕರ ಗ್ರಾಮದ ಮೂಲಕ ಸಂಚರಿಸುತ್ತಿದ್ದ ವನ್ಯಪ್ರಾಣಿ ಕೂಗೂರು, ಚಿಕ್ಕಾರ ಇತರ ಗ್ರಾಮಗಳಲ್ಲಿ ಬೀಡುಬಿಟ್ಟು ತೋಟ-ಗದ್ದೆಗಳಿಗೆ

(ಮೊದಲ ಪುಟದಿಂದ) ನುಗ್ಗಿ ದಾಂಧಲೆ ಮಾಡಿ ಬೆಳೆ ಹಾನಿ ಮಾಡುತ್ತಿದ್ದವು. ಕಾಡಾನೆಗಳು ಹಾಗೂ ಕಾಟಿಗಳ ಹಾವಳಿಯಿಂದ ಗ್ರಾಮಸ್ಥರು ಕಂಗಾಲಾಗಿದ್ದರು.

ಈ ಹಿಂದೆ ಹಿರಿಕರ ಗ್ರಾಮದ ರೈತ ಮಹಿಳೆಯೊಬ್ಬರ ಕಾಫಿ ತೋಟದ ಅಂಚಿನಲ್ಲಿ ಆನೆಗಳು ಬರುತ್ತಿದ್ದ ಜಾಗ ಗುರುತಿಸಿ ಕಂದಕ ನಿರ್ಮಾಣ ಮಾಡಲಾಗಿತ್ತು. ಮಣ್ಣು ಕುಸಿದು ಕಂದಕ ಮುಚ್ಚಿಹೋದ ನಂತರ ಮತ್ತೆ ಕಾಡಾನೆಗಳ ಸಂಚಾರ ಆರಂಭವಾಗಿತ್ತು. ರೈತರ ಅಳಲಿಗೆ ಸ್ಪಂದಿಸಿದ ಅರಣ್ಯ ಇಲಾಖೆ ನೂತನ ಪ್ರಯೋಗವಾಗಿ ಸಿಮೆಂಟ್ ಪಿಲ್ಲರ್ ತಡೆಗೋಡೆಯನ್ನು ನಿರ್ಮಿಸಿತ್ತು.

ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಮಾತನಾಡಿ, ಜಿಲ್ಲೆಯ ಮಾಕುಟ್ಟ ಭಾಗದಲ್ಲಿ ಪ್ರಾಯೋಗಿಕವಾಗಿ ನಿರ್ಮಿಸಿದ ಸಿಮೆಂಟ್ ಪಿಲ್ಲರ್ ತಡೆಗೋಡೆ ಯಶಸ್ವಿಯಾಗಿದೆ. ಹಿರಿಕರ ಗ್ರಾಮದಲ್ಲೂ ಪ್ರಾಯೋಗಿಕವಾಗಿ ೭೫ ಮೀಟರ್‌ವರೆಗೆ ತಡೆಗೋಡೆ ನಿರ್ಮಾಣವಾಗಿದೆ. ವೆಚ್ಚವೂ ಅಧಿಕವಿಲ್ಲ. ಆನೆಗಳಿಂದ ತಡೆಗೋಡೆ ಉರುಳಿಸಲು ಸಾಧ್ಯವಿಲ್ಲ. ತಡೆಗೋಡೆ ನಿರ್ಮಿಸಿ ತಿಂಗಳಾದರೂ ಆನೆ, ಕಾಟಿಯ ಸುಳಿವಿಲ್ಲ. ಕೂಗೂರು, ಚಿಕ್ಕಾರ ಗ್ರಾಮಗಳಲ್ಲೂ ತಡೆಗೋಡೆ ನಿರ್ಮಾಣ ಮಾಡಲು ನಿರ್ಧರಿಸಿದ್ದು ಇಲಾಖೆ ಅನುಮತಿ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಡಾನೆ, ಕಾಟಿಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ನಿರ್ಮಿಸಿರುವ ಸಿಮೆಂಟ್ ಪಿಲ್ಲರ್ ತಡೆಗೋಡೆಯಿಂದ ರೈತರ ಆತಂಕ ಕಡಿಮೆಯಾಗಿದೆ. ಬೆಳೆ ಹಾನಿಗೆ ಪರಿಹಾರ ಸಿಕ್ಕಂತಾಗಿದೆ ಎಂದು ಕೆಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

ಶ.ಗ. ನಯನತಾರಾ