ಪಾಲಿಬೆಟ್ಟ, ಮಾ. ೨೯: ಪಾಲಿಬೆಟ್ಟ ಚೆಶೈರ್ ಹೋಮ್ ವಿಶೇಷ ಶಾಲಾ ವಾರ್ಷಿಕೋತ್ಸವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಶಾಲಾ ವಾರ್ಷಿ ಕೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶೇಷಚೇತನ ಮಕ್ಕಳಿಗೆ ಆಶ್ರಯ ಕಲ್ಪಿಸುವ ಮೂಲಕ ಶಿಕ್ಷಣದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿರುವ ಶಾಲೆಯ ಆಡಳಿತ ಮಂಡಳಿಯವರ ಸೇವಾ ಕಾರ್ಯ ದೇವರು ಮೆಚ್ಚುವಂತಹ ಕೆಲಸವಾಗಿದ್ದು, ೫೦ಕ್ಕೊ ಹೆಚ್ಚು ಮಕ್ಕಳನ್ನು ಎಲ್ಲಾ ಸೌಲಭ್ಯಗಳೊಂದಿಗೆ ಆರೈಕೆ ಮಾಡುತ್ತಿರುವುದು ಶ್ಲಾಘನೀಯ. ಇಂತಹ ಸೇವಾ ಕಾರ್ಯಗಳಿಗೆ ದಾನಿಗಳು ಕೈಜೋಡಿಸಬೇಕೆಂದರು.

ಚೆಶೈರ್ ಹೋಮ್ ವಿಶೇಷ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚಂಗಪ್ಪ ಮಾತನಾಡಿ, ೨೩ ವರ್ಷಗಳ ಹಿಂದೆ ೬ ವಿದ್ಯಾರ್ಥಿಗಳೊಂದಿಗೆ ಪ್ರಾರಂಭಿಸಿದ ಶಾಲೆಯಲ್ಲಿ ಇದೀಗ ೬೮ ವಿದ್ಯಾರ್ಥಿಗಳಿದ್ದಾರೆ. ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರೊಂದಿಗೆ ಪರಿಸರ ಕಾಳಜಿ, ಕೌಶಲ್ಯ ಅಭಿವೃದ್ಧಿ, ಮರುಬಳಕೆ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಬಟ್ಟೆ, ಪೇಪರ್ ಬ್ಯಾಗ್ ತಯಾರಿಕೆ ಸೇರಿದಂತೆ ಇತರ ತರಬೇತಿಗಳನ್ನು ನೀಡಲಾಗುತ್ತಿದ್ದು ಶಿಕ್ಷಣದೊಂದಿಗೆ ಸ್ವಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಸಮಾಜದಲ್ಲಿ ಗುರುತಿಸಿ ಕೊಂಡು ಮುಖ್ಯ ವಾಹಿನಿಗೆ ತರಲು ಮುಂದಾಗಿದ್ದೇವೆ ಎಂದರು.

ಮಕ್ಕಳ ಕಿರು ನಾಟಕದಲ್ಲಿ ಜನಪ್ರತಿನಿಧಿಗಳ ಭರವಸೆ, ಆಮಿಷಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಲು ಹಾಗೂ ಕಡ್ಡಾಯವಾಗಿ ಮತದಾರರು ಮತದಾನ ಮಾಡಲು ಜಾಗೃತಿ ಮೂಡಿಸಿದರು. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಶೇಷ ಚೇತನ ವಿದ್ಯಾರ್ಥಿಗಳ ಪ್ರತಿಭೆಯ ಬಗ್ಗೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭ ಸೇವಾ ಮನೋಭಾವದ ಮೂಲಕ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡು ವಿಶೇಷಚೇತನರ ಶಾಲೆಯನ್ನು ನಡೆಸುತ್ತಿರುವ ಚೆಶೈರ್ ಹೋಮ್ ವಿಶೇಷ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚಂಗಪ್ಪ ಅವರಿಗೆ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯಲ್ಲಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಲಭಿಸಿರುವ ಹಿನ್ನೆಲೆ ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ವಿಶೇಷ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ಪುನೀತ ರಾಮಸ್ವಾಮಿ, ಕಾರ್ಯದರ್ಶಿ ಅಶಾ ಸುಬ್ಬಯ್ಯ, ಖಜಾಂಚಿ ಡಾ. ಎ.ಸಿ. ಗಣಪತಿ, ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಡೋಮಿ ರೋಜರಿಯೋ, ವಿಶೇಷಚೇತನ ಶಾಲಾ ಮುಖ್ಯ ಶಿಕ್ಷಕ ಶಿವರಾಜು, ಪ್ರಮುಖರಾದ ಡಾ. ಜಗದೀಶ್, ಡಾ. ಸುನೀಲ್, ಶಾಲಾ ಶಿಕ್ಷಕರಾದ ಸಂಸೀರಾ, ಶಾಯಿನ್, ಭವ್ಯ, ಡೊಮಿನೋಸ್ ಸಂಘದ ಅಧ್ಯಕ್ಷ ಶೌಕತ್ ಸೇರಿದಂತೆ ಪೋಷಕರು ಹಾಜರಿದ್ದರು.

- ಪುತ್ತಂ ಪ್ರದೀಪ್