ಮೆಟ್ಟಿಲುಬಾವಿ ಕುಸಿದು ೧೩ ಮಂದಿ ಸಾವು
ಮಧ್ಯಪ್ರದೇಶ, ಮಾ. ೩೦: ಶ್ರೀರಾಮ ನವಮಿ ಆಚರಣೆ ವೇಳೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಇಂದೋರ್‌ನ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದ ಪರಿಣಾಮ ೧೩ ಮಂದಿ ಸಾವನ್ನಪ್ಪಿದ್ದಾರೆ. ರಾಮನವಮಿ ಅಂಗವಾಗಿ ಹೆಚ್ಚಿನ ಜನ ಸೇರಿದ್ದ ಹಿನ್ನೆಲೆ ಬಾವಿಯ ಮೇಲ್ಭಾಗ ಕುಸಿದಿದೆ. ಈ ಭಾಗದಲ್ಲಿ ದೇವಾಲಯವಿತ್ತು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ. ೪೦ ಅಡಿ ಆಳದ ಬಾವಿ ಇದಾಗಿದ್ದು, ಈವರೆಗಿನ ಮಾಹಿತಿಯ ಪ್ರಕಾರ, ೧೮ ಮಂದಿ ಭಕ್ತಾದಿಗಳು ಬಾವಿಯ ಒಳಗೆ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ. ಇದೊಂದು ದುರದೃಷ್ಟಕರ ಘಟನೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಜನರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಗೌರಿಶಂಕರ್ ಅನರ್ಹತೆ ತೀರ್ಪಿಗೆ ಮಧ್ಯಂತರ ತಡೆ
ಬೆಂಗಳೂರು, ಮಾ. ೩೦: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಅನರ್ಹತೆ ಆದೇಶಕ್ಕೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಒಂದು ತಿಂಗಳ ಕಾಲ ಆದೇಶಕ್ಕೆ ತಡೆ ನೀಡಿದೆ. ಹೈಕೋರ್ಟ್ ನೀಡಿದ ಒಂದು ತಿಂಗಳ ಅವಧಿಯಲ್ಲಿ ಗೌರಿಶಂಕರ್ ಅವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ ಈಗ ಹೈಕೋರ್ಟ್ ನೀಡಿರುವ ತೀರ್ಪಿಗೆ ತಡೆ ಪಡೆಯಬೇಕು. ಇಲ್ಲವಾದರೆ ಅನರ್ಹ ಭೀತಿ ಎದುರಾಗುತ್ತದೆ. ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್ ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಸುರೇಶ್ ಗೌಡರ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಸುದೀರ್ಘ ವಾದ ಮಂಡಿಸಿದ್ದರು. ತೀರ್ಪು ಹೊರಬೀಳುತ್ತಲೇ, ಗೌರಿಶಂಕರ್ ಪರ ವಕೀಲ ಆರ್. ಹೇಮಂತ ರಾಜ್, ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತೀರ್ಪಿಗೆ ತಡೆ ನೀಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಪೀಠ, ೩೦ ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ. ಆಯ್ಕೆಯನ್ನು ಹೈಕೋರ್ಟ್ ಅನೂರ್ಜಿತಗೊಳಿಸಿರುವ ಕಾರಣ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಗೌರಿಶಂಕರ್ ಅವರನ್ನು ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬಹುದು.
ರಾಹುಲ್ ವಿರುದ್ಧ ಬ್ರಿಟನ್‌ನಲ್ಲಿ ದೂರು ದಾಖಲಿಸುವ ಎಚ್ಚರಿಕೆ
ಲಂಡನ್, ಮಾ. ೩೦: ಮೋದಿ ಉಪನಾಮ ವಿವಾದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು ಅಲ್ಲದೆ ಬ್ರಿಟನ್ ಕೋರ್ಟ್ನಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ‘ಮೋದಿ ಉಪನಾಮ' ಮತ್ತು ಮೋದಿ ಉಪನಾಮದವರು ಪಲಾಯನ ವಾದಿಗಳು ಎಂದು ಕರೆದಿದ್ದಕ್ಕಾಗಿ ಬ್ರಿಟಿಷ್ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಹೇಳಿದರು. ೨೦೧೯ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ೫೯,೦೦೦ ಕೋಟಿ ರೂಪಾಯಿ ಒಪ್ಪಂದದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ವೇಳೆ ‘ಮೋದಿ ಉಪನಾಮ' ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದರು. ರಾಹುಲ್ ಗಾಂಧಿ ಎಲ್ಲ ಕಳ್ಳರಿಗೂ ಮೋದಿ ಎಂಬ ಒಂದೇ ಉಪನಾಮ ಇರುವುದು ಹೇಗೆ ಎಂದು ಪ್ರಶ್ನಿಸಿದ್ದರು.
ದೈವ ನರ್ತನ ವೇಳೆ ಸಾವು
ಕಡಬ, ಮಾ. ೩೦: ದೈವ ನರ್ತನ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲದ ಮೂಲಂಗೀರಿ ನಿವಾಸಿ ಕಾಂತು ಅಜಿಲ (ಬಾಬು) ಎಂಬವರೇ ಮೃತಪಟ್ಟ ವ್ಯಕ್ತಿ. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಕಟ್ಟಿಗೆ ಸಂಬAಧಿಸಿದAತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ತಾ. ೩೦ ರಂದು ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬAಧಿಸಿದ ನೇಮೋತ್ಸವ ನಡೆಯುತ್ತಿತ್ತು. ದೈವ ನರ್ತನ ನಡೆಯುತ್ತಿದ್ದಾಗಲೇ ಕಾಂತು ಅಜಿಲ ಅವರು ಕುಸಿದು ಬಿದ್ದಿದ್ದಾರೆ. ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರೂ ಫಲ ನೀಡಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಹೃದಯಾಘಾತಕ್ಕೆ ಒಳಗಾಗಿರಬಹುದೆಂದು ಅಂದಾಜಿಸಲಾಗಿದೆ.
ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ
ತ್ರಿಪುರ, ಮಾ. ೩೦: ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದು ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ. ಕಮ್ಯುನಿಸ್ಟ್ ಪಕ್ಷಗಳ ಭದ್ರಕೋಟೆಯಾಗಿರುವ ಈ ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿರುವ ಬಿಜೆಪಿ ಶಾಸಕರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವಿಧಾನಸಭೆ ಅಧಿವೇಶನದ ವೇಳೆ ಶಾಸಕರು ಸದನದಲ್ಲಿ ಕುರ್ಚಿ ಮೇಲೆ ಕುಳಿತು ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ತ್ರಿಪುರಾದ ಬಾಗ್‌ಬಾಸಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ತಮ್ಮ ಆಸನದಲ್ಲಿ ಕುಳಿತು ಮೊಬೈಲ್ ಫೋನ್‌ನಲ್ಲಿ ವೀಡಿಯೋ ವೀಕ್ಷಿಸುತ್ತಿರುವುದು ವೈರಲ್ ಆದ ವೀಡಿಯೋದಲ್ಲಿ ಕಂಡುಬAದಿದೆ.
ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು, ಮಾ. ೩೦: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ, ೧೫ ವರ್ಷದ ಅಧ್ವೆöÊತ್ ಶೆಟ್ಟಿ ಪರೀಕ್ಷೆಯ ಒತ್ತಡದಿಂದಾಗಿ ನದಿಗೆ ಹಾರಿದ್ದಾನೆ ಎಂದು ತಿಳಿದುಬಂದಿದೆ. ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಗುಂಡಿಮಜಲು ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಪೊಲೀಸರ ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯು ಬುಧವಾರ ಸಂಜೆ ನಾಪತ್ತೆಯಾಗಿದ್ದ. ಪೋಷಕರು ಮತ್ತು ಸಂಬAಧಿಕರು ರಾತ್ರಿಯಿಡೀ ಆತನಿಗಾಗಿ ಹುಡುಕಾಡಿದರು. ಆದರೆ, ಬಾಲಕ ಪತ್ತೆಯಾಗಿರಲಿಲ್ಲ. ಇಂದು ಬೆಳಿಗ್ಗೆ ನಾಕೂರು ಗಯಾ ಪ್ರದೇಶದ ಬಳಿ ಕುಮಾರಧಾರಾ ನದಿಯ ದಡದಲ್ಲಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ಪತ್ತೆಯಾಗಿದೆ. ನಂತರ, ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ನದಿಯಲ್ಲಿ ಆತನ ಶವಕ್ಕಾಗಿ ಹುಡುಕಾಟ ನಡೆಸಿ ಅದನ್ನು ಹೊರತೆಗೆದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಬೌದ್ಧ ಧರ್ಮದ ಮುಂದಿನ ಆಧ್ಯಾತ್ಮಿಕ ನಾಯಕ ೮ ವರ್ಷದ ಬಾಲಕ?
ಬೆಂಗಳೂರು, ಮಾ. ೩೦: ಮಾರ್ಚ್ ೮ ರಂದು ಧರ್ಮಶಾಲಾದಲ್ಲಿ ನಡೆದ ದೀಕ್ಷಾ ಸಮಾರಂಭದಲ್ಲಿ ದಲೈಲಾಮಾ ಅವರಿಂದ ೧೦ನೇ ಖಲ್ಖಾ ಜೆಟ್ಸನ್ ದಂಪಾ ರಿಂಪೋಚೆ ಎಂದು ಘೋಷಿಸಲ್ಪಟ್ಟ ಅಮೇರಿಕಾ ಮೂಲದ ೮ ವರ್ಷದ ಮಂಗೋಲಿಯನ್ ಬಾಲಕ ಸನ್ಯಾಸತ್ವ ಅಧ್ಯಯನಕ್ಕಾಗಿ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. ಸನ್ಯಾಸತ್ವ ಅಧ್ಯಯನಕ್ಕೆ ಭಾರತದಲ್ಲಿ ಉತ್ತಮ ಸೌಕರ್ಯಗಳಿಂದ ಅಧ್ಯಾತ್ಮಿಕ ಅಧ್ಯಯನಕ್ಕಾಗಿ ಬಾಲಕ ಭಾರತಕ್ಕೆ ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಂಬತ್ತನೇ ಖಲ್ಖಾ ಜೆಟ್ಸುನ್ ದಂಪಾ ಶಿಮ್ಲಾದ ಜೊನಾಂಗ್ ಟಕ್ಟೆನ್ ಫುಂಟ್ಸಾಕ್ ಚೋಲಿಂಗ್ ಬೌದ್ಧ ಮಠದೊಂದಿಗೆ ಸಂಯೋಜಿತವಾಗಿದೆ. ಜೋನಾಂಗ್ ಮಠದಲ್ಲಿರುವ ಕೆಲವು ಸನ್ಯಾಸಿಗಳು ಕರ್ನಾಟಕದ ಮುಂಡಗೋಡಿನ ಡ್ರೆಪುಂಗ್ ಮಠದಲ್ಲಿ ಅಧ್ಯಯನ ಮಾಡುತ್ತಾರೆ. ಬಾಲಕ ಇವರಿಂದ ಅಧ್ಯಯನದ ನೆರವು ಪಡೆಯಲಿದ್ದಾರೆಂದು ಮೂಲಗಳು ತಿಳಿಸಿವೆ. ಧರ್ಮಶಾಲಾದಲ್ಲಿ ಮಾರ್ಚ್ ೮ ರಂದು ನಡೆದ ಸಮಾರಂಭದಲ್ಲಿ ಎಂಟು ವರ್ಷದ ಬಾಲಕನಿಗೆ ದಲೈ ಲಾಮಾ ದೀಕ್ಷೆ ನೀಡಿದ್ದು, ಬಾಲಕನೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ.