ಶನಿವಾರಸAತೆ, ಮಾ. ೨೯: ರಾಜ್ಯ ಸರ್ಕಾರ ಅಲ್ಪಸಂಖ್ಯಾತ ವರ್ಗಕ್ಕೆ ಹಾಲಿ ಇದ್ದ ಶೇ. ೪ರ ಮೀಸಲಾತಿಯನ್ನು ಶೇ. ೨ಕ್ಕೆ ಇಳಿಸಿರುವುದು ನಮ್ಮ ಸಮುದಾಯದವರಿಗೆ ತುಂಬಾ ನೋವು ಉಂಟು ಮಾಡಿದ್ದು ಸರ್ಕಾರದ ಈ ಕ್ರಮ ಖಂಡನೀಯ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಶಾಹಿದ್ ಖಾನ್ ಹೇಳಿದರು. ಅವರು ಮಂಗಳವಾರ ಶನಿವಾರಸಂತೆಯ ಪ್ರೆಸ್ಕ್ಲಬ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರ ವಿಶೇಷವಾಗಿ ಅಲ್ಪ ಸಂಖ್ಯಾತ ವರ್ಗಕ್ಕೆ ಇದ್ದ ಶೇ. ೪ರ ಮೀಸಲಾತಿಯನ್ನು ರದ್ದುಪಡಿಸಿ ಶೇ. ೨ಕ್ಕೆ ಇಳಿಸಿರುವುದು ಸರಿಯಲ್ಲ. ಇತರೆ ಅಲ್ಪ ಸಂಖ್ಯಾತ ವರ್ಗದವರಿಗೆ ಮೀಸಲಾತಿ ಪ್ರಮಾಣಪತ್ರವನ್ನು ರದ್ದು ಪಡಿಸದಿರುವುದು ಮುಸ್ಲಿಂ ಸಮುದಾಯದವರಿಗೆ ಅಡ್ಡಿಯೇನಿಲ್ಲ. ಆದರೆ, ಮುಸ್ಲಿಂ ಸಮುದಾಯದವರಿಗಿದ್ದ ಮೀಸಲಾತಿಯನ್ನು ರದ್ದುಪಡಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಈ ಹಿಂದೆ ಅಲ್ಪ ಸಂಖ್ಯಾತ ಮುಸ್ಲಿಂ ವರ್ಗಕ್ಕೆ ಹಾಲಿ ಇದ್ದ ಮೀಸಲಾತಿಯನ್ನು ಕೇಳುವುದು ನಮ್ಮ ಹಕ್ಕು. ಜನಸಂಖ್ಯೆ ಆಧಾರದ ಮೇಲೆ ಮುಸ್ಲಿಂ ವರ್ಗಕ್ಕೆ ಹಿಂದೆ ಇದ್ದ ಶೇ. ೪ರ ಮೀಸಲಾತಿ ಜತೆಗೆ ಇನ್ನೂ ಶೇ. ೬ ಸೇರಿಸಿ ಒಟ್ಟು ಶೇ. ೧೦ರ ಮೀಸಲಾತಿಯನ್ನು ನೀಡುವಂತೆ ಹಾಗೂ ಮುಸ್ಲಿಂ ಜನಾಂಗದವರು ೨ಬಿ ಯಲ್ಲೇ ಮೀಸಲಾತಿ ಪಡೆದುಕೊಳ್ಳುವಂತೆ ಈ ಮೂಲಕ ಸರ್ಕಾರವನ್ನು ಆಗ್ರಹಿಸಿದರು.
ದುಂಡಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಬಿ. ಅಬ್ಬಾಸ್ ಮಾತನಾಡಿ, ಮುಸ್ಲಿಂ ವರ್ಗಕ್ಕೆ ಇದ್ದ ಶೇ. ೪ರ ಮೀಸಲಾತಿಯನ್ನು ಸರ್ಕಾರ ರದ್ದುಪಡಿಸಿ ಶೇ. ೨ಕ್ಕೆ ಇಳಿಸಿರುವುದರಿಂದ ಮುಸ್ಲಿಂ ಸಮುದಾಯದವರು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ವಂಚಿತರಾಗುತ್ತಾರೆ. ಸರ್ಕಾರ ಈವರೆಗೂ ಮುಸ್ಲಿಂ ವರ್ಗಕ್ಕೆ ಪ್ರತ್ಯೇಕವಾಗಿ ಯಾವುದೇ ಮೀಸಲಾತಿಯನ್ನು ನೀಡಿರುವುದಿಲ್ಲ ಎಂದರು.
ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಭಾರತಿ ವಿದ್ಯಾಸಂಸ್ಥೆ ನಿರ್ದೇಶಕ ಮಹಮ್ಮದ್ ಪಾಶ ಮಾತನಾಡಿ, ರಾಜ್ಯ ಸರ್ಕಾರ ಹಾಲಿ ಇದ್ದ ಮೀಸಲಾತಿಯನ್ನು ರದ್ದು ಪಡಿಸಿ ಶೇ.೨ ಕ್ಕೆ ಇಳಿಸಿರುವುದರಿಂದ ಮುಸ್ಲಿಂ ಸಮುದಾಯದ ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗವಕಾಶ ಪಡೆದುಕೊಳ್ಳಲು ಇನ್ನಿತರ ಸೌಲಭ್ಯ ಪಡೆದುಕೊಳ್ಳಲು ತೊಂದರೆಯಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆಸೀಫ್ ಅಹಮ್ಮದ್, ಮಹಮ್ಮದ್ ರಫೀಕ್ ಹಾಜರಿದ್ದರು.