ನಿಸರ್ಗ ಸಿರಿಗೆ ಖ್ಯಾತಿವೆತ್ತ ಕೊಡಗು, ಹುಲಿಯ ಹಾಲನ್ನು ಸವಿದು ಮೆದ್ದವರ ನಾಡು ಎಂದೇ ಜನಜನಿತ. ಈ ಪುಟ್ಟ ಜಿಲ್ಲೆ ದೇಶದ ರಕ್ಷಣಾ ಪಡೆಗೆ ಅಸಂಖ್ಯ ವೀರರನ್ನು ನೀಡಿದ್ದು, ಇಲ್ಲಿನ ವೀರ ಯೋಧರು ಇಂದೂ ತಾಯ್ನಾಡಿನ ರಕ್ಷಣೆಗೆ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಅಮರ ಯೋಧರಾದ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ (ಚಿಮ್ಮ) ಮತ್ತು ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಕೊಡಗಿನವರ ದಿಟ್ಟತನವನ್ನು ಜಗದಗಲ ಪರಿಚಯಿಸಿದ ಮೇರು ಜೀವಿಗಳು.

ದೇಹವಳಿದರೂ ಕೀರ್ತಿ ಅಚಂದ್ರಾರ್ಕವಾದ ಈ ವೀರ ಸೇನಾನಿ ಗಳ ಪ್ರತಿಮೆಗಳು ಕೊಡಗಿಗೆ ಆಗಮಿಸುವ ಪ್ರತಿಯೊಬ್ಬರಿಗೂ ನಾಡಿನ ಜನರ ಶೌರ್ಯ ಪರಿಚಯಿಸುವಲ್ಲಿ, ರಾಷ್ಟçಪ್ರೇಮ ಮೆರೆಯುವಲ್ಲಿ ಯಶಸ್ವಿಯಾಗಿ, ವೀರ ಯೋಧರ ಸವಿನೆನಪು ಮೆಲುಕು ಹಾಕುವಂತೆ ಮಾಡುತ್ತವೆ.

ಸ್ವತಂತ್ರ ಭಾರತದ ಸೇನಾ ದಂಡ ನಾಯಕರಾಗಿ, ಸೈನಿಕರ ನೆಚ್ಚಿನ ಸೇನಾನಿಯಾಗಿ, ಸಾಹಸ ಮೆರೆದ ಜನರಲ್ ಕೆ. ಎಸ್. ತಿಮ್ಮಯ್ಯ ೩೧ ಮಾರ್ಚ್ ೧೯೦೬ ರಂದು ಕೊಡಗಿನ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಕೊಡಂದೇರ ಕುಟುಂಬದ ತಿಮ್ಮಯ್ಯ ಮತ್ತು ಸೀತಮ್ಮ ದಂಪತಿಗಳ ಪುತ್ರನಾಗಿ ಜನಿಸಿದರು. ಅವರ ಮೂಲ ಹೆಸರು ಸುಬ್ಬಯ್ಯ. ಅವರ ಹೆಸರನ್ನು ಶಾಲಾ ಪಟ್ಟಿಯಲ್ಲಿ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಎಂದು ದಾಖಲಿಸಲಾಯಿತು. ಅಂದಿನಿAದ ಸುಬ್ಬಯ್ಯ ಎಂಬ ಹೆಸರಿನ ಈ ಮೇರು ವ್ಯಕ್ತಿತ್ವ ಕೆ. ಎಸ್. ತಿಮ್ಮಯ್ಯ ಎಂದು ಜನಜನಿತವಾಯಿತು.

ಕೊನೂರಿನ ಸೈಂಟ್ ಜೋಸೆಫ್ ಮತ್ತು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಿಮ್ಮಯ್ಯ ಹಾಕಿ, ಕ್ರಿಕೆಟ್, ಫುಟ್ಭಾಲ್, ಟೆನಿಸ್, ಸ್ಕಾ÷್ವಸ್ ಆಟಗಳಲ್ಲಿ ಪರಿಣತರಾಗಿದ್ದರು. ಉತ್ತಮ ದೇಹದಾರ್ಢ್ಯ ಹೊಂದಿದ್ದ ‘ಟಿಮ್ಮಿ’ ಬಾಲ್ಯದಲ್ಲಿನ ತುಂಟತನದಿAದ ಸೂಜಿಗಲ್ಲಿನಂತೆ ಎಲ್ಲರಿಂದ ಅಕರ್ಷಿತರಾಗಿದ್ದರು.

ತಿಮ್ಮಯ್ಯ ಮತ್ತು ಸಹೋದರ ಪೊನ್ನಪ್ಪ ಬಿಷಪ್ ಕಾಟನ್ ಶಾಲೆಯಲ್ಲಿ ದಾಖಲಾಗಿ ತರಗತಿಯಲ್ಲಿ ಕುಳಿತಿದ್ದ ಸಂದರ್ಭ, ದಢೂತಿಯಾಗಿದ್ದ ಆಂಗ್ಲೋ ಇಂಡಿಯನ್ ಸಹಪಾಟಿಯೊಬ್ಬ ‘ಅಯ್ಯೋ’ ಈ ಶಾಲೆಗೆ ಏನು ಗತಿ ಬಂತೋ ? ಇಲ್ಲಿ ನಿಗ್ರೋಗಳನ್ನೂ ಸೇರಿಸುತ್ತಾರಲ್ಲ, ಎಂದು ಕಿಚಾಯಿಸಿದ್ದ. ಆತನ ಜೊತೆಗಾರರೂ ಇದಕ್ಕೆ ದನಿಗೂಡಿಸಿದ್ದರು.

ಈ ಶಬ್ದ ಕಿವಿಗೆ ಬಿದ್ದಿದ್ದೇ ತಡ, ತಿಮ್ಮಯ್ಯ ಪೊನ್ನಪ್ಪ ಸೋದರರು ಆ ಆಂಗ್ಲ ಹುಡುಗರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ ತಮ್ಮ ಆತ್ಮಗೌರವ ಮೆರೆದು, ಕೊಡಗಿನವರ ಶೌರ್ಯದೊಂದಿಗೆ ಅಧ್ಯಾಪಕರ ಮನಗೆದ್ದಿದ್ದರು. ‘‘ನನ್ನ ಸಂಸಾರದವರಲ್ಲದೆ ಇತರರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುವುದನ್ನು ಕೇಳಿ ಸುಮ್ಮನಿರುವ ಜಾಯಮಾನ ನನ್ನದಲ್ಲ’’ ಎಂಬ ನಿಲುವನ್ನು ತಿಮ್ಮಯ್ಯ ತಮ್ಮ ಜೀವನದುದ್ದಕ್ಕೂ ಪರಿಪಾಲಿಸಿದರು. ಬಾಲ್ಯದಲ್ಲಿ ಡಾನ್ಸ್ ತರಬೇತಿಯನ್ನೂ ಪಡೆದಿದ್ದರು.

ಶಿಕ್ಷಣದಲ್ಲೂ ಮುಂದು ತಮ್ಮ ೧೬ನೇ ವಯಸ್ಸಿನಲ್ಲೇ ಆಗ ತಾನೇ ತೆರೆಯಲ್ಪಟ್ಟಿದ್ದ ರಾಯಲ್ ಇಂಡಿಯನ್ ಮಿಲಿಟರಿ ಶಾಲೆಗೆ ಪ್ರವೇಶ ಪಡೆದ ಅವರು ಇಂಗ್ಲೆAಡಿನ ಸ್ಯಾಂಡ್ ಹರ್ಸ್ಟ್ ಕಾಲೇಜಿನಲ್ಲಿ ಸಯನ್ಯದ ಹೆಚ್ಚಿನ ಶಿಕ್ಷಣ ಪಡೆದು, ಉನ್ನತಾಧಿಕಾರಿಗಳ ಪ್ರಶಂಸೆಯೊAದಿಗೆ ಭಾರತಕ್ಕೆ ಹಿಂದಿರುಗಿ ಸೇನೆಯಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಪದವಿಯೊಂದಿಗೆ ಬೆಂಗಳೂರಿನ ಹೈಲೆಂಡ್ ಲೈಟ್ ಇನ್‌ಫೆಂಟ್ರಿ ದಳಕ್ಕೆ ಸೇರಿದರು. ನಂತರ ಹೈದರಾಬಾದ್‌ನ ರೆಜಿಮೆಂಟ್ ಮತ್ತು ತದನಂತರ ಅಲಹಾಬಾದ್‌ನಲ್ಲಿ ಕರ್ತವ್ಯ ನಿರ್ವಹಿಸಿದರು.

‘ಟಿಮ್ಮಿ’ ಕ್ವೆಟ್ಟಾದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೋದಂಡ ನೀನಾ ಕಾರ್ಯಪ್ಪ ಅವರೊಂದಗೆ ವಿವಾಹ. ಅವರ ಪತ್ನಿ ನೀನಾ ಉತ್ತಮ ನÀÈತ್ಯಗಾತಿ. ಕೈಟ್ಟಾದಲ್ಲಿ ಭಯಾನಕ ಭೂಕಂಪದಿAದ ೬೦ ಸಾವಿರಕ್ಕೂ ಅಧಿಕ ಜನರು ಪ್ರಾಣತೆತ್ತ ಸಂದರ್ಭ ತಿಮ್ಮಯ್ಯ ಸಮರ್ಪಣಾಭಾವದೊಂದಿಗೆ ಜನರ ನೋವಿಗೆ ಸ್ಪಂದಿಸಿದರು. ಆ ಸಂದರ್ಭದಲ್ಲಿ ಅವರ ಪತ್ನಿ ಪ್ರಾಣವನ್ನೂ ಲೆಕ್ಕಿಸದೆ ಸಲ್ಲಿಸಿದ ನಿಸ್ವಾರ್ಥ ಸೇವೆ ಮೆಚ್ಚಿದ ಬ್ರಿಟಿಷ್ ಸರಕಾರ ‘ಕೈಸರ್-ಎ-ಹಿಂದ್’ ಬಿರುದು ನೀಡಿ ನೀನಾ ಅವರನ್ನು ಗೌರವಿಸಿತು. ನಂತರ ಕ್ಯಾಪ್ಟನ್ ಪದವಿಗೇರಿದ ತಿಮ್ಮಯ್ಯ ಅವರಿಗೆ ದ್ವಿತೀಯ ವಿಶ್ವ ಮಹಾಯುದ್ಧ ಸಂದರ್ಭ ಇನ್‌ಫ್ಯಾಂಟ್ರಿ ಬ್ರಿಗೇಡ್ ಒಂದನ್ನು ಕಮಾಂಡ್ ಮಾಡಿದ ಪ್ರಥಮ ಭಾರತೀಯನೆಂಬ ಹೆಗ್ಗಳಿಕೆ. ನಂತರ ಬ್ರಿಗೇಡಿಯರ್ ಪದವಿಗೇರಿದ ಅವರಿಗೆ ‘ಡಿಸ್ಟಿçಂಗ್ವಿಷ್ಡಿ ಸರ್ವಿಸ್ ಆರ್ಡರ್’ ಬಿರುದು ನೀಡಿ ಬ್ರಿಟಿಷ್ ಸರಕಾರದಿಂದ ಗೌರವ ಪ್ರಾಪ್ತಿ.

ದೇಶ ಸ್ವತಂತ್ರವಾಗಿ ಕೆಲವೇ ದಿನಗಳಲ್ಲಿ ಕಾಶ್ಮೀರದ ವಿಷಯವಾಗಿ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ಕಾಶ್ಮೀರ ಅಪಾಯದ ದವಡೆಯಲ್ಲಿತ್ತು. ಅಕ್ರಮಣಕಾರರು ನಾಡು ಕೊಳ್ಳೆ ಹೊಡೆದು ಹಳ್ಳಿಗಳನ್ನು ಸುಡುತ್ತಾ ರಣಭಯಂಕರ ಸನ್ನಿವೇಶ ಸೃಷ್ಟಿಸಿದ್ದರು.

ತಿಮ್ಮಯ್ಯ ಅವರನ್ನು ಒಂದು ವಿಭಾಗದ ಮುಖ್ಯಸ್ಥರಾಗಿ ನೇಮಿಸಿದ ಕೇಂದ್ರ ಸರಕಾರ ಕಾರ್ಯಪ್ಪ ಕಲ್ವಂತ್‌ಸಿAಗ್ ಮತ್ತು ತಿಮ್ಮಯ್ಯ ಅವರ ಮುಂದಾಳ್ತನದಲ್ಲಿ ಸೇನೆಯನ್ನು ಕಾಶ್ಮೀರಕ್ಕೆ ಕಳುಹಿಸಿತು. ಮೈಕೊರೆಯುತ್ತಿದ್ದ ಕಠಿಣ ಚಳಿಯ ನಡುವೆ ಯುದ್ಧಮಾಡಿ ಪಾಕ್ ಆಕ್ರಮಣಕ್ಕೆ ಬಲಿಯಾಗಿದ್ದ ಲಡಾಖ್ ಪ್ರದೇಶವನ್ನು ಭಾರತ ಇಳಿಸಿಕೊಳ್ಳುವಲ್ಲಿ, ಅಪ್ರತಿಮ ಶೌರ್ಯ ಮೆರೆದ ತಿಮ್ಮಯ್ಯ ಅವರನ್ನು ಕಾಶ್ಮೀರದ ಜನತೆ ವಿಧವಿಧವಾಗಿ ಕೊಂಡಾಡಿದರು. ‘ವಿ ವಾಂಟ್ ತಿಮ್ಮಯ್ಯಾಸ್ ಗವರ್ನ್ಮೆಂಟ್’ ಎಂದು ಅಲ್ಲಿನ ಜನರು ಹೇಳುವಷ್ಟರ ಮಟ್ಟಿಗೆ ‘ಕೊಡಗಿನ ಕಲಿ’ ಖ್ಯಾತಿವೆತ್ತಿದ್ದರು. ನಂತರ ಲೆಫ್ಟಿನೆಂಟ್ ಜನರಲ್ ಆಗಿ ಪಶ್ಚಿಮ ಕಮಾಂಡಿನ ನಾಯಕರಾದ ತಿಮ್ಮಯ್ಯ ಅವರನ್ನು ಕೊರಿಯಾದಲ್ಲಿ ಉದ್ಭವಿಸಿದ ಸಮಸ್ಯೆ ಬಗೆಹರಿಸಲು ವಿಶ್ವಸಂಸ್ಥೆ ನೇಮಿಸಿದ ಐದು ತಟಸ್ಥ ರಾಷ್ಟçಗಳ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಯಿತು. ಜಟಿಲ ಸಮಸ್ಯೆಯನ್ನು ತಾಳ್ಮೆಯಿಂದ ಪರಿಹರಿಸಿದ ತಿಮ್ಮಯ್ಯ, ತಮ್ಮ ಹೊಣೆಗಾರಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ‘ಕಬ್ಬಿಣದ ಬಲವಿರುವ ತೀರ್ಪುಗಾರ’ ಎಂದು ಅಮೇರಿಕನ್ನರಿಂದಲೂ, ಸೈನಿಕ ಖುಷಿ ಎಂದು ಗವರ್ನರ್ ಜನರಲ್ ರಾಜಾಜಿ ಅವರಿಂದಲೂ ತಿಮ್ಮಯ್ಯ, ಪ್ರಶಂಸೆಗೆ ಪಾತ್ರರಾದರು. ಕೊರಿಯಾದಲ್ಲಿ ತಿಮ್ಮಯ್ಯ ನಿರ್ವಹಿಸಿದ ಅಪ್ರತಿಮ ಸೇವೆಗೆ, ಭಾರತ ಸರಕಾರ ೧೯೫೪ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಸೇನಾ ವಲಯದಲ್ಲಿ ‘ಟಿಮ್ಮಿ’ ಎಂದೇ ಚಿರಪರಿಚಿತರಾಗಿದ್ದ ತಿಮ್ಮಯ್ಯ, ೮ ಮೇ ೧೯೫೭ರಂದು ಜನರಲ್ ನಾಗೇಶ್ ಅವರಿಂದ ಭಾರತ ಸೇನೆಯ ಪ್ರಧಾನ ದಂಡನಾಯಕರಾಗಿ ಅಧಿಕಾರ ವಹಿಸಿಕೊಂಡರು. ೧೯೬೦ರಲ್ಲಿ ಜನರಲ್ ತಿಮ್ಮಯ್ಯ ಅವರನ್ನು ಕೇಂದ್ರ ಸರಕಾರ ಭಾರತದ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರಾಗಿ ನೇಮಿಸಿತು. ಅದೇ ವರ್ಷ ನೇಪಾಳದ ರಾಜ, ತಿಮ್ಮಯ್ಯ ಅವರನ್ನು ಕಠ್ಮಂಡುವಿಗೆ ಆಹ್ವಾನಿಸಿ ಅವರನ್ನು ನೇಪಾಳದ ಗೌರವ ಸೇನಾನಿಯಾಗಿ ನೇಮಿಸಿ ಗೌರವಿಸಿದರು. ಜನರಲ್ ತಿಮ್ಮಯ್ಯ ಅವರಿಗಿಂತ ಮೊದಲು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಈ ಗೌರವ ಸಂದಿತ್ತು.

ಸೈನಿಕರ ಯೋಗ ಕ್ಷೇಮದ ಬಗ್ಗೆ ಅಪಾರ ಕಾಳಜಿವಹಿಸಿ, ಸೇನಾ ವಲಯದಲ್ಲಿ ಪ್ರತಿಯೋರ್ವರ ಮನಗೆದ್ದ ಅಪ್ರತಿಮ ಸಾಹಸಿ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ೧೯೬೧ರಲ್ಲಿ ಸೇವೆಯಿಂದ ನಿವೃತ್ತರಾದರು. ತಾವು ಕರ್ತವ್ಯದಲ್ಲಿದ್ದಾಗಲೇ ಕೇಂದ್ರ ಸರಕಾರಕ್ಕೆ ನೀಡಿದ್ದ ಕೆಲವು ಮಹತ್ತರ ಸಲಹೆಗಳನ್ನು ಅಂದಿನ ಆಡಳಿತಾರೂಢರು ನಿರ್ಲಕ್ಷಿಸಿದ್ದರಿಂದ, ಭಾರತ ಚೀನಾದೊಂದಿಗಿನ ಕಾಳಗದಲ್ಲಿ ಹಿನ್ನಡೆ ಅನುಭವಿಸಬೇಕಾಯಿತು.

ನಿವೃತ್ತರಾದ ನಂತರ ‘ಟಿಮ್ಮಿ’ ಕಾಫಿ ಬೆಳೆಗಾರರ ಸಂಘದ (ಉಪಾಸಿ) ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೬೪ರಲ್ಲಿ ಸೈಪ್ರಸ್ ದ್ವೀಪದಲ್ಲಿ ಗ್ರೀಕರು ಮತ್ತು ತುರ್ಕಿಯರ ನಡುವೆ ವೈಮನಸ್ಸು ಆರಂಭವಾದಾಗ, ದ್ವೀಪದಲ್ಲಿ ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ತನ್ನ ಸೇನಾ ಆಯೋಗವನ್ನು ಸೈಪ್ರಸ್‌ಗೆ ಕಳುಹಿಸಿತು. ಇದರ ಸೇನಾನಿಯಾಗಿ ನಿಯುಕ್ತರಾದ ತಿಮ್ಮಯ್ಯ ಅಲ್ಲಿ ಸಾಮರಸ್ಯ ಮೂಡಿಸಲು ಹೊಣೆಗಾರಿಕೆ, ಕಾರ್ಯನಿಷ್ಠೆ ಮೆರೆದರು. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸೈಪ್ರಸ್‌ನಲ್ಲಿ ಹೃದಯಾಘಾತದಿಂದ ನಿಧನರಾದರು. ಅದೃಷ್ಟವಂತನಾಗಿರುವುದೇ ಸಿಪಾಯಿಗೊಂದು ಭಾಗ್ಯ ಎನ್ನುತ್ತಿದ್ದ ತಿಮ್ಮಯ್ಯ ಅವರಿಗೆ ಯುದ್ಧ ಭೂಮಿಯಲ್ಲಿ ವೀರ ಮರಣವನ್ನಪ್ಪುವ ಅದಮ್ಯ ಬಯಕೆ ಇತ್ತು. ಸೈಪ್ರಸ್ ದೇಶ, ತಿಮ್ಮಯ್ಯ ಅವರಿಗೆ ಗೌರವ ಸೂಚಕವಾಗಿ ೬ ಜೂನ್ ೧೯೬೬ರಲ್ಲಿ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿತು. ಅದರಲ್ಲಿ ತಿಮ್ಮಯ್ಯ ಅವರ ಭಾವಚಿತ್ರವಿದೆ. ಇದೇ ರೀತಿ ಭಾರತ ಸರಕಾರ, ಈ ವರ್ಷ ಫೆಬ್ರವರಿ ೪ ರಂದು ತಿಮ್ಮಯ್ಯ ಅವರ ಗೌರವಾರ್ಥ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ತಿಮ್ಮಯ್ಯ ಅವರ ಸ್ನೇಹಮಯ ಮತ್ತು ಸಾಹಸಿ ವೃತ್ತಿ ಜೀವನದ ಕುರಿತು ಅವರೊಂದಿಗೆ ಸೇವೆ ಸಲ್ಲಿಸಿರುವ ಅಧಿಕಾರಿಗಳು ಮತ್ತು ಯೋಧರು ಸದಾ ಮುಕ್ತಕಂಠವಾಗಿ ಪ್ರಶಂಸಿಸಿದ್ದಾರೆ. ಅನೇಕ ಕೃತಿಗಳನ್ನೂ ಬರೆದಿದ್ದಾರೆ. ಜನರಲ್ ತಿಮ್ಮಯ್ಯ ನೀನಾ ದಂಪತಿಯ ಏಕೈಕ ಪುತ್ರಿ ಕೊಂಗೇಟಿರ ಮಿರೇಲ್ ಚಂಗಪ್ಪ ಈ ವರ್ಷ ಜನವರಿ ೧೪ ರಂದು ಬೆಂಗಳೂರಿನಲ್ಲಿ ನಿಧನರಾದರು. ಮಿರೇಲ್ ಅವರ ಪುತ್ರಿ ಹಾಗೂ ಜನರಲ್ ತಿಮ್ಮಯ್ಯ ಅವರ ಮೊಮ್ಮಗಳು, ಉತ್ತರಾಂಚಲ್‌ನಲ್ಲಿ ನೆಲೆಸಿರುವ ಅಮೃತಾ ಸಂತೋಷ್ ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಈ ವರ್ಷ ಮಾರ್ಚ್ ೯ ರಂದು ಭೇಟಿ ನೀಡಿದ್ದರು. ಜನರಲ್ ತಿಮ್ಮಯ್ಯ ಅವರ ಜನ್ಮದಿನವಾದ ಮಾರ್ಚ್ ೩೧ ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಈ ವೀರಸೇನಾನಿಯ ಪುತ್ಥಳಿ ಅನಾವರಣಗೊಳ್ಳುತ್ತಿದೆ. ದೇಶ ವಿದೇಶದಲ್ಲಿ ಖ್ಯಾತಿ ಮೆರೆದ ಸಾಹಸಿಗ ಜನರಲ್ ತಿಮ್ಮಯ್ಯ ಅವರ ನೆನಪು ದೇಶದ ಯುವಶಕ್ತಿಗೆ ಸದಾ ಸ್ಫೂರ್ತಿಯ ಚಿಲುಮೆ.

-ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ,

ಮೊ: ೯೮೪೫೪೯೯೧೧೨